ಹುಬ್ಬಳ್ಳಿ: ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನಗತ್ಯ ಮಾಹಿತಿ ಕಲೆ ಹಾಕುತ್ತಿದ್ದು ಸಮಾಜದಲ್ಲಿ ಒಡಕು ಮೂಡಿಸುವ ಉದ್ದೇಶ ಹೊಂದಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತ್ಯತೀತತೆ ಬಗ್ಗೆ ಹೆಚ್ಚು ಮಾತನಾಡುತ್ತಾರೆ. ಆದರೆ, ಈ ಸಮೀಕ್ಷೆ ಮೂಲಕ ಜಾತಿಪದ್ಧತಿ ಹೆಚ್ಚಿಸಿ ಸಮಾಜವನ್ನು ಒಡೆದ ಅಪಕೀರ್ತಿಗೆ ಅವರು ಒಳಗಾಗಬೇಕಾಗುತ್ತದೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
‘ಕೇಂದ್ರ ಸರ್ಕಾರ ಇಡೀ ದೇಶದಲ್ಲಿ ಜನಗಣತಿ ಮಾಡಲಿದೆ. ರಾಜಕೀಯ ಲಾಭಕ್ಕಾಗಿ ಈಗ ರಾಜ್ಯದ ಸಮೀಕ್ಷೆ ತರಾತುರಿಯಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರು ಧರ್ಮವನ್ನು ನೋಡಿ ಮೀಸಲಾತಿ ಕೊಡುತ್ತಾರಾ’ ಎಂದು ಅವರು ಪ್ರಶ್ನಿಸಿದರು.
‘ವೀರಶೈವ–ಲಿಂಗಾಯತ ಸಮಾಜವನ್ನು ಒಡೆಯುವ ಪ್ರಯತ್ನವನ್ನು ಕಾಂಗ್ರೆಸ್ 2013ರಿಂದಲೇ ನಡೆಸಿದೆ. 2018ರಲ್ಲಿ ಜನರು ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದರು. ಈಗ ಮತ್ತೆ ಅಂತಹ ದುಸ್ಸಾಹಸಕ್ಕೆ ಕೈಹಾಕಿದ್ದು, ಜನ ಪಾಠ ಕಲಿಸುವರು’ ಎಂದರು.
‘ಹಿಂದುಳಿದ ವರ್ಗಗಳಿಗೆ ಬಿಡುಗಡೆಯಾಗಿದ್ದ ₹340 ಕೋಟಿ ಅನುದಾನ ಹಿಂಪಡೆದು, ಸಮೀಕ್ಷೆಗೆ ಬಳಸುವುದಾಗಿ ಸರ್ಕಾರ ಹೇಳಿದೆ. ದಲಿತ, ಹಿಂದುಳಿದವರ ಮತಗಳನ್ನು ಪಡೆದು ಅವರಿಗೆ ವಂಚಿಸಲಾಗುತ್ತಿದೆ. ನಿಜವಾದ ದಲಿತ ವಿರೋಧಿ ಕಾಂಗ್ರೆಸ್’ ಎಂದು ದೂರಿದರು.
ಅಧಿಕಾರ ಹೋಗಲಿದೆ ಎಂಬ ಭಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಭದ್ರಪಡಿಸಿಕೊಳ್ಳಲು ಸಮೀಕ್ಷೆ ಕಸರತ್ತು ನಡೆಸಿದ್ದಾರೆ. ಅವರು ಒಂದು ವರ್ಷದಿಂದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದಾರೆ ಅರವಿಂದ ಬೆಲ್ಲದ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.