ADVERTISEMENT

ಧಾರವಾಡ | ನಿರ್ವಹಣೆ ಕೊರತೆ; ಸೊರಗಿದ ಚಿಗರಿ ಬಸ್‌ ನಿಲ್ದಾಣ

ಅವಳಿನಗರದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆ

ಬಿ.ಜೆ.ಧನ್ಯಪ್ರಸಾದ್
Published 13 ಅಕ್ಟೋಬರ್ 2025, 4:25 IST
Last Updated 13 ಅಕ್ಟೋಬರ್ 2025, 4:25 IST
ಧಾರವಾಡದ ಹೊಸ ಬಸ್‌ನಿಲ್ದಾಣದಲ್ಲಿನ ಬಿಆರ್‌ಟಿಎಸ್‌ ಟಿಕೆಟ್‌ ಕೌಂಟರ್‌ ಚಾವಣಿಯ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರಾನಾಥ 
ಧಾರವಾಡದ ಹೊಸ ಬಸ್‌ನಿಲ್ದಾಣದಲ್ಲಿನ ಬಿಆರ್‌ಟಿಎಸ್‌ ಟಿಕೆಟ್‌ ಕೌಂಟರ್‌ ಚಾವಣಿಯ ದುಃಸ್ಥಿತಿ ಪ್ರಜಾವಾಣಿ ಚಿತ್ರ: ಬಿ.ಎಂ.ಕೇದಾರಾನಾಥ    

ಧಾರವಾಡ: ಹುಬ್ಬಳ್ಳಿ–ಧಾರವಾಡಕ್ಕೆ ಸಂಪರ್ಕ ಕಲ್ಪಿಸುವ ತ್ವರಿತ ಬಸ್‌ ಸಾರಿಗೆ (ಬಿಆರ್‌ಟಿಎಸ್‌) ನಿಲ್ದಾಣಗಳು ನಿರ್ವಹಣೆ ಕೊರತೆಯಿಂದ ಸೊರಗಿವೆ. ಅಸ್ವಚ್ಛತೆ, ಸೋರುವ ಚಾವಣಿ, ತಾಂತ್ರಿಕ ದೋಷದಿಂದ ಯಂತ್ರ ನಿಷ್ಕ್ರಿಯಗೊಂಡಿರುವುದೂ ಸೇರಿದಂತೆ ಮೊದಲಾದ ಸಮಸ್ಯೆಗಳು ಕಾಡುತ್ತಿವೆ.

ನಿತ್ಯ ಸಹಸ್ರಾರು ಪ್ರಯಾಣಿಕರು ಬಿಆರ್‌ಟಿಎಸ್‌ ಚಿಗರಿ ಬಸ್‌ಗಳಲ್ಲಿ ಸಂಚರಿಸುತ್ತಾರೆ. ಸೌಲಭ್ಯ ಕೊರತೆಯಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ದಿನದಿಂದ ದಿನಕ್ಕೆ ಸಮಸ್ಯೆಗಳ ಸರಮಾಲೆ ಹೆಚ್ಚುತ್ತಿದೆ.

ಹೊಸ್‌ ಬಸ್‌ನಿಲ್ದಾಣದಲ್ಲಿನ ಬಿರ್‌ಟಿಎಸ್‌ ನಿಲ್ದಾಣ, ಮಹಾನಗರ ಪಾಲಿಕೆ ಕಚೇರಿ ಸಮೀಪದಲ್ಲಿರುವ ಬಿಆರ್‌ಟಿಎಸ್‌ ಟರ್ಮಿನಲ್‌ ಸೇರಿದಂತೆ ವಿವಿಧೆಡೆ ಇರುವ ನಿಲ್ದಾಣಗಳಲ್ಲಿ ಕುಡಿಯುವ ನೀರು, ಮೊದಲಾದ ಮೂಲಸೌಕರ್ಯಗಳು ಇಲ್ಲ. ಸೌಲಭ್ಯ ಕಲ್ಪಿಸುವಂತೆ ನಾಗರಿಕರು, ಸಂಘಟನೆಗಳಿಂದ ಹಲವು ಬಾರಿ ಮನವಿ ಸಲ್ಲಿಸಿದರೂ ಬಿಆರ್‌ಟಿಎಸ್‌ ಅಧಿಕಾರಿಗಳು ‘ಜಾಣ ಮೌನ’, ‘ಜಾಣ ಕುರುಡು’ ಅನುಸರಿಸುತ್ತಿದ್ದಾರೆ.

ADVERTISEMENT

ಪಾಲಿಕೆ ಕಚೇರಿ ಸಮೀಪದ ಬಿಆರ್‌ಟಿಎಸ್‌ ಟರ್ಮಿನಲ್‌ ಮತ್ತು ಗ್ರಾಮೀಣ ಬಸ್‌ ನಿಲ್ದಾಣದ ಸಂಪರ್ಕಕ್ಕೆ ನಿರ್ಮಿಸಿರುವ ‘ಸ್ಕೈ ವಾಕ್‌’ಗಳನ್ನು ಬಳಸುವವರ ಸಂಖ್ಯೆ ತೀರಾ ಕಡಿಮೆ. ಸಂಚಾರ ಸಿಗ್ನಲ್‌ ಮತ್ತು ವಾಹನ ದಟ್ಟಣೆ ಹೆಚ್ಚಿರುವ ಪ್ರದೇಶಗಳ ನಿಲ್ಧಾಣಗಳಿಗೆ ತಲುಪಲು ಪ್ರಯಾಣಿಕರು ಪ್ರಯಾಸಪಡಬೇಕಾದ ಸ್ಥಿತಿ ಇದೆ.

ಹೊಸ ಬಸ್‌ನಿಲ್ದಾಣದಲ್ಲಿನ ಬಿಆರ್‌ಟಿಎಸ್‌ ನಿಲ್ದಾಣದ ಚಾವಣಿಯ ಕೆಲವು ಶೀಟುಗಳು ಹಾಳಾಗಿವೆ. ಮಳೆಯಾದಾಗ ಚಾವಣಿ ಸೋರುತ್ತದೆ. ಟಿಕೆಟ್‌ ಕೌಂಟರ್‌ ಬದಿಯ ಜಾಗದಲ್ಲಿ ಕಸ ಬಿದ್ದಿರುತ್ತದೆ.

ಬಿಆರ್‌ಟಿಎಸ್‌ ಟರ್ಮಿನಲ್‌ನಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಇದ್ದೂ ಇಲ್ಲದಂತಾಗಿದೆ. ಟರ್ಮಿನಲ್‌ನ ಎರಡನೇ ಅಂತಸ್ತು ಖಾಲಿ ಇದೆ. ಇಲ್ಲಿ ನಾಯಿಗಳು, ಬೆಕ್ಕುಗಳು ಮಲಗಿರುತ್ತವೆ. ಕೆಲವೆಡೆ ಗಿಡಗಳು ಬೆಳೆದಿವೆ. ಪಾದಚಾರಿಗಳು ಸಾಗಲು ನಿರ್ಮಿಸಿರುವ ಸುರಂಗ ಮಾರ್ಗದಲ್ಲಿ ಜನರು ಗುಟ್ಕಾ ಉಗುಳಿ ಗೋಡೆಗಳ ಅಂದಗೆಡಿಸಿದ್ದಾರೆ.

ಬಿಆರ್‌ಟಿಎಸ್‌ ನಿಲ್ಧಾಣಗಳಲ್ಲಿ ಪ್ರಯಾಣಿಕರು ಬಸ್‌ ಹತ್ತುವ, ಇಳಿಯುವ ಭಾಗದಲ್ಲಿ ಸ್ವಯಂಚಾಲಿತ ಕದಗಳು ಇವೆ. ಆದರೆ, ಕೆಲವು ನಿಲ್ದಾಣಗಳಲ್ಲಿ ಅವು ತೆರೆದೇ ಇರುತ್ತವೆ. ಪ್ರಯಾಣಿಕರು ನಿಲ್ದಾಣ ಪ್ರವೇಶಿಸುವ ಮತ್ತು ನಿಲ್ದಾಣದಿಂದ ನಿರ್ಗಮಿಸುವ ಭಾಗದಲ್ಲಿನ ಯಂತ್ರಗಳು ಕೈಕೊಡುವ ಸಮಸ್ಯೆ ಇದೆ.

ಬಸ್‌ನಿಲ್ದಾಣ ತಲುಪುವಾಗ ಆ ನಿಲ್ದಾಣದ ಹೆಸರು ತಿಳಿಸುವ ಧ್ವನಿ ಘೋಷಣೆ ವ್ಯವಸ್ಥೆಯನ್ನು ಎಲ್ಲ ಬಸ್‌ಗಳಲ್ಲಿ ಅಳವಡಿಸಬೇಕೆಂಬ ಪ್ರಯಾಣಿಕರ ಬೇಡಿಕೆ ಈಡೇರಿಲ್ಲ. ಬಿಆರ್‌ಟಿಎಸ್‌ ಮಾರ್ಗದಲ್ಲಿಇತರೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂಬ ಕೋರಿಕೆಗೂ ಸ್ಪಂದನೆ ಸಿಕ್ಕಿಲ್ಲ.

ಚಿಗರಿ ಬಸ್‌ಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಈ ಹಿಂದೆ 10 ನಿಮಿಷಕ್ಕೊಂದು ಬಸ್‌ ಸಂಚರಿಸುತ್ತಿದ್ದವು. ಈಗ 20 ನಿಮಿಷಕ್ಕೊಂದು ‌ಸಂಚರಿಸುತ್ತವೆ. ಬಿಆರ್‌ಟಿಎಸ್‌ ಮಾರ್ಗದ ಬದಿ ಅಳವಡಿಸಿರುವ ಬೇಲಿ ಕೆಲವೆಡೆ ಹಾಳಾಗಿದೆ  ಎಂಬ ದೂರುಗಳು ಇವೆ.

ಧಾರವಾಡದ ಬಿಆರ್‌ಟಿಎಸ್‌ ಟರ್ಮಿನಲ್‌ನಲ್ಲಿನ ಕುಡಿಯುವ ನೀರಿನ ಘಟಕದ ಅವಸ್ಥೆ 
ಧಾರವಾಡದ ಬಿಆರ್‌ಟಿಎಸ್‌ ಟರ್ಮಿನಲ್‌ನ ಮಹಡಿಯಲ್ಲಿ ಗಿಡಗಳು ಬೆಳೆದಿವೆ
ಧಾರವಾಡದ ಬಿಆರ್‌ಟಿಎಸ್‌ ಟರ್ಮಿನಲ್‌ನ ಪಾದಚಾರಿ ಸುರಂಗ ಮಾರ್ಗದ ಗೋಡೆ ಮೇಲೆ ಗುಟ್ಕಾ ಕಲೆ ಉಳಿದಿದೆ
ಧಾರವಾಡದ ಬಿಆರ್‌ಟಿಎಸ್‌ ಟರ್ಮಿನಲ್‌ನ ಮಹಡಿಯಲ್ಲಿ ನಾಯಿಗಳು ಮಲಗಿರುವುದು
ಧಾರವಾಡದ ಟೊಲ್‌ನಾಕಾ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ದ್ವಾರದ ಒಂದು ಕಡೆ ಯಂತ್ರದ ತಾಂತ್ರಿಕ ದೋಷ ಸೂಚನೆ ಅಳವ‌ಡಿಸಲಾಗಿದೆ
ಟೋಲ್‌ ನಾಕಾ ನಿಲ್ದಾಣದ ಒಂದು ಕಡೆ ಟಿಕೆಟ್‌ ವಿತರಣೆ ಯಂತ್ರ ಹಾಳಾಗಿ ಹಲವು ತಿಂಗಳು ಕಳೆದಿವೆ. ಈವರೆಗೆ ದುರಸ್ತಿ ಮಾಡಿಲ್ಲ. ಸಂಬಂಧಪಟ್ಟವರು ಕ್ರಮವಹಿಸಬೇಕು
ಪಿ.ಬಿ.ಕುಲಕರ್ಣಿ ಪ್ರಯಾಣಿಕ ಮಾಳಮಡ್ಡಿ
ಬಿಆರ್‌ಟಿಎಸ್‌ ನಿಲ್ದಾಣಗಳಲ್ಲಿ ಸ್ವಚ್ಛತೆ ಕೊರತೆ ಇದೆ. ಮೂಲಸೌಕರ್ಯ ಕಲ್ಪಿಸಬೇಕು. ನಿಲ್ದಾಣಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು
ಬಸವರಾಜ ವಿದ್ಯಾರ್ಥಿ

‘ಧಾರವಾಡ ಟರ್ಮಿನಲ್‌ನ ಎರಡನೇ ಅಂತಸ್ತಿನಲ್ಲಿ ಗ್ರಂಥಾಲಯ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸಂಬಂಧಪಟ್ಟವರ ಇಚ್ಛಾಶಕ್ತಿ ಕೊರತೆಯಿಂದ ಆ ಕಾರ್ಯ ನನೆಗುದಿಗೆ ಬಿದ್ದಿದೆ. ಟರ್ಮಿನಲ್‌ನಲ್ಲಿ ಕುಡಿಯುವ ನೀರಿನ ಘಟಕ ಹಾಳಾಗಿದೆ. ಅದನ್ನು ಸರಿಪಡಿಸುವಂತೆ ಮನವಿ ಸಲ್ಲಿಸಿದರೂ ಕ್ರಮವಹಿಸಿಲ್ಲ’ ಎಂದು ಬಿಆರ್‌ಟಿಎಸ್‌ ನೌಕರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. ‘ಭಾರಿ ಮಳೆ ಗುಡುಗು ಮಿಂಚು ಇದ್ದಾಗ ಬ್ಯಾಟರಿ ಹಾಳಾದಾಗ ವಿದ್ಯುತ್‌ ಸ್ಥಗಿತವಾದಾಗ ಕೆಲವೊಮ್ಮೆ ನಿಲ್ದಾಣಗಳಲ್ಲಿ ಯಂತ್ರಗಳಲ್ಲಿ ಸಮಸ್ಯೆಯಾಗುತ್ತದೆ. ಅಂಥ ಸಮಸ್ಯೆಗಳನ್ನು ತ್ಚರಿತವಾಗಿ ಪರಿಹರಿಸಲಾಗುತ್ತದೆ’ ಎಂದು ತಿಳಿಸಿದರು. ‘ಸುರಕ್ಷಿತ ಸಂಚಾರ ನಿಟ್ಟಿನಲ್ಲಿ ಬಸ್‌ ಕ್ಷಮತೆ ಮುಖ್ಯ. ವರ್ಷಗಳು ಉರುಳಿದಂತೆ ಚಿಗರಿ ಬಸ್‌ಗಳು ಹಳತಾಗುತ್ತಿವೆ. ಬಸ್‌ಗಳಲ್ಲಿ ಆಗಾಗ ಯಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿವೆ. ಕೆಲವೊಮ್ಮೆ ಬೆಂಕಿ ಹೊತ್ತಿಕೊಂಡ ನಿದರ್ಶನಗಳೂ ಇವೆ. ಹಂತಹಂತವಾಗಿ ಹೊಸ ಬಸ್‌ಗಳ ವ್ಯವಸ್ಥೆಗೆ ಕ್ರಮ ವಹಿಸಿದರೆ ಒಳ್ಳೆಯದು’ ಎಂದು ಚಿಗರಿ ಬಸ್‌ ಚಾಲಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.