ADVERTISEMENT

ವಿಶ್ವ ಅಂಗವಿಕಲರ ದಿನ: ಸಮಸ್ಯೆಗಳಿಗೆ ಸವಾಲೊಡ್ಡಿದ ಛಲಗಾರರು

ಇಂದು ವಿಶ್ವ ಅಂಗವಿಕಲರ ದಿನ; ಸಾಧನೆಗೆ ಶ್ಲಾಘನೆಯಷ್ಟೇ ಸಾಲದು, ಬೇಕಿದೆ ನೆರವು

ಪ್ರಮೋದ
Published 3 ಡಿಸೆಂಬರ್ 2021, 2:43 IST
Last Updated 3 ಡಿಸೆಂಬರ್ 2021, 2:43 IST
ಮಂಗಳಾ ಬೆಟಗೇರಿ
ಮಂಗಳಾ ಬೆಟಗೇರಿ   

ಹುಬ್ಬಳ್ಳಿ: ಈ ನಾಲ್ಕೂ ಜನ ಸಾಧಕರು ಬಾಲ್ಯದಲ್ಲಿ ಕಾಲುಗಳನ್ನು ಕಳೆದುಕೊಂಡವರು. ಮುಂದಿನ ಬದುಕು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕೂರದೇ ಛಲ, ಆತ್ಮವಿಶ್ವಾಸ ಹಾಗೂ ಸಾಧನೆಯ ಹುಮ್ಮಸ್ಸಿನಿಂದ ಗಟ್ಟಿತನದ ಬದುಕು ರೂಪಿಸಿಕೊಂಡವರು. ವಿವಿಧ ಕ್ರೀಡೆಗಳಲ್ಲಿ ಪದಕಗಳ ಸಾಧನೆ ಮಾಡಿ ಪ್ರೇರಣೆಯಾದವರು.

ವೃತ್ತಿಪರ ವೇಟ್‌ಲಿಫ್ಟರ್‌ ಆಗಿರುವ ಧಾರವಾಡದ ಮಂಗಳಾ ಎಂ. ಬೆಟಗೇರಿ ಇದೇ ವರ್ಷ ದಾವಣಗೆರೆಯಲ್ಲಿ ನಡೆದ ರಾಜ್ಯ ಪ್ಯಾರಾ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮೈಸೂರಿನಲ್ಲಿ ಜರುಗಿದ ರಾಷ್ಟ್ರೀಯ ಪ್ಯಾರಾ ಕ್ರೀಡಾಕೂಟದ ಶಾಟ್‌ಪಟ್‌ನಲ್ಲಿ ಕಂಚು ಗೆದ್ದಿದ್ದರು. ಒಬ್ಬ ಮಗನ ತಾಯಿಯಾಗಿರುವ ಮಂಗಳಾ ಎಂಟು ತಿಂಗಳು ಕೂಸಾಗಿದ್ದಾಗಲೇ ಬಲಗಾಲಿನ ಸಮಸ್ಯೆ ಎದುರಿಸಿದರು.

ಇದಕ್ಕೆ ಎದೆಗುಂದಿದೆ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡುತ್ತಿದ್ದಾರೆ. ಜಾವೆಲಿನ್‌ ಎಸೆತ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಸತ್ತೂರಿನ ಮನೆಯಲ್ಲಿ ಫ್ಯಾಷನ್‌ ಡಿಸೈನಿಂಗ್ ಮಾಡುತ್ತ ಬದುಕು ಕಟ್ಟಿಕೊಂಡಿದ್ದಾರೆ.

ADVERTISEMENT

ಅಥ್ಲೆಟಿಕ್ಸ್‌ ಸಾಧಕ: ಧಾರವಾಡ ತಾಲ್ಲೂಕಿನ ಗೋವನಕೊಪ್ಪದ ಬಸವರಾಜ ಉ‌ಪ್ಪಾರ ರಾಜ್ಯ ಹಾಗೂ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನ ಜಾವೆಲಿನ್‌ ಎಸೆತದಲ್ಲಿ (ಚಿನ್ನ), ಶಾಟ್‌ಪಟ್ (ಕಂಚು) ಪದಕಗಳನ್ನು ಗೆದ್ದುಕೊಂಡಿದ್ದಾರೆ. ಪೋಲಿಯೊ ಕಾರಣದಿಂದ ಎರಡು ವರ್ಷದವರಿದ್ದಾಗ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದು, ಮಂಡಿಯೂರಿ ಮುಂದೆ ಸಾಗುತ್ತಾರೆ. ಇತ್ತೀಚೆಗೆ ಶೂಟಿಂಗ್‌ ಕಲಿಕೆ ಕೂಡ ಆರಂಭಿಸಿದ್ದಾರೆ.

ಹೆಸ್ಕಾಂನಲ್ಲಿ ಕಿರಿಯ ಸಹಾಯಕರಾಗಿರುವ ಬಸವರಾಜ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವ ಹೆಬ್ಬಯಕೆಯಿದೆ.

ದಾಖಲೆ ಮುರಿದ ಗೌಸ್‌: ಪೇಢಾ ನಗರಿಯ ‌ಮೊಹಮ್ಮದ್‌ ಗೌಸ್‌ ಕಳಸಾಪುರ ಬಾಲ್ಯದಲ್ಲಿ ಬಲಗಾಲಿನ ಸ್ವಾಧೀನ ಕಳೆದುಕೊಂಡರೂ ಬಾಡಿಬಿಲ್ಡಿಂಗ್‌, ಅಥ್ಲೆಟಿಕ್ಸ್‌, ಕುಸ್ತಿ ಮತ್ತು ಪವರ್‌ ಲಿಫ್ಟಿಂಗ್‌ನಲ್ಲಿ ಸಾಧನೆ ಮಾಡಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಪ್ಯಾರಾ ಟೂರ್ನಿಗಳಲ್ಲಿ ತಲಾ 12 ಪದಕಗಳನ್ನು ಜಯಿಸಿದ್ದಾರೆ.‌

ಗೌಸ್‌ ಇದೇ ವರ್ಷ ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಪ್ಯಾರಾ ಪವರ್‌ಲಿಫ್ಟಿಂಗ್‌ನ ಸ್ಟ್ರಂಥ್‌ ಲಿಫ್ಟ್‌ನ 68 ಕೆ.ಜಿ. ವಿಭಾಗದಲ್ಲಿ ಹರಿಯಾಣದ ಕ್ರೀಡಾಪಟುವಿನ 28 ವರ್ಷಗಳ ಹಿಂದಿನ ದಾಖಲೆ ಮುರಿದು ಚಿನ್ನದ ಪದಕ ಗೆದಿದ್ದಾರೆ. ತಮ್ಮ ಸಾಧನೆ ಜೊತೆಗೆ ಕ್ರೀಡಾಪಟುಗಳು ಮತ್ತು ಸೈನ್ಯಕ್ಕೆ ಸೇರಬಯಸುವ ಆಸಕ್ತರಿಗೂ ತರಬೇತಿ ನೀಡುತ್ತಿದ್ದಾರೆ. ಇದಕ್ಕಾಗಿ ಧಾರವಾಡದ ಗಾಂಧಿನಗರದಲ್ಲಿ ಸ್ಪಾರ್ಕ್‌ ಫಿಟ್‌ನೆಸ್‌ ಕೇಂದ್ರ ನಡೆಸುತ್ತಿದ್ದಾರೆ.

ಬೆಳಿಗ್ಗೆ ಹಾಲು ಮಾರಾಟ; ಸಂಜೆ ಕ್ರೀಡಾಭ್ಯಾಸ: ಧಾರವಾಡ ತಾಲ್ಲೂಕಿನ ಯತ್ತಿನಗುಡ್ಡ ಗ್ರಾಮದ ಮಹೇಶ ಗೂಲಪ್ಪನವರ ಅವರ ಎರಡೂ ಕಾಲುಗಳು ಪೋಲಿಯೊಕ್ಕೆ ತುತ್ತಾಗಿವೆ. ನಿತ್ಯ ಬೆಳಗಿನ ಜಾವ ಕನಿಷ್ಠ 10 ಲೀಟರ್‌ ಹಾಲು ಮಾರಾಟ ಮಾಡಿ ಬಂದು, ಸಂಜೆ ಧಾರವಾಡದ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಅಭ್ಯಾಸ ಮಾಡುತ್ತಾರೆ. ಇದು ಒಂಬತ್ತು ವರ್ಷಗಳಿಂದ ನಡೆದುಕೊಂಡ ಬಂದ ಅವರ ನಿತ್ಯದ ದಿನಚರಿ.

ಮಹೇಶ, ಇದೇ ವರ್ಷ ಮೈಸೂರಿನಲ್ಲಿ ನಡೆದ 31ನೇ ರಾಜ್ಯ ಪ್ಯಾರಾ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಡಿಸ್ಕಸ್‌ ಎಸೆತದಲ್ಲಿ ಕಂಚು, ಜಾವೆಲಿನ್‌ ಎಸೆತದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.