ADVERTISEMENT

ಚಳಿಚಳಿ..ಮೈಮನಕ್ಕೆ ಕಚಗುಳಿ

ಕೃಷ್ಣಿ ಶಿರೂರ
Published 16 ಡಿಸೆಂಬರ್ 2018, 13:43 IST
Last Updated 16 ಡಿಸೆಂಬರ್ 2018, 13:43 IST
ಮಂಜಿನ ಚಳಿಯ ಜೊತೆ ಬೆಳಗಿನ ನಡಿಗೆ
ಮಂಜಿನ ಚಳಿಯ ಜೊತೆ ಬೆಳಗಿನ ನಡಿಗೆ   

ಋತುಮಾನ ಚಳಿಯದ್ದಾದರೂ ಆಗಾಗ ಮುಸುಕುವ ಮೋಡ ಹುಬ್ಬಳ್ಳಿ–ಧಾರವಾಡಿಗರಲ್ಲಿ ಚಳಿಗಾಲವನ್ನು ಕೊಂಚ ಮರೆಸಿದ್ದು ಸುಳ್ಳಲ್ಲ. ಆದರೂ ನಡುನಡುವೆ ಒಂದೊಂದು ದಿನ ಬಂದು ಹೋಗುವ ಚಳಿರಾಯ ಮಂದಿಯ ಮೈಕೊರೆಯಿಸುತ್ತಿದ್ದಾನೆ. ಮೈಮನಗಳಿಗೆ ಕಚಗುಳಿ ಇಡುತ್ತಿದ್ದಾನೆ. ನಾಲ್ಕೈದು ದಿನಗಳಿಂದ ಚಳಿಯ ನಡುಕ ಜನರನ್ನು ತಟ್ಟಿದೆ.

ರಾತ್ರಿ ಮೈಕೊರೆಯುತ್ತ ಶುರುವಾಗುವ ಚಳಿ ನಸುಕಿನಲ್ಲಿ ಅತಿರೇಕಕ್ಕೇ ಏರಿರುತ್ತಿದೆ. ಬೆಳಗಿನ ನಡಿಗೆಯ ರೂಢಿಯಿಟ್ಟುಕೊಂಡವರಿಗೆ ಈಗ ಬೆಳಗಾಗುವುದು ಸ್ವಲ್ಪ ತಡವೇ. ಫ್ಯಾನಿಲ್ಲದೆ ರಗ್ಗು ಹೊದ್ದು ಮಲಗುವ ಸುಖ ಚಳಿಗಾಲದಲ್ಲಿ ಹೆಚ್ಚಿನವರಿಗೆ ಖುಷಿ ಕೊಡುವುದು ಸಹಜ. ಇದೇ ಕಾರಣಕ್ಕೆ ಬೇಗ ಏಳಲು ಕಡಿವಾಣ ಬೀಳುತ್ತಿದೆ. ಎದ್ದರೂ ನಿತ್ಯಕರ್ಮಕ್ಕೆ ನೀರು ಮುಟ್ಟಲು ಮನಸ್ಸು ಒಲ್ಲದು. ಸ್ವೆಟರ್‌ ಹಾಕಿ, ಮಪ್ಲರ್‌ ಸುತ್ತಿ ಹೊರಬಿದ್ದಾಗಲೇ ಚಳಿಯಲಿ ನಡೆಯುವ ಮಜಾ ಅನುಭವಕ್ಕೆ ಬರೋದು. ಚುಮುಚುಮು ಚಳಿಯಲಿ ಮನದಲ್ಲೇ ಇಷ್ಟದ ಹಾಡನ್ನು ಗುನುಗುತ್ತ ಬಿರುಸಿನ ಹೆಜ್ಜೆ ಹಾಕುತ್ತಿದ್ದರೆ ಅಕ್ಕಪಕ್ಕದ ಮರಗಿಡಗಳೂ ತಲೆದೂಗುವಂತೆ ಭಾಸವಾಗುವುದು. ಮೂಡಣವ ದಿಟ್ಟಿಸಿದರೆ ಚಳಿಗೆ ಬೆದರಿ ಸೂರ್ಯ ಕೂಡ ಕೊಂಚ ತಡವಾಗಿ ಬರುತ್ತಿದ್ದಾನೋ ಎನ್ನಿಸಲಿದೆ. ಕೆಂಪು ಬಣ್ಣವ ಮೆದ್ದು ಮೇಲೆದ್ದು ಬರುವ ರವಿಯನ್ನು ಮಂಜಿನ ನಡುವೆ ನೋಡುವ ದೃಶ್ಯ ಅಭೂತಪೂರ್ವವೆನಿಸಿಲಿದೆ. ಚಳಿಯ ಜೊತೆ ಇಬ್ಬನಿ ಆವರಿಸಿದ ನಸುಕಿನಲ್ಲಿ ಲಾಂಗ್‌ ಡ್ರೈವ್‌ ಹೋಗುವುದು ಕೂಡ ಮನಸ್ಸಿಗೆ ಮತ್ತಷ್ಟು ಮುದ ನೀಡಲಿದೆ.

ಚಳಿಯುಳ್ಳ ಬೆಳಗು ಎಂದರೆ ಬೆಂದ್ರೆಯಜ್ಜನ ಮೂಡಲ ಮನೆಯಾ ಮುತ್ತಿನ ನೀರಿನ ಎರಕSವ ಹೊಯ್ದಾ ನುಣ್ಣ ನ್ನೆರಕSವ ಹೊಯ್ದಾ... ಹಾಡು ನೆನಪಿನಂಗಳದಲ್ಲಿ ಹಾಜರಾಗುತ್ತದೆ. ಅಂಬರೀಷ್‌–ಅಂಬಿಕಾ ಅಭಿಯನಯದ ಚಕ್ರವ್ಯೂಹ ಸಿನಿಮಾದ ಚಳಿ ಚಳಿ ತಾಳೆನು ಈ ಚಳಿಯ.... ಹಾಡು ನೆನಪಾಗದಿರಲು ಸಾಧ್ಯವೇ ಇಲ್ಲ. ನೇಸರದ ರೇಶಿಮೆಯಂತ ಎಳೆ ಕಿರಣಗಳು ಮಂಜಿನ ಮುಸುಕನ್ನು ಸೀಳಿ ಬರುವ ನೋಟ ವರ್ಣಿಸಲಸದಳ. ಇಬ್ಬನಿ ತಬ್ಬಿದ ಇಳೆಯಲಿ ರವತೇಜ ಕಣ್ಣು ತೆರೆದ... ಗೀತೆ ನೆನಪಿಗೆ ಬರದಿರಲು ಸಾಧ್ಯವೇ? ರವಿ ಬಂದ ಗಡಿಬಿಡಿಯಲ್ಲಿ ಉಲಿಯುತ್ತ ಗೂಡು ಬಿಟ್ಟು ಹಾರುವ ಹಕ್ಕಿಗಳ ನೋಡುವುದೇ ಅಪೂರ್ವ ಗಳಿಗೆಯೆನಿಸಲಿದೆ. ದಾರಿ ಕಾಣದಷ್ಟು ಮಂಜು ಮುಸುಕಿದ್ದರಂತೂ ಪ್ರಕೃತಿ ಸೌಂದರ್ಯಕ್ಕೆ ಸಾಟಿಯೇ ಇಲ್ಲ. ಛಾಯಾಚಿತ್ರಗಾರರ ಪಾಲಿಗಂತೂ ಇಂಥ ದೃಶ್ಯ ಫೋಟೊಗೆ ವಿಭಿನ್ನ ಚೌಕಟ್ಟು ಕಟ್ಟಿಕೊಡಲಿದೆ. ಪಟ ಪಟ ಸುರಿಯುವ ಇಬ್ಬನಿಯ ಸದ್ದು ನಮ್ಮನ್ನು ಅಜ್ಞಾತಲೋಕಕ್ಕೆ ಕರೆದೊಯ್ದಂತ ಅನುಭೂತಿ ಕಟ್ಟಿಕೊಡಲಿದೆ. ಜೇಡ ಹೆಣೆಯುವ ಬಲೆಗಳ ಮೇಲೆ ಮುತ್ತಿಕೊಳ್ಳುವ ಇಬ್ಬನಿ ಎಳೆಬಿಸಿಲಿಗೆ ನಾಚಿ ನೀರಾದಾಗ ಪ್ರಕೃತಿಗೆ ವಜ್ರದ ಹಾರ, ಮುತ್ತಿನ ತೊಡಿಸಿದಂತೆ ಕಾಣುವ ಸುಂದರ ಘಳಿಗೆ ಅವಿಸ್ಮರಣೀಯ.

ADVERTISEMENT

ನಡೆಯವ ಹಾದಿಯಲ್ಲಿ ಯಾರಾದರೂ ಬೆಂಕಿ ಹಾಕಿ ಮೈ ಕಾಯಿಸುತ್ತಿದ್ದರೆ ಮನಸ್ಸು ಬಾಲ್ಯಕ್ಕೆ ಜಾರದೇ ಇರದು. ಅದರಲ್ಲೂ ಹಳ್ಳಿಯಲ್ಲಿ, ಕಾಡಂಚಿನ ಮನೆಗಳಲ್ಲಿ ಚಳಿಯ ಕಾರುಬಾರು ಹೆಚ್ಚೆ. ನಡುವೆ ಬೆಂಕಿ ಹಾಕಿ ಸುತ್ತಲೂ ಮೈ ಕಾಯಿಸಲು ಕೂತವರ ಸಂದಿಯಲಿ ನುಸುಳಿ ತುಸು ಜಾಗ ಮಾಡಿಕೊಂಡು ಒತ್ತೊತ್ತಗೆ ಕುಳಿತುಕೊಳ್ಳುವ ಮಜವೇ ಅನನ್ಯ.

ಇನ್ನು ಕೆಲವರು ‘ಚಳಿಗಾಲ ಯಾಕಾದ್ರೂ ಬಂತೆನೋ. ಮೈಕೈ ಚರ್ಮ ಬಿರಿಯಲಿಕ್ಕೆ ಶುರುವಾಯ್ತು’ ಎಂದು ಗೊಣಗುವವರೂ ಇದ್ದಾರೆ. ಚಳಿ ಬಿದ್ದಾಗ ಶೀತ ಪ್ರಕೃತಿಯವರಿಗೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ ಸಮಸ್ಯೆ. ಚರ್ಮ ಬಿರಿಯದಂತೆ ಕೊಂಚ ಕಾಳಜಿ ವಹಿಸಿದರೆ ಚಳಿಗಾಲ ನಿಜಕ್ಕೂ ಮೈಮನಸ್ಸಿಗೆ ಮುದ ನೀಡಲಿದೆ.

ಮತ್ತಿನ್ನೇಕೆ ತಡ; ಈಗಾಗಲೇ ಅಪರೂಪವಾಗುತ್ತಿರುವ ಚಳಿ, ಅಪರೂಪಕ್ಕೆ ಬಂದಾಗಲೇ ರವಿ ತನ್ನ ಕಿರಣ ಸೂಸುವ ಮೊದಲೇ ಮನೆಯಿಂದ ಹೊರಗೆ ಅಡಿಯಿಡಿ. ಮೈಮನಕ್ಕೆ ಚಳಿ ಇಡುವ ಕಚಗುಳಿಯನ್ನು ಮನಸಾರೆ ಆಸ್ವಾದಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.