ADVERTISEMENT

ಹುಬ್ಬಳ್ಳಿ: ಹೊಸ ವಾರ್ಡ್‌ ಮಾಹಿತಿ ಗೊಂದಲ, ಕಟ್ಟಡ ನಿರ್ಮಾಣ ಅನುಮತಿಗೆ ಪರದಾಟ

ಪಾಲಿಕೆಯಲ್ಲಿ ಸಾಫ್ಟ್‌ವೇರ್ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:34 IST
Last Updated 25 ಜೂನ್ 2022, 6:34 IST
ಮಹಾನಗರ ಪಾಲಿಕೆ ಕಚೇರಿ
ಮಹಾನಗರ ಪಾಲಿಕೆ ಕಚೇರಿ   

ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್‌ಗಳ ಮರುವಿಂಗಡಣೆಯಾದ ಬಳಿಕ, ಕಟ್ಟಡ ನಿರ್ಮಾಣಕ್ಕೆ ಅನುಮತಿ ಕೋರಿ ಸಲ್ಲಿಕೆಯಾಗುತ್ತಿರುವ ಅರ್ಜಿಗಳ ವಿಲೇವಾರಿ ವಿಳಂಬವಾಗುತ್ತಿದೆ. ಇದರಿಂದಾಗಿ, ಅರ್ಜಿದಾರರು ವಲಯ ಕಚೇರಿಗಳಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ.

ನಿರ್ಮಾಣ್ –2 ಎಂಬ ಆನ್‌ಲೈನ್‌ ಪೋರ್ಟಲ್‌ನಲ್ಲಿ ಹೊಸ ಕಟ್ಟಡಕ್ಕೆ ಅರ್ಜಿ ಸಲ್ಲಿಸಿ, ನಿಗದಿತ ಶುಲ್ಕ ಪಾವತಿಯೊಂದಿಗೆ ಅನುಮೋದನೆ ಪಡೆಯಬೇಕು. ಹಿಂದೆ 67 ವಾರ್ಡ್‌ಗಳು ಇದ್ದಾಗ ಎಲ್ಲವೂ ಸರಾಗವಾಗಿ ನಡೆಯುತ್ತಿತ್ತು. ಆದರೆ, ವರ್ಷದ ಹಿಂದೆ ಮರುವಿಂಗಡಣೆಯಾದ ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಯಿತು. ಅಂದಿನಿಂದ, ಈ ವಿಳಂಬ ಆರಂಭವಾಯಿತು.

‘ಮರು ವಿಂಗಡಣೆಯಾದ ವಾರ್ಡ್‌ಗಳ ಮಾಹಿತಿಯು ನಿರ್ಮಾಣ್‌–2 ಪೋರ್ಟಲ್ ಮತ್ತು ಪಾಲಿಕೆಯ ಆಸ್ತಿ ತೆರಿಗೆ ಪಾವತಿಯ ಸಾಫ್ಟ್‌ವೇರ್‌ ಅಪ್‌ಡೇಟ್ ಆಗಿಲ್ಲ. ಯಾವ ಪ್ರದೇಶಗಳು ಯಾವ ವಾರ್ಡ್ ಮತ್ತು ವಲಯದ ವ್ಯಾಪ್ತಿಗೆ ಬರುತ್ತದೆ ಎಂಬ ಮಾಹಿತಿ ಅರ್ಜಿ ಹಾಕುವಾಗ ಕಾಣುವುದಿಲ್ಲ. ಅರ್ಜಿ ಹಾಕುವಾಗಲೇ ಹೊಸ ಮತ್ತು ಹಳೇ ವಾರ್ಡ್‌ಗಳ ಮಾಹಿತಿ ಗೊತ್ತಾದರೆ, ಈ ಸಮಸ್ಯೆ ಎದುರಾಗುವುದಿಲ್ಲ’ ಎಂದು ನಗರದ ಸಾಮಾಜಿಕ ಕಾರ್ಯಕರ್ತ ಅತೀಕ್ ಕೊಪ್ಪಳ ಹೇಳಿದರು.

ADVERTISEMENT

3 ತಿಂಗಳಿಂದ ಸಿಗದ ಅನುಮತಿ
‘ಕಟ್ಟಡವೊಂದರ ಸ್ತಂಭಗಳ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಮಾಣಪತ್ರಕ್ಕೆ ಅರ್ಜಿ ಹಾಕಿ ಮೂರು ತಿಂಗಳಾದರೂ, ಇನ್ನೂ ಅನುಮೋದನೆ ಸಿಕ್ಕಿಲ್ಲ. ಇದರಿಂದಾಗಿ ಕೆಲಸ ಸ್ಥಗಿತಗೊಂಡಿದೆ. ಈ ಬಗ್ಗೆ ಪಾಲಿಕೆ ಆಯುಕ್ತರಿಗೆ ಪತ್ರ ಬರೆದಿದ್ದೇನೆ’ ಎಂದು ಆರ್ಕಿಟೆಕ್ಟ್‌ ಎಂಜಿನಿಯರ್ ಶಿವಪ್ರಸಾದ್ ಹೇಳಿದರು.

‘ಪಾಲಿಕೆಯವರು ಆಸ್ತಿ ತೆರಿಗೆಯ ಚಲನ್‌ ಅನ್ನು ಹಳೇ ವಾರ್ಡ್‌ ಸಂಖ್ಯೆ ಆಧರಿಸಿಯೇ ನೀಡುತ್ತಾರೆ. ಜನ ಅದೇ ಮಾಹಿತಿಯೊಂದಿಗೆ ಅರ್ಜಿ ಹಾಕುತ್ತಾರೆ. ಇದರಿಂದಾಗಿ ಅನುಮತಿ ಸಿಗುವುದು ವಿಳಂಬವಾಗುತ್ತಿದೆ. ಇದನ್ನು ತಪ್ಪಿಸಲು ಪರಿಷ್ಕೃತ ವಾರ್ಡ್‌ಗಳ ಕುರಿತು ವ್ಯಾಪಕ ಪ್ರಚಾರ ಮಾಡಬೇಕು’ ಎಂದು ಸಲಹೆ ನೀಡಿದರು.

ನಿತ್ಯ ಐದಾರು ಪ್ರಕರಣ
‘ಕಟ್ಟಡ ನಿರ್ಮಾಣ, ವಿನ್ಯಾಸ ಮಾರ್ಪಾಡು, ಪರಿಷ್ಕರಣೆ, ವಾಸ ಪ್ರಮಾಣಪತ್ರಕ್ಕೆ ಅರ್ಜಿಗಳನ್ನು ನಿರ್ಮಾಣ್‌–2ರಲ್ಲಿ ಸ್ವೀಕರಿಸಲಾಗುತ್ತಿದೆ. ಅದರಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ, ನಿತ್ಯ ಇಂತಹ ಐದಾರು ಪ್ರಕರಣಗಳು ಬರುತ್ತವೆ. ಪ್ರಸಕ್ತ ಸಾಲಿನಲ್ಲಿ ಜೂನ್ 22ರವರೆಗೆ 17,945 ಅರ್ಜಿಗಳು ಬಂದಿವೆ. ಆ ಪೈಕಿ 17,049 ವಿಲೇವಾರಿಯಾಗಿದ್ದು, 733 ಬಾಕಿ ಇವೆ’ ಎಂದು ಪಾಲಿಕೆಯ ನಗರ ಯೋಜನಾ ವಿಭಾಗದ ಅಧಿಕಾರಿಗಳು ತಿಳಿಸಿದರು.

‘ಕೆಲ ಕನ್ಸಲ್ಟಿಂಗ್ ಎಂಜಿನಿಯರ್‌ಗಳು ಅಥವಾ ನಾಗರಿಕರು ಹಳೇ ವಾರ್ಡ್‌ ಪ್ರಕಾರವೇ ಅರ್ಜಿ ಹಾಕುತ್ತಿರುವುದು ಸಮಸ್ಯೆಗೆ ಕಾರಣ. ಇಮೇಲ್ ಮೂಲಕ ಸಮಸ್ಯೆಯನ್ನು ನಮ್ಮ ಗಮನಕ್ಕೆ ತಂದರೆ ಪರಿಹರಿಸುತ್ತೇವೆ. ಆಸ್ತಿ ತೆರಿಗೆಗೆ ಸಂಬಂಧಿಸಿದ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದರೆ, ಸಮಸ್ಯೆ ಬಗೆಹರಿಯಲಿದೆ’ ಎಂದರು.

ಲಂಚಕ್ಕೆ ದಾರಿ ಮಾಡಿಕೊಡುವ ವಿಳಂಬ
‘ನಾಗರಿಕರು ತಮ್ಮ ಪಿಐಡಿ ಸಂಖ್ಯೆ(ಆಸ್ತಿ ಗುರುತಿನ ಸಂಖ್ಯೆ) ಮತ್ತು ಹಳೇ ವಾರ್ಡ್ ಮಾಹಿತಿ ಆಧರಿಸಿಯೇ ಅರ್ಜಿ ಹಾಕುತ್ತಾರೆ. ಇಲ್ಲಿಂದ ಆರಂಭವಾಗುವ ಸಮಸ್ಯೆ ವಾರಗಳಾದರೂ ಮುಗಿಯುವುದಿಲ್ಲ. ಈ ಬಗ್ಗೆ ವಲಯ ಕಚೇರಿಗೆ ಹೋಗಿ ವಿಚಾರಿಸಿದರೆ, ನಿಮ್ಮ ವಾರ್ಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಬೇರೆ ವಲಯ ಕಚೇರಿಗೆ ಹೋಗಿ ವಿಚಾರಿಸಿ ಎಂದು ಅಧಿಕಾರಿಗಳು ಕೈ ತೊಳೆದುಕೊಳ್ಳುತ್ತಾರೆ. ಇದೇ ವಿಷಯಕ್ಕೆ ಲಂಚಕ್ಕೆ ಬೇಡಿಕೆ ಇಡಲಾರಂಭಿಸುತ್ತಾರೆ. ದುಡ್ಡು ಕೊಟ್ಟವರ ಕೆಲಸವಷ್ಟೇ ಸರಾಗವಾಗಿ ಆಗುತ್ತದೆ. ಉಳಿದವರು ಅಲೆಯುತ್ತಲೇ ಇರಬೇಕಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಅತೀಕ್ ಕೊಪ್ಪಳ ಆರೋಪಿಸಿದರು.

ಅಧಿಕಾರಿಗಳಿಂದಲೇ ಅರ್ಜಿ ವರ್ಗಾವಣೆ: ಆಯುಕ್ತ
‘ಕಂದಾಯ ಸಂಗ್ರಹಕ್ಕೆ ಸಂಬಂಧಿಸಿದ ಸಾಫ್ಟ್‌ವೇರ್‌ ಹಳೆಯದಾಗಿರುವುದರಿಂದ, ಇಂತಹ ಸಮಸ್ಯೆಗಳು ತಲೆದೋರಿವೆ. ಹೊಸ ಸಾಫ್ಟ್‌ವೇರ್‌ ಅಭಿವೃದ್ಧಿ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ಟೆಂಡರ್ ಕರೆಯಲಾಗುವುದು. ಅಲ್ಲಿಯವರೆಗೆಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅರ್ಜಿ ಯಾವ ವಲಯದ ವ್ಯಾಪ್ತಿಗೆ ಬರುತ್ತದೊ, ಆ ವಲಯಕ್ಕೆ ಅಧಿಕಾರಿಗಳೇ ವರ್ಗಾಯಿಸಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದು ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ‘ಪ್ರಜಾವಾಣಿ’ಗೆ ತಿಳಿಸಿದರು.

‘ನಿರ್ಮಾಣ್–2ರಲ್ಲಿ ಅರ್ಜಿದಾರರು ಸರಿಯಾದ ದಾಖಲೆಗಳನ್ನು ಸಲ್ಲಿಸದಿದ್ದಾಗ ಅಧಿಕಾರಿಗಳು ರಿಜೆಕ್ಟ್ ಮಾಡುವ ಅಥವಾ ಹಾಗೆಯೇ ಇಟ್ಟುಕೊಳ್ಳುವ ಪರಿಪಾಠವಿದೆ. ದಾಖಲೆಗಳು ಸರಿಯಾಗಿದ್ದರೂ ರಿಜೆಕ್ಟ್ ಮಾಡಿದರೆ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಧಿಕಾರಿಗಳು ಲಂಚ ಕೇಳಿದರೆ, ಆ ಬಗ್ಗೆ ನಾಗರಿಕರು ನನ್ನನ್ನು ನೇರವಾಗಿ ಭೇಟಿಯಾಗಿ ದೂರು ನೀಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.