ADVERTISEMENT

ಕಟ್ಟಡ ಬೀಳುವ ಆತಂಕ: ಖಾಲಿ ಮಾಡಿದ ವ್ಯಾಪಾರಸ್ಥರು

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2019, 9:34 IST
Last Updated 10 ಆಗಸ್ಟ್ 2019, 9:34 IST
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಪಾಲಿಕೆಯ ಸಂಕೀರ್ಣದಲ್ಲಿದ್ದ ವ್ಯಾಪಾರಸ್ಥರು ಶುಕ್ರವಾರ ಮಳಿಗೆ ಖಾಲಿ ಮಾಡಿದರು
ಹುಬ್ಬಳ್ಳಿಯ ಮೇದಾರ ಓಣಿಯಲ್ಲಿ ಪಾಲಿಕೆಯ ಸಂಕೀರ್ಣದಲ್ಲಿದ್ದ ವ್ಯಾಪಾರಸ್ಥರು ಶುಕ್ರವಾರ ಮಳಿಗೆ ಖಾಲಿ ಮಾಡಿದರು   

ಹುಬ್ಬಳ್ಳಿ: ನಗರದ ಮೇದಾರ ಓಣಿಯಲ್ಲಿರುವ ಮಹಾನಗರ ಪಾಲಿಕೆಯ ಸಂಕೀರ್ಣ ಬೀಳುವ ಆತಂಕ ಎದುರಾದ ಹಿನ್ನೆಲೆಯಲ್ಲಿ ಅಲ್ಲಿದ್ದ 15 ಅಂಗಡಿಗಳ ವ್ಯಾಪಾರಸ್ಥರು ಶುಕ್ರವಾರ ದಿಢೀರನೇ ಖಾಲಿ ಮಾಡಿದರು.

ನಾಲೆಯ ಮೇಲೆ ಸಂಕೀರ್ಣ ಕಟ್ಟಲಾಗಿದ್ದು, ನಗರದಲ್ಲಿ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ನಾಲೆಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಶುಕ್ರವಾರ ಬೆಳಿಗ್ಗೆ ಕಟ್ಟಡದ ಹಿಂಭಾಗದಲ್ಲಿ ತುಣುಕು ಕುಸಿದು ಬಿದ್ದಿದೆ. ಅಲ್ಲಲ್ಲಿ ಬಿರುಕುಬಿಟ್ಟಿದೆ. ಇದರಿಂದ ಆತಂಕಗೊಂಡ ವ್ಯಾಪಾರಸ್ಥರು ಅಂಗಡಿಯಲ್ಲಿದ್ದ ಸಾಮಗ್ರಿಗಳನ್ನು ಬೇರೆಡೆಗೆ ತೆಗೆದುಕೊಂಡು ಹೋಗುತ್ತಿದ್ದರು. ಮೊದಲ ಮಹಡಿಯಲ್ಲಿದ್ದ ಗೋದಾಮುಗಳ ಸರಕುಗಳನ್ನೂ ಖಾಲಿ ಮಾಡುತ್ತಿದ್ದ ಚಿತ್ರಣ ಕಂಡು ಬಂತು.

‘ನಾಲೆಯ ಹರಿವು ಹೆಚ್ಚಾಗಿರುವ ಕಾರಣ ಕಟ್ಟಡ ಬೀಳುವ ಆತಂಕ ಮೂಡಿದೆ. ಕಟ್ಟಡದ ಬಿರುಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳಿಗೆಗಳನ್ನು ಖಾಲಿ ಮಾಡುವಂತೆ ಪಾಲಿಕೆ 15 ದಿನಗಳ ಹಿಂದೆ ನೋಟಿಸ್‌ ನೀಡಿತ್ತು. ಹಿಂದೆ ಇದೇ ರೀತಿಯ ಸಮಸ್ಯೆಯಾದಾಗ ವ್ಯಾಪಾರಸ್ಥರೇ ಸೇರಿ ತುರ್ತು ರಿಪೇರಿ ಮಾಡಿಕೊಂಡಿದ್ದೆವು’ ಎಂದು ಈ ಸಂಕೀರ್ಣದಲ್ಲಿ ಸನ್‌ ಎಲೆಕ್ಟ್ರಾನಿಕ್ಸ್‌ ಅಂಗಡಿ ಹೊಂದಿರುವ ಪ್ರಕಾಶ ಬುರಬುರೆ ತಿಳಿಸಿದರು.

ADVERTISEMENT

‘ಖಾಲಿ ಮಾಡುವಂತೆ ದಿಢೀರನೇ ಹೇಳಿದರೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು ಎಂಬುದು ತಿಳಿಯದಾಗಿದೆ. ಗಾಜಿನ ವ್ಯಾಪಾರ ಮಾಡುವವರಿಗೆ ಮಳಿಗೆ ಬಾಡಿಗೆ ಕೊಟ್ಟಿದ್ದೇನೆ’ ಎಂದು ಆನಂದ್ ಪವಾರ್‌ ತಿಳಿಸಿದರು.

ಇದರ ಬಗ್ಗೆ ಪಾಲಿಕೆಯ 9ನೇ ವಲಯಾಧಿಕಾರಿ ಮನೋಹರ ಅವರನ್ನು ಪ್ರಶ್ನಿಸಿದಾಗ ’ಸಂಕೀರ್ಣ ಬೀಳುವ ಹಂತಕ್ಕೆ ತಲುಪಿದ್ದು, ಕೂಡಲೇ ಖಾಲಿ ಮಾಡುವಂತೆ ಮೂರು ತಿಂಗಳ ಹಿಂದೆಯೇ ನೋಟಿಸ್‌ ಕೊಟ್ಟಿದ್ದೆವು. 20 ದಿನಗಳ ಹಿಂದೆಯೂ ಗಂಭೀರ ಎಚ್ಚರಿಕೆ ನೀಡಿ ನೋಟಿಸ್‌ ನೀಡಿದ್ದೆವು. ಆಗ ಯಾರೂ ಖಾಲಿ ಮಾಡಿರಲಿಲ್ಲ. ನಾಲೆಯ ಹರಿವು ಹೆಚ್ಚಾದ ಕಾರಣ ಈಗ ದಿಢೀರನೇ ಖಾಲಿ ಮಾಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.