ಬಜೆಟ್
(ಸಾಂಕೇತಿಕ ಚಿತ್ರ)
ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ಮಂಡಿಸುವ ಬಜೆಟ್ ಬಗ್ಗೆ ಹುಬ್ಬಳ್ಳಿ– ಧಾರವಾಡ ಅವಳಿ ನಗರದ ಉದ್ಯಮಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
‘ಉತ್ತರ ಕರ್ನಾಟಕದ ಮುಖ್ಯ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿ– ಧಾರವಾಡ ಕೈಗಾರಿಕೆಗಳು ಬೆಳೆದರೆ ರಾಜ್ಯದ ಆರ್ಥಿಕತೆಗೆ ಇನ್ನಷ್ಟು ಕೊಡುಗೆ ಸಿಗಲಿದೆ. ಈ ಭಾಗದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಲಿದೆ. ಜನ–ಜೀವನ ಸುಧಾರಿಸಲಿದೆ’ ಎಂಬ ಆಶಾಭಾವನೆ ಉದ್ಯಮಿಗಳು ಹೊಂದಿದ್ದಾರೆ.
ಬೆಂಗಳೂರು– ಮುಂಬೈ ಕೈಗಾರಿಕಾ ಕಾರಿಡಾರ್ ಅನ್ನು ತ್ವರಿತ ಗತಿಯಲ್ಲಿ ನಿರ್ಮಿಸಬೇಕು. ಧಾರವಾಡ ವಿಶೇಷ ಹೂಡಿಕೆ ಪ್ರದೇಶದಲ್ಲಿ ಅಗತ್ಯ ಮೂಲಸೌಲಭ್ಯ ಒದಗಿಸಬೇಕು. ವಿಶೇಷ ಹೂಡಿಕೆ ವಲಯದಡಿ (ಎಸ್‌ಐಆರ್) ಎಲ್ಲ ಅತೀ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಒಂದು ಎಕರೆವರೆಗೆ ರಿಯಾಯಿತಿ ದರದಲ್ಲಿ ಭೂಮಿ (ಪ್ರಸ್ತುತ ಇರುವ ಭೂಮಿ ದರದಲ್ಲಿ ಶೇ 30ರಷ್ಟು ರಿಯಾಯಿತಿ) ನೀಡಿ ಪ್ರೋತ್ಸಾಹಿಸಬೇಕು ಎನ್ನುವುದು ಅವರ ಬೇಡಿಕೆ.
ಸರ್ಕಾರವು ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಉತ್ತರ ಕರ್ನಾಟಕ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಉದ್ಯೋಗವನ್ನು ಸೃಷ್ಟಿಸಲು ಎಫ್.ಎಂ.ಸಿ.ಜಿ ಘಟಕವನ್ನು ಮಂಜೂರು ಮಾಡಿತ್ತು. ಆದರೆ, ಈ ಪ್ರದೇಶದಲ್ಲಿ ಭೂಮಿಯ ಬೆಲೆ ದುಪ್ಪಟ್ಟಾಗಿದೆ. ಅದಕ್ಕಾಗಿ ಉದ್ಯಮಿದಾರರು ಬಂಡವಾಳ ಹೂಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಭೂಮಿಯ ದರವನ್ನು ಕಡಿಮೆ ಮಾಡಿ ಈ ಯೋಜನೆ ಮುಂದುವರೆಯಲು ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಅಮರಗೋಳದಲ್ಲಿರುವ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬೃಹತ್ ಪ್ರಮಾಣದ ಕೈಗಾರಿಕಾ ವಸ್ತು ಪ್ರದರ್ಶನಗಳನ್ನು ಏರ್ಪಡಿಸಲು ಸುಮಾರು 20,000–30,000 ಚ.ಅ. ಪ್ರದೇಶದಲ್ಲಿ ಕನ್ವೆನ್ಶನ್ ಹಾಲ್ ಸ್ಥಾಪಿಸಲು ₹ 15 ಕೋಟಿ ಅನುದಾನವನ್ನು ಈ ಬಜೆಟ್‌ನಲ್ಲಿ ಮಂಜೂರು ಮಾಡಬೇಕು. ಅವಳಿ ನಗರದಲ್ಲಿ ಮಲ್ಟಿ ಮಾಡೆಲ್ ಲಾಜಿಸ್ಟಿಕ್ ಪಾರ್ಕ್ ಸ್ಥಾಪಿಸಲು ಕ್ರಮಕೈಗೊಳ್ಳಬೇಕು. ಇಟಿಗಟ್ಟಿ, ಗಾಮನಗಟ್ಟಿಯಲ್ಲಿ 600 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಇದರಲ್ಲಿ 400 ಎಕರೆ ಎಫ್.ಎಂ.ಸಿ.ಜಿ ಅವರಿಗೆ ನೀಡಲಾಗಿದೆ. ಇನ್ನುಳಿದ 200 ಎಕರೆ ಜಾಗವನ್ನು ಸಣ್ಣ ಉದ್ಯಮಗಳಿಗೆ ಹಂಚಿಕೆ ಮಾಡಬೇಕು ಎಂದು ಕೋರಿದ್ದಾರೆ.
ಎಸ್.ಸಿ/ಎಸ್.ಟಿ ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ಶೇ 75 ಸಬ್ಸಿಡಿ ಮಂಜೂರಾದ ಜಾಗವನ್ನು 30 ವರ್ಷಗಳವರೆಗೆ ಮಾರಾಟ ಮಾಡುವುದನ್ನು ನಿಷೇಧಿಸಬೇಕು. ಎನ್.ಜಿ.ಇ.ಎಫ್ ಫ್ಯಾಕ್ಟರಿಯನ್ನು ಕೈಗಾರಿಕಾ ಇಲಾಖೆಯಿಂದ ಇಂಧನ ಇಲಾಖೆಗೆ ವರ್ಗಾಯಿಸಬೇಕು. ಹುಬ್ಬಳ್ಳಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ಸ್ ಕ್ಲಸ್ಟರ್ ಹಾಗೂ ಬೃಹತ್ ಟೆಕ್ಸ್‌ಟೈಲ್ ಪಾರ್ಕ್ ಸ್ಥಾಪಿಸಬೇಕು.
ಹುಬ್ಬಳ್ಳಿಯ ಐ.ಟಿ ಪಾರ್ಕ್, ಆರ್ಯಭಟ್ ಪಾರ್ಕ್‌ಗಳು ನಿಷ್ಕ್ರೀಯವಾಗಿವೆ. ಇವುಗಳ ಬಲವರ್ಧನೆ ಮಾಡಿ, ಹೆಚ್ಚಿನ ಐಟಿ ಕಂಪನಿಗಳ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಳ್ಳಬೇಕು ಎಂದು ಬೇಡಿಕೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಹೇರಳವಾಗಿ ಉತ್ಪನ್ನವಾಗುವ ಖಾದ್ಯತೈಲ ಬೀಜಗಳ ಹಣ್ಣುಗಳು, ದ್ರಾಕ್ಷಿ, ಚಿಕ್ಕು, ಮಾವಿನಹಣ್ಣು ಹಾಗೂ ಮೆಣಸಿನಕಾಯಿ ವಿವಿಧ ಆಹಾರ ಉತ್ಪನ್ನಗಳನ್ನು ಸಂಸ್ಕರಿಸಿ ರಫ್ತು ಮಾಡಲು ಪೂರಕ ಮಾರುಕಟ್ಟೆ ಸೃಷ್ಟಿಸಬೇಕು. ಶೈತ್ಯಾಗಾರ (ಕೋಲ್ಡ್ ಸ್ಟೋರೇಜ್) ಸ್ಥಾಪಿಸಬೇಕು. ಈ ಭಾಗದಲ್ಲಿ ಅಗ್ರಿಕಲ್ಚರಲ್ ಯಂತ್ರೋಪಕರಣಗಳ ಉತ್ಪಾದನೆ ಹಾಗೂ ಕೃಷಿ ಆಧಾರಿತ ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ನೀಡಬೇಕು ಎಂದು ಕೋರಿಕೆ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ ಆಗಬೇಕು ಎಂಬುದು ಉದ್ಯಮಿಗಳ ಬೇಡಿಕೆ–ಎಸ್.ಪಿ. ಸಂಶಿಮಠ ಅಧ್ಯಕ್ಷ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಸಿಸಿಐ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.