
ಉಪ್ಪಿನಬೆಟಗೇರಿ: ಇಲ್ಲಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರದಲ್ಲಿ ರೈತರು ಹಗಲು, ರಾತ್ರಿ ಎನ್ನದೇ ಉದ್ದು ಮಾರಾಟ ಮಾಡಲು ಹರಸಾಹಸ ಪಡುತ್ತಿದ್ದಾರೆ.
ನೋಂದಣಿ ಮಾಡಿದ ರೈತರು ವಿಪರೀತ ಚಳಿಯನ್ನೂ ಲೆಕ್ಕಿಸದೇ ಖರೀದಿ ಕೇಂದ್ರದಲ್ಲಿ ಪಾಳಿ ಪ್ರಕಾರ ಟ್ರ‍್ಯಾಕ್ಟರ್‌ಗಳಲ್ಲಿ ಉದ್ದಿನ ಚೀಲಗಳನ್ನು ಮಾರಾಟಕ್ಕೆ ತರುತ್ತಿದ್ದಾರೆ. ಪಾಳಿ ಬಂದ ರೈತರಿಗೆ ಮುಂಚಿತವಾಗಿ ಖರೀದಿ ಕೇಂದ್ರದವರು ಕರೆ ಮಾಡಿ ತಿಳಿಸುತ್ತಾರೆ.
ಖರೀದಿ ಕೇಂದ್ರದಲ್ಲಿ 1,500 ಜನರು ನೋಂದಣಿ ಮಾಡಿಸಿದ್ದಾರೆ. ಅ.30ರಂದು ಖರೀದಿ ಪ್ರಕ್ರಿಯೆ ಆರಂಭಿಸಲಾಗಿದ್ದು, ಈವರೆಗೆ 650 ರೈತರು ಉದ್ದಿನ ಕಾಳು ಮಾರಾಟ ಮಾಡಿದ್ದಾರೆ. ಇನ್ನೂ 850ಕ್ಕೂ ಅಧಿಕ ರೈತರು ಮಾರಾಟ ಮಾಡಬೇಕಿದೆ.
ಡಿ.20ರ ವರೆಗೆ ಇದ್ದ ಮಾರಾಟ ಅವಕಾಶವನ್ನು 23ರ ವರೆಗೆ ವಿಸ್ತರಿಲಾಗಿದೆ. ಈವರೆಗೆ ನಡೆದಂತೆಯೇ ಖರೀದಿ ಪ್ರಕ್ರಿಯೆ ನಡೆದರೂ 23ರ ಒಳಗಾಗಿ ಎಲ್ಲ ರೈತರು ಕಾಳು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ. ಮುನ್ನೂರಕ್ಕೂ ಅಧಿಕ ರೈತರು ಬೆಂಬಲ ಬೆಲೆ ಯೋಜನೆಯ ಲಾಭ ಪಡೆಯುವಲ್ಲಿ ವಂಚಿತರಾಗುವ ಆತಂಕ ಎದುರಾಗಿದೆ. ಹೀಗಾಗಿ ಅವಧಿ ಇನ್ನಷ್ಟು ವಿಸ್ತರಿಸಿ, ನೋಂದಣಿ ಮಾಡಿದ ಪ್ರತಿ ರೈತರಿಂದಲೂ ಕಾಳು ಖರೀದಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
‘ಉಳಿದ ನಾಲ್ಕು ದಿನಗಳಲ್ಲಿ ಎಲ್ಲ ರೈತರಿಂದ ಕಾಳು ಖರೀದಿ ಮಾಡುತ್ತಾರೆಯೇ ಎಂಬ ಚಿಂತೆ ಕಾಡುತ್ತಿದೆ’ ಎಂದು ಹನುಮನಕೊಪ್ಪದ ರೈತ ಸುದರ್ಶನ ಅಷ್ಟಗಿ ತಿಳಿಸಿದರು.
‘ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತೆರೆಯಲಾದ ಖರೀದಿ ಕೇಂದ್ರದಲ್ಲಿ ಉದ್ದು ಮಾರಾಟ ಮಾಡಿ ತಿಂಗಳು ಕಳೆದಿದೆ. ಈವರೆಗೂ ಬ್ಯಾಂಕ್ ಖಾತೆಗೆ ಹಣ ಜಮೆಯಾಗಿಲ್ಲ’ ಎಂದು ರೈತ ಬಸವರಾಜ ಹೆಬ್ಬಳ್ಳಿ ಬೇಸರ ವ್ಯಕ್ತಪಡಿಸಿದರು.
ದಿನಕ್ಕೆ 25–30 ರೈತರಂತೆ ಆರಂಭದ ದಿನದಿಂದ ಈವರೆಗೆ 650 ಜನರು ಉದ್ದಿನ ಕಾಳು ಮಾರಾಟ ಮಾಡಿದ್ದಾರೆ. ಇನ್ನೂ 850 ರೈತರಿಂದ ಖರೀದಿಸಬೇಕಿದೆಸಲೀಮ್ ಅಹ್ಮದ್ ಖತೀಬ, ಪಿಕೆಪಿಎಸ್ ಸಿಬ್ಬಂದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.