ADVERTISEMENT

‘ಉದ್ಯಮ ಬದಲಾವಣೆ ತರಬೇಕು‘

ಯುವ ಟೈಕಾನ್‌ ಸಮಾವೇಶದಲ್ಲಿ ಸೋನಂ ವಾಂಕ್ಚುಕ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 2:53 IST
Last Updated 31 ಜನವರಿ 2021, 2:53 IST

ಹುಬ್ಬಳ್ಳಿ: ‘ಯಾವುದೇ ಉದ್ಯಮವು ಬದಲಾವಣೆಗೆ ಕಾರಣವಾಗಬೇಕು. ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು. ಜನರ ತೊಂದರೆಗಳಿಗೆ ಸ್ಪಂದಿಸಬೇಕು’ ಎಂದು ಶಿಕ್ಷಣ ತಜ್ಞ, ಐ ಲೀವ್ ಸಿಂಪ್ಲಿ ಸಂಸ್ಥಾಪಕ ಸೋನಂ ವಾಂಗ್ಚುಕ್ ಅಭಿಪ್ರಾಯಪಟ್ಟರು.

ನಗರದಲ್ಲಿ ಶನಿವಾರ ನಡೆದ ಯುವ ಟೈಕಾನ್–2021 ವರ್ಚುವಲ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ದೇಶದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ವ್ಯವಸ್ಥೆ ಎದುರಿಸುವ ಸಮಸ್ಯೆಗಳನ್ನು ಗ್ರಹಿಸಿ, ಅವುಗಳನ್ನು ನಿವಾರಿಸುವ ಚಾಕಚಕ್ಯತೆ ಬೆಳೆಸಿಕೊಳ್ಳಬೇಕು’ ಎಂದರು.

‘ಬದಲಾದ ಪರಿಸ್ಥಿತಿಯಲ್ಲಿ ಆನ್‌ಲೈನ್‌ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ. ನವೀಕೃತ ಯುಟ್ಯೂಬ್, ಆನ್‍ಲೈನ್ ಶಿಕ್ಷಣ ಪದ್ಧತಿಯು ತರಗತಿ ಶಿಕ್ಷಣಕ್ಕಿಂತ ಹೆಚ್ಚಿನ ಪರಿಣಾಮಕಾರಿಯಾಗುತ್ತಿದೆ’ ಎಂದು ಹೇಳಿದರು.

ADVERTISEMENT

ಉದ್ಯಮಿ ಅನ್ಮೋಲ್ ಗರ್ಗ್ ಮಾತನಾಡಿ, ‘ಯುವಜನರು ಉದ್ಯಮ ಆರಂಭಿಸುವುದಕ್ಕೆ ಮುಂಚೆ ಉದ್ಯಮ ವಲಯದ ಸ್ಥಿತಿಯನ್ನು ಅರಿಯಬೇಕು. ಮಾರುಕಟ್ಟೆಯ ಸವಾಲುಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳಬೇಕು. ತಂತ್ರಜ್ಞಾನ ಹಾಗೂ ಬದಲಾದ ಮಾರುಕಟ್ಟೆಯ ಸ್ಥಿತಿಗೆ ಅನುಗುಣವಾಗಿ ಉದ್ಯಮ ಆರಂಭಿಸಬೇಕು’ ಎಂದು ಸಲಹೆ ನೀಡಿದರು.

ದೇಶಪಾಂಡೆ ಫೌಂಡೇಷನ್‌ನ ಡಾ. ಗುರುರಾಜ ದೇಶಪಾಂಡೆ, ‘ದೇಶದ ಬದಲಾವಣೆಗೆ ಯುವ ಉದ್ಯಮಿಗಳು ಕಾರಣರಾಗಬಲ್ಲರು. ಅದಕ್ಕಾಗಿ, ಹೆಚ್ಚಿನ ಆಲೋಚನಾ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಉದ್ಯಮದ ಆಗುಹೋಗುಗಳನ್ನು ಗಮನಿಸುತ್ತಿರಬೇಕು‘ ಎಂದರು.

ಡಾ. ಉಷ್ಯ ಮೋಹನದಾಸ್, ‘ಒಳ್ಳೆಯ ಉದ್ದೇಶದೊಂದಿಗೆ ಉದ್ಯಮ ಆರಂಭಿಸಬೇಕು. ಮಾತಿಗಿಂತ ನಮ್ಮ ಕೆಲಸವೇ ಹೆಚ್ಚು ಮಾತನಾಡಬೇಕು. ಆಗ ಮಾತ್ರ ಯಶಸ್ವು ನಮ್ಮನ್ನು ಹಿಂಬಾಲಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಮಾವೇಶವನ್ನು ಟೈ ಹುಬ್ಬಳ್ಳಿ ಅಧ್ಯಕ್ಷ ಅಜಯ ಹಂಡಾ ಮತ್ತು ಉದ್ಯಮಿ ಆನಂದ ಸಂಕೇಶ್ವರ ಉದ್ಘಾಟಿಸಿದರು. ಉದ್ಯಮಿಗಳಾದ ರಾಕೇಶ, ರೋಹನ್ ಕುಲಕರ್ಣಿ, ವಿಶಾಲ್ ಯಾದವ್ ಸೇರಿದಂತೆ 12ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ ಕಂಪನಿಗಳ ವ್ಯವಸ್ಥಾಪಕರು ತಮ್ಮ ಅನುಭವಗಳನ್ನು ಹಮ್ಮಿಕೊಂಡರು. ಸಮಾವೇಶದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಟೈಕಾನ್‌ನ ಸಂಯೋಜಕ ವಿಜಯ ಮಾನೆ, ವಿಶಾಲ್ ನಾಡಗೌಡ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.