ಹುಬ್ಬಳ್ಳಿ: ‘ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿ ಅವೈಜ್ಞಾನಿಕವಾಗಿದೆ. ಈ ವರದಿಯನ್ನು ಕರ್ನಾಟಕ ಕ್ಷತ್ರಿಯ ಮರಾಠ ಸಮಾಜ ವಿರೋಧಿಸುತ್ತದೆ’ ಎಂದು ಸಮಾಜದ ಮುಖಂಡ ಕೇಶವ ಜಾಧವ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮರಾಠ ಸಮಾಜದ ಜನಸಂಖ್ಯೆ ರಾಜ್ಯದಲ್ಲಿ ಅಂದಾಜು 45 ಲಕ್ಷ ಇದ್ದು, ಕ್ಷತ್ರಿಯ ಸಮಾಜದ ಎಲ್ಲ 47 ಒಳಪಂಗಡಗಳು ಸೇರಿದರೆ ಜನಸಂಖ್ಯೆ 80 ಲಕ್ಷಕ್ಕೂ ಹೆಚ್ಚಿದೆ. ಆದರೆ, ಸರ್ಕಾರಕ್ಕೆ ಸಲ್ಲಿಕೆಯಾಗಿರುವ ವರದಿಯಲ್ಲಿ ಸಮಾಜದ ಜನಸಂಖ್ಯೆ 16 ಲಕ್ಷ ಇದೆ ಎಂದು ಉಲ್ಲೇಖಿಸಲಾಗಿದೆ’ ಎಂದರು.
‘ಮನೆಮನೆಗೆ ಹೋಗಿ ಪಾರದರ್ಶಕವಾಗಿ, ನಿಖರವಾಗಿ ಈ ವರದಿಯನ್ನು ಸಿದ್ಧಪಡಿಸಿಲ್ಲ. ಹೀಗಾಗಿ ಈಗ ಸಲ್ಲಿಕೆಯಾಗಿರುವ ವರದಿಯನ್ನು ತಿರಸ್ಕರಿಸಬೇಕು. ಮತ್ತೊಮ್ಮೆ ಜಾತಿ ಜನಗಣತಿ ಮಾಡಬೇಕು’ ಎಂದು ಆಗ್ರಹಿಸಿದರು.
‘ರಾಜ್ಯದ ಪ್ರತಿ ತಾಲ್ಲೂಕು, ಗ್ರಾಮಗಳಲ್ಲಿ ನಮ್ಮ ಸಮಾಜದವರಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ನಮ್ಮ ಸಮಾಜ ಪ್ರಬಲವಾಗಿದೆ. ಈ ವರದಿ ಮೂಲಕ ಸಮಾಜವನ್ನು ರಾಜಕೀಯವಾಗಿ ಹತ್ತಿಕ್ಕುವ ಹುನ್ನಾರ ಮಾಡಲಾಗಿದೆ‘ ಎಂದು ದೂರಿದರು.
‘ಈ ವರದಿ ಪ್ರಕಾರ ನಮ್ಮನ್ನು ಅಲ್ಪಸಂಖ್ಯಾತರು ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಸಮಾಜವನ್ನು 3ಬಿ ಬದಲು 2ಬಿಗೆ ಸೇರಿಸಿದರೆ ಅನುಕೂಲವಾಗಲಿದೆ. ಈ ವರದಿಯಲ್ಲಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು’ ಎಂದು ಎಚ್ಚರಿಸಿದರು.
ಸಮಾಜದ ಮುಖಂಡರಾದ ವಿಠಲ್ ಚವ್ಹಾಣ, ವಿಶ್ವಾಸರಾವ್ ಜಾದವ, ಜ್ಯೋತಿಬಾ ಕೈಲೋಜಿ, ಶಂಕರ ಶೆಳಕೆ, ಬಾಲಾಜಿ ಸಾವಳೆಕರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.