ಕುಂದಗೋಳ: ಸಾರ್ವಜನಿಕ ಗ್ರಂಥಾಲಯಗಳ ತೆರೆದಿರುವ ಸಮಯ ದಿಢೀರ್ ಬದಲಾವಣೆಯಾದ ಕಾರಣ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯಕ್ಕೆ ಬಂದ ಓದುಗರು ಮತ್ತು ಗ್ರಂಥಾಲಯ ಸಿಬ್ಬಂದಿ ನಡುವೆ ಬುಧವಾರ ಬೆಳಿಗ್ಗೆ ಕೆಲಕಾಲ ಚರ್ಚೆ ನಡೆಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯದಿಂದ ಹೊರಡಿಸಲಾದ ಸುತ್ತೋಲೆಯಲ್ಲಿ ಬೆಳಿಗ್ಗೆ 8 ರಿಂದ ರಾತ್ರಿ 8 ರವರೆಗೆ ತೆರೆದಿರುವ ಗ್ರಂಥಾಲಯಗಳನ್ನು ದೊಡ್ಡ ಶಾಖಾ ಗ್ರಂಥಾಲಯಗಳೆಂದು, ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 11.30ರವೆರೆಗೆ ಹಾಗೂ ಸಂಜೆ 4 ರಿಂದ ರಾತ್ರಿ 8 ರವರೆಗೆ ಕಾರ್ಯ ನಿರ್ವಹಿಸುವ ಗ್ರಂಥಾಲಯಗಳನ್ನು ಚಿಕ್ಕ ಶಾಖಾ ಗ್ರಂಥಾಲಯಗಳೆಂದು ವಿಭಾಗಿಸಿ ಆದೇಶ ಹೊರಡಿಸಲಾಗಿದೆ.
‘ಗ್ರಂಥಾಲಯಗಳ ಸಮಯ ಬದಲಾವಣೆಯಿಂದ ಬೇಜಾರಾಗಿದೆ. ಬೆಳಿಗ್ಗೆ ಮನೆ ಕೆಲಸ ಮುಗಿಸಿ 10 ಗಂಟೆಯ ನಂತರ ಬಂದು ಪತ್ರಿಕೆ, ನಿಯತಕಾಲಿಕಗಳನ್ನು ಓದುತ್ತಿದ್ದೆ. ಯಾವುದೇ ಸೂಚನೆ ನೀಡದೆ ಇಂದು ಏಕಾಏಕಿ ಸಮಯ ಬದಲಾವಣೆ ಮಾಡಿದ್ದಕ್ಕೆ ಬೇಸರರಾಗಿದೆ’ ಎಂದು ಓದುಗರಾದ ವಿಶಾಲಾಕ್ಷಿ ಹೇಳಿದರು.
‘ಈ ಮೊದಲು ಗ್ರಂಥಾಲಯದ ಸಮಯ ಬೆಳಗ್ಗೆ 10 ರಿಂದ ಸಂಜೆ 5.30ರವರೆಗೆ ಇತ್ತು. ಊರಿಂದ ಇಲ್ಲಿಗೆ ಓದಲು ಬರುವ ನಮಗೆ ಅನುಕೂಲವಾಗಿತ್ತು. ಬದಲಾದ ಸಮಯದಲ್ಲಿ 11.30ಕ್ಕೆ ಗ್ರಂಥಾಲಯ ಮುಚ್ಚುವ ಕಾರಣ ಮಧ್ಯಾಹ್ನ ಮತ್ತೆ ಊರಿಗೆ ಇಲ್ಲ ದೇವಸ್ಥಾನಕ್ಕೆ ತೆರಳಿ ಓದುಬೇಕಾಗಲಿದೆ’ ಎಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿದ್ದ ಕಮಡೊಳ್ಳಿ ಗ್ರಾಮದ ಅಜಯ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.