ADVERTISEMENT

ಬಿಆರ್‌ಟಿಎಸ್‌ಗೆ ರಾಷ್ಟ್ರೀಯ ಪ್ರಶಸ್ತಿ!

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 17:10 IST
Last Updated 12 ನವೆಂಬರ್ 2019, 17:10 IST

ಹುಬ್ಬಳ್ಳಿ: ಅವಳಿನಗರದ ಮಧ್ಯೆ ತ್ವರಿತ ಸಂಪರ್ಕ ಕಲ್ಪಿಸುವ ಬಿಆರ್‌ಟಿಎಸ್ ರಾಷ್ಟ್ರ ಮಟ್ಟದ ‘ಉತ್ತಮ ನಗರ ಸಮೂಹ ಸಾರಿಗೆ ಯೋಜನೆ’ ಪ್ರಶಸ್ತಿಗೆ ಪಾತ್ರವಾಗಿದೆ.

ಕೇಂದ್ರಿಯ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು, ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಂಡಿರುವ ಉತ್ತಮ ನಗರ ಸಮೂಹ ಸಾರಿಗೆ ವ್ಯವಸ್ಥೆಯ ಬಗ್ಗೆ ಸಮೀಕ್ಷೆ ನಡೆಸಿ, ಅದರಲ್ಲಿ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆ ಉತ್ತಮ ನಗರ ಸಮೂಹ ಸಾರಿಗೆ ಯೋಜನೆ ಎಂದು ಪರಿಗಣಿಸಿ ಈ ಪ್ರಶಸ್ತಿ ಘೋಷಿಸಿದೆ.

ದೇಶದ 10 ನಗರಗಳ ಮೆಟ್ರೊ ಹಾಗೂ 9 ನಗರಗಳ ಬಿಆರ್‌ಟಿಎಸ್ ಯೋಜನೆಗಳನ್ನು ಪ್ರಶಸ್ತಿಯ ಆಯ್ಕೆಗಾಗಿ ಸಮೀಕ್ಷೆ ಮಾಡಲಾಗಿತ್ತು. ಈ ಪೈಕಿ ಬಿಆರ್‌ಟಿಎಸ್‌ನ ಮೂಲಸೌಕರ್ಯ, ಬಸ್ ಕಾರ್ಯಾಚರಣೆ, ನಿಲ್ದಾಣಗಳು, ಸಂಚಾರ ಸೂಚನೆಗಳ ವ್ಯವಸ್ಥೆ, ಪಾದಚಾರಿ ಮಾರ್ಗ, ಮೇಲ್ಸೇತುವೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇದೇ 17ರಂದು ಲಕ್ನೊದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

7 ವರ್ಷವಾದರೂ ಪೂರ್ಣಗೊಂಡಿಲ್ಲ:

ತೆವಳುತ್ತಾ ಸಾಗಿರುವ ಬಿಆರ್‌ಟಿಎಸ್ ಕಾಮಗಾರಿ ಏಳು ವರ್ಷವಾದರೂ ಪೂರ್ಣಗೊಂಡಿಲ್ಲ. ಆದರೂ, ಒಂದು ವರ್ಷದಿಂದ ಸಂಚಾರ ಆರಂಭಿಸಿದೆ. ಅಲ್ಲದೆ, ತಿಂಗಳಿಗೆ ಅಂದಾಜು ₹1 ಕೋಟಿ ನಷ್ಟ ಅನುಭವಿಸುತ್ತಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್. ಪಾಟೀಲ ಇತ್ತೀಚೆಗೆ ಹೇಳಿದ್ದರು.

ಮಳೆ ಬಂದರೆ ಧಾರವಾಡದ ಟೋಲ್‌ನಾಕಾ, ಹುಬ್ಬಳ್ಳಿಯ ಹೊಸೂರ ಸೇರಿದಂತೆ ಹಲವೆಡೆ ಬಿಆರ್‌ಟಿಎಸ್‌ ರಸ್ತೆ ಹಳ್ಳವಾಗಿ ಮಾರ್ಪಡುತ್ತದೆ. ರಸ್ತೆ ಮಧ್ಯೆ ಬಸ್ ತಂಗುದಾಣ ನಿರ್ಮಿಸಿರುವುದರಿಂದ, ಪ್ರಯಾಣಿಕರು ಜೀವ ಕೈಯಲ್ಲಿಡಿದುಕೊಂಡು ರಸ್ತೆ ದಾಟಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.