ADVERTISEMENT

‘ಬಾಲ ಕಾರ್ಮಿಕರ ಕೆಲಸಕ್ಕೆ ತೆಗೆದುಕೊಂಡರೆ ಶಿಕ್ಷೆ ಖಚಿತ’: ತಹಶೀಲ್ದಾರ್‌

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 5:07 IST
Last Updated 9 ಆಗಸ್ಟ್ 2025, 5:07 IST
ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು
ಅಣ್ಣಿಗೇರಿ ತಹಶೀಲ್ದಾರ ಕಚೇರಿಯಲ್ಲಿ ಹಮ್ಮಿಕೊಂಡ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಸಭೆಯಲ್ಲಿ ಭಿತ್ತಿ ಪತ್ರ ಬಿಡುಗಡೆ ಮಾಡಲಾಯಿತು   

ಅಣ್ಣಿಗೇರಿ: ಸ್ಥಳೀಯ ತಹಶೀಲ್ದಾರ್‌ ಕಚೇರಿಯಲ್ಲಿ ತಾಲ್ಲೂಕು ಮಟ್ಟದ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಕಾರ್ಯಪಡೆ ಮತ್ತು ಪುನರ್ವಸತಿ ಸಮಿತಿ ಸಭೆಯನ್ನು ತಹಶೀಲ್ದಾರ್‌ ಮಂಜುನಾಥ ದಾಸಪ್ಪ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ದಾಸಪ್ಪ ಮಾತನಾಡಿ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳ (6 ರಿಂದ 14 ವರ್ಷದೊಳಗಿನ) ದುಡಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ. 14 ವರ್ಷ ಮೇಲ್ಪಟ್ಟು 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಸಿಕೊಳ್ಳುವುದು ನಿಷೇಧಿಸಲಾಗಿದೆ. ಯಾವುದೇ ಉದ್ದಿಮೆಯಲ್ಲಿ ಅಥವಾ ಅಂಗಡಿ ವಾಣಿಜ್ಯ ಸಂಸ್ಥೆಗಳಲ್ಲಿ, ಹೊಟೇಲ್, ಗ್ಯಾರೇಜ್‌ಗಳಲ್ಲಿ, ಇಟ್ಟಿಗೆ ಭಟ್ಟಿ ಸೇರಿದಂತೆ ಮುಂತಾದ ಸಂಸ್ಥೆಗಳಲ್ಲಿ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಒಂದು ವೇಳೆ ಬಾಲಕಾರ್ಮಿಕ ಅಥವಾ ಕಿಶೋರ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ ಕಾನೂನು ಪ್ರಕಾರ ₹20 ರಿಂದ ₹50 ಸಾವಿರ ದಂಡ ಅಥವಾ 6 ತಿಂಗಳಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಬಾಲಕಾರ್ಮಿಕ ಕಾಯ್ದೆಯಲ್ಲಿ ಇದೆ. ದುಡಿಯುತ್ತಿರುವ ಮಕ್ಕಳು ಕಂಡು ಬಂದಲ್ಲಿ ತಕ್ಷಣ ಸಾರ್ವಜನಿಕರು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆಮಾಡಿ ಎಂದು ತಿಳಿಸಿದರು.

ಕಾರ್ಮಿಕ ಇಲಾಖೆಯಿಂದ 2024-25ನೇ ಸಾಲಿನಲ್ಲಿ 46 ತಪಾಸಣೆ ಕೈಗೊಂಡು ಅದರಲ್ಲಿ 4 ಪ್ರಕರಣಗಳನ್ನು ಮಾಲಿಕರ ವಿರುದ್ಧ ದಾಖಲಿಸಲಾಗಿದೆ. ಮಾಲಿಕರಿಂದ ₹20 ಸಾವಿರ ದಂಡವನ್ನು ನ್ಯಾಯಾಲಯದಿಂದ ವಿಧಿಸಲಾಗಿದೆ. 2025-26 ನೇ ಸಾಲಿನಲ್ಲಿ 15 ತಪಾಸಣೆ ಕೈಗೊಳ್ಳಲಾಗಿದೆ ಎಂದರು.

ADVERTISEMENT

ಸಭೆಯ ನಂತರ ಪಟ್ಟಣದ ವ್ಯಾಪ್ತಿಯಲ್ಲಿರುವ ಹೊಟೇಲ್, ಬಾರ್, ರೆಸ್ಟೋರೆಂಟ್‌, ಅಂಗಡಿ ವಾಣಿಜ್ಯ ಸಂಸ್ಥೆಗಳಿಗೆ ತಹಶೀಲ್ದಾರ್‌ ನೇತೃತ್ವದಲ್ಲಿ ವಿವಿಧ ಅಧಿಕಾರಿಗಳ ತಂಡದೊಂದಿಗೆ ತಪಾಸಣೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಒಬ್ಬ ಬಾಲಕಾರ್ಮಿಕ ಮತ್ತು ಒಬ್ಬ ಕಿಶೋರ ಕಾರ್ಮಿಕನನ್ನು ರಕ್ಷಿಸಲಾಯಿತು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಬಸವರಾಜ ಪಂಚಾಕ್ಷರಿಮಠ, ತಾ.ಪಂ ಇಒ ಪಿ.ಆರ್.ಬಡೆಖಾನವರ, ಆರೋಗ್ಯ ಅಧಿಕಾರಿ ಎಮ್.ಎ.ತಹಶೀಲ್ದಾರ್‌, ಬಿ.ಎಸ್.ಹೊಳೆನ್ನವರ, ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕಿ ಸಂಗೀತಾ ಬೆನಕನಕೊಪ್ಪ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಸ್.ಆರ್.ಗಣಾಚಾರಿ, ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಫಕ್ಕಿರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.