ADVERTISEMENT

ಧಾರವಾಡಕ್ಕೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ? ಸಂಸ್ಕೃತಿ ಸಚಿವರಿಗೆ ಜೋಶಿ ಪತ್ರ

ಕೇಂದ್ರ ಸಂಸ್ಕೃತಿ ಸಚಿವರಿಗೆ ಪ್ರಲ್ಹಾದ ಜೋಶಿ ಪತ್ರ, ಕಲಾವಿದರ ಒತ್ತಾಯ

ಪ್ರಮೋದ
Published 14 ನವೆಂಬರ್ 2021, 14:23 IST
Last Updated 14 ನವೆಂಬರ್ 2021, 14:23 IST
ಪಂಡಿತ್‌ ಭೀಮಸೇನ ಜೋಶಿ
ಪಂಡಿತ್‌ ಭೀಮಸೇನ ಜೋಶಿ   

ಹುಬ್ಬಳ್ಳಿ: ಸಂಗೀತ ದಿಗ್ಗಜರ ತವರು ಧಾರವಾಡದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವಿಭಾಗೀಯ ಕಚೇರಿ ಸ್ಥಾಪನೆಗೆ ಯತ್ನಗಳು ತೀವ್ರವಾಗಿವೆ.

ಈ ಕುರಿತು ಸ್ಥಳೀಯ ಕಲಾವಿದರ ತಂಡ ಇತ್ತೀಚೆಗೆ ನವದೆಹಲಿಗೆ ತೆರಳಿ ಅಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೂಡ ಕೇಂದ್ರ ಸಂಸ್ಕೃತಿ ಸಚಿವ ಜಿ.ಕಿಶನ್‌ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ಧಾರವಾಡದಲ್ಲಿ ಹಿಂದೂಸ್ತಾನಿ ಸಂಗೀತದ ಧೀಮಂತರು ಸಾಕಷ್ಟು ಸಂಖ್ಯೆಯಲ್ಲಿ ಆಗಿ ಹೋಗಿದ್ದಾರೆ. ಭಾರತ ರತ್ನ ಪಂಡಿತ್‌ ಭೀಮಸೇನ ಜೋಶಿ, ಮಲ್ಲಿಕಾರ್ಜುನ ಮನ್ಸೂರ್‌, ಡಾ. ಗಂಗೂಬಾಯಿ ಹಾನಗಲ್‌ ಮತ್ತು ಬಸವರಾಜ ರಾಜಗುರು ಸೇರಿದಂತೆ ಅನೇಕರು ಸಂಗೀತದ ಮೂಲಕ ಧಾರವಾಡದ ಹೆಸರನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸಿದ್ದಾರೆ.

ADVERTISEMENT

ಧಾರವಾಡ ಹಿಂದೂಸ್ತಾನಿ ಸಂಗೀತದಿಂದ ಮಾತ್ರವಲ್ಲದೇ ಸಾಹಿತ್ಯಿಕವಾಗಿಯೂ ಮಹತ್ವ ಪಡೆದುಕೊಂಡಿದೆ. ಸಾಹಿತ್ಯಿಕ, ಸಾಂಸ್ಕೃತಿಕ ಮತ್ತು ಸಂಗೀತ ಕ್ಷೇತ್ರದಲ್ಲಿ ಪೇಢಾನಗರಿ ಖ್ಯಾತಿ ಹೊಂದಿದೆ. ಆದ್ದರಿಂದ ಇಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವಿಭಾಗೀಯ ಕಚೇರಿ ಪ್ರಾರಂಭಿಸುವ ಅಗತ್ಯವಿದೆ ಎಂದು ಪ್ರಲ್ಹಾದ ಜೋಶಿ ಅವರು ಪತ್ರದಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪ್ರಲ್ಹಾದ ಜೋಶಿ ಅವರ ಪತ್ರದ ಬಳಿಕ ಕೇಂದ್ರ ಸಂಸ್ಕೃತಿ ಮಂತ್ರಾಲಯ ಧಾರವಾಡದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವಿಭಾಗೀಯ ಕಚೇರಿ ಆರಂಭಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸಿದ್ದು, ಕೆಲ ದಿನಗಳಲ್ಲಿಯೇ ಅಕಾಡೆಮಿಗೆ ಒಪ್ಪಿಗೆ ಸಿಗುವ ನಿರೀಕ್ಷೆಯಿದೆ ಎಂದು ಸಚಿವರ ಆಪ್ತರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ತುರ್ತಾಗಿ ಆಗಬೇಕಾದ ಕೆಲಸ: ‘ದೆಹಲಿಯಲ್ಲಿ ಕೇಂದ್ರ ಕಚೇರಿ ಇರುವುದರಿಂದ ಅಲ್ಲಿ ಪಂಜಾಬ್‌, ಉತ್ತರ ಪ್ರದೇಶ, ದೆಹಲಿ, ಮಧ್ಯಪ್ರದೇಶ ರಾಜ್ಯಗಳ ಕಲಾವಿದರದ್ದೇ ಪ್ರಾಬಲ್ಯ. ಇದರಿಂದಾಗಿ ದಕ್ಷಿಣದ ರಾಜ್ಯಗಳ ಕಲಾವಿದರಿಗೆ ಸಿಗಬೇಕಾದ ಫೆಲೋಷಿಪ್‌, ಸಂಗೀತ ಕಾರ್ಯಕ್ರಮಗಳು, ಪ್ರಶಸ್ತಿ, ಅಧ್ಯಕ್ಷ ಸ್ಥಾನ ಹಾಗೂ ಸದಸ್ಯತ್ವ ಹೀಗೆ ಎಲ್ಲಾ ಸೌಲಭ್ಯಗಳಲ್ಲಿ ಅನ್ಯಾಯವಾಗುತ್ತಿದೆ. ಸಂಗೀತಕ್ಕೆ ಸಂಬಂಧಿಸಿದ ಹೊಸ ಪ್ರಯೋಗ ಹಾಗೂ ಸಂಶೋಧನೆಗಳು ನಡೆಯುವುದು ಕೂಡ ದಕ್ಷಿಣದ ರಾಜ್ಯಗಳಲ್ಲಿಯೇ. ಇಲ್ಲಿ ಅಕಾಡೆಮಿ ಆರಂಭವಾದರೆ, ಸ್ಥಳೀಯ ಕಲಾವಿದರಿಗೆ ಆದ್ಯತೆ ಸಿಗುತ್ತದೆ. ಅಕಾಡೆಮಿಯನ್ನು ತುರ್ತಾಗಿ ಆರಂಭಿಸಬೇಕು’ ಎಂದು ಗಾಯಕ ಪಂಡಿತ್ ಕೈವಲ್ಯಕುಮಾರ್‌ ಪ್ರತಿಕ್ರಿಯಿಸಿದರು.

ಧಾರವಾಡದಲ್ಲಿ ಸಂಗೀತ ನಾಟಕ ಅಕಾಡೆಮಿಯ ವಿಭಾಗೀಯ ಕಚೇರಿ ಆರಂಭವಾದರೆ, ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ಸಿಗುತ್ತದೆ. ಆದಷ್ಟು ಬೇಗನೆ ಆಗಬೇಕು.
-‌ಶ್ರೀಧರ ಮಾಂಡ್ರೆ, ತಬಲಾ ವಾದಕರು

ಕೇಂದ್ರ ಕಚೇರಿಯಲ್ಲಿ ಆಗುತ್ತಿರುವ ತಾರತಮ್ಯ ಸರಿಪಡಿಸಲು, ದಕ್ಷಿಣದ ಕಲಾವಿದರಿಗೆ ನ್ಯಾಯ ದೊರೆಯಲು ಧಾರವಾಡದಲ್ಲಿ ಆದಷ್ಟು ಬೇಗನೆ ಅಕಾಡೆಮಿ ಆರಂಭಿಸಬೇಕು.
-ಪಂಡಿತ್‌ ಕೈವಲ್ಯಕುಮಾರ್‌
ಗಾಯಕರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.