ADVERTISEMENT

ವೆಬ್‌ಸೈಟ್‌ನಲ್ಲಿ ₹3.38 ಲಕ್ಷ ಹೂಡಿಕೆ ಮಾಡಿ ಮೋಸ ಹೋದ ಜನ

ಹೂಡಿಕೆ ಹೆಸರಲ್ಲಿ ವಂಚನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 17:40 IST
Last Updated 18 ಜೂನ್ 2021, 17:40 IST

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಇಂಧನ ಇಲಾಖೆಯ ವೆಬ್‌ಸೈಟ್ಹೆಸರಿನಲ್ಲಿ ಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡಿರುವ ಅಪರಿಚಿತರು, ನಂತರ ಹಣ ಹಿಂದಿರುಗಿಸದೆ ವಂಚಿಸಿದ್ದಾರೆ. ಈ ಕುರಿತು ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ, ಹುಬ್ಬಳ್ಳಿ ಸೈಬರ್ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ವಾಟ್ಸ್‌ಆ್ಯಪ್‌ನಲ್ಲಿ ಪರಿಚಯವಾಗಿದ್ದ ಅಪರಿಚಿತ ವ್ಯಕ್ತಿ www.accecard.com ಎಂಬ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ತಿಳಿಸಿದ್ದ. ಅದರಂತೆ ವೆಬ್‌ಸೈಟ್ ನೋಡಿದಾಗ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂವಿದ್ಯುತ್, ಹೊಸ ಮತ್ತು ನವೀಕರಿಸಬಹುದಾದ ಶಕ್ತಿ ಖಾತೆ ಸಚಿವರ ಭಾವಚಿತ್ರವಿರುವ ಜಾಹೀರಾತುಗಳಿದ್ದವು. ಅದರಲ್ಲಿ ವಿವಿಧ ರೀತಿಯ ಹೂಡಿಕೆ ಯೋಜನೆಗಳನ್ನು ಉಲ್ಲೇಖಿಸಲಾಗಿತ್ತು. ನಿತ್ಯ ನಿಶ್ಚಿತ ಲಾಭದೊಂದಿಗೆ ವೇತನ ನೀಡುವುದಾಗಿ ಅಲ್ಲಿ ನಮೂದಿಸಿದ್ದರಿಂದ ದೂರುದಾರರು ₹1,516 ಹೂಡಿಕೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಮೊದಲಿಗೆಹೂಡಿದ ಹಣಕ್ಕೆ ದೂರುದಾರರಿಗೆ ಲಾಭ ಬರುವಂತೆವಂಚಕರು ಮಾಡಿದ್ದಾರೆ. ಇದರೊಂದಿಗೆ ಇತರರನ್ನು ಹೂಡಿಕೆಗೆ ಪ್ರೇರೇಪಿಸಿದ್ದಾರೆ. ಲಾಭದ ಆಸೆಗೆ ಜನ ವೆಬ್‌ಸೈಟ್‌ನಲ್ಲಿದ್ದ ವಿವಿಧ ಸೋಲಾರ್ ಪ್ಯಾನಲ್ ಪ್ಲಾನ್‌ಗಳಲ್ಲಿ ಹಂತ ಹಂತವಾಗಿ ಒಟ್ಟು ₹3.38 ಲಕ್ಷ ಹೂಡಿಕೆ ಮಾಡಿದ್ದಾರೆ. ಇದಾದ ಕೆಲ ದಿನಗಳ ಬಳಿಕ ವಂಚಕರು ಹೂಡಿಕೆದಾರರಿಗೆ ಲಾಭ ವಿತರಿಸದೆ, ವೆಬ್‌ಸೈಟ್ ಮತ್ತು ವಾಟ್ಸ್‌ಆ್ಯಪ್ ನಂಬರ್ ಬಂದ್ ಮಾಡಿಕೊಂಡಿದ್ದಾರೆ. ಯಾರ ಸಂಪರ್ಕಕ್ಕೂ ಸಿಗದೆ ಹೂಡಿಕೆ ಹೆಸರಲ್ಲಿ ಸಂಗ್ರಹಿಸಿದ್ದ ಹಣ ಲಪಟಾಯಿಸಿದ್ದಾರೆ ಎಂದು ಹೇಳಿದರು.

ADVERTISEMENT

ವಂಚಕ ಜಾಲ ಪತ್ತೆಗೆ ಬಲೆ ಬೀಸಲಾಗಿದೆ. ಆನ್‌ಲೈನ್‌ ವೇದಿಕೆಗಳಲ್ಲಿ ಲಾಭದ ಆಸೆ ತೋರಿಸಿ, ಹೂಡಿಕೆಗೆ ಪ್ರೇರೇಪಿಸುವವರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು. ಅಪರಿಚಿತರ ಮನವಿ ಮೇರೆಗೆ ಯಾವುದೇ ಕಾರಣಕ್ಕೂ ಆನ್‌ಲೈನ್‌ನಲ್ಲಿ ಹಣ ಹೂಡಿಕೆ ಹಾಗೂ ವಹಿವಾಟು ಮಾಡಬಾರದು ಎಂದು ಪೊಲೀಸರು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.