ADVERTISEMENT

ಬಾಲ್ಯ ವಿವಾಹ | ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು

ಬಾಲ್ಯವಿವಾಹ, ಅತ್ಯಾಚಾರ, ಪೋಕ್ಸೊ, ಬಾಲ ಗರ್ಭಿಣಿ ಸಂತ್ರಸ್ತೆಯರು ಮತ್ತು ಅವರ ಪಾಲಕರೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 5:03 IST
Last Updated 16 ಜುಲೈ 2025, 5:03 IST
<div class="paragraphs"><p>ಧಾರವಾಡದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪಾಲಕರೊಂದಿಗೆ ಮಾತನಾಡಿದರು</p></div>

ಧಾರವಾಡದಲ್ಲಿ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಅವರು ಪಾಲಕರೊಂದಿಗೆ ಮಾತನಾಡಿದರು

   

ಧಾರವಾಡ: ‘ಬಾಲ್ಯ ವಿವಾಹದಿಂದ ಆ ಮಕ್ಕಳ ಆರೋಗ್ಯ, ಶಿಕ್ಷಣ, ಮತ್ತು ಮಾನಸಿಕ ಸ್ಥಿತಿ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಈ ಪದ್ಧತಿಯ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕ, ವಾರ್ತಾ ಇಲಾಖೆ ವತಿಯಿಂದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಲ್ಯವಿವಾಹ, ಅತ್ಯಾಚಾರ, ಪೋಕ್ಸೊ ಮತ್ತು ಬಾಲ ಗರ್ಭಿಣಿ ಸಂತ್ರಸ್ತೆಯರು ಮತ್ತು ಅವರ ಪಾಲಕರೊಂದಿಗೆ ಸಂವಾದ ಮತ್ತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಬಾಲ್ಯ ವಿವಾಹದ ಬಗ್ಗೆ ಮಾಹಿತಿ ನೀಡಿದವರ ವಿವರ ಗೌಪ್ಯವಾಗಿ ಇಡಲಾಗುತ್ತದೆ. ಇಲಾಖೆಗಳೊಂದಿಗೆ ಸಾರ್ವಜನಿಕರು ಕೈಜೋಡಿಸಿದ ಬಾಲ್ಯ ವಿವಾಹವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ’ ಎಂದರು.

‘ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ. ಬಾಲ್ಯವಿವಾಹ ಮಾಹಿತಿ ಇದ್ದರೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಬೇಕು. ತಂಡದವರು ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾನೂನು ಕುರಿತು ತಿಳಿಸುತ್ತಾರೆ. ಬಾಲಕಿಯನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಗುತ್ತದೆ. ಬಾಲಕಿಗೆ ಸಖಿ ಕೇಂದ್ರದಲ್ಲಿ ತಾತ್ಕಾಲಿಕ ಆಶ್ರಯ ನೀಡಿ, ಆಪ್ತಸಮಾಲೋಚನೆ ನಡೆಸಲಾಗುತ್ತದೆ. ಶಿಕ್ಷಣ ಮುಂದುವರಿಸಲು ನೆರವು ನೀಡಲಾಗುತ್ತದೆ’ ಎಂದು ತಿಳಿಸಿದರು.

13ರಿಂದ 19 ವರ್ಷ ವಯೋಮಾನದಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಆಗುತ್ತವೆ. ಈ ವಯೋಮಾನದಲ್ಲಿ ಪಾಲಕರು ಅವರಿಗೆ ತಿಳಿವಳಿಕೆ ನೀಡಬೇಕು.

‘ಹೆಣ್ಣು ಮಗು ಜನಿಸಿದರೆ ಭಾರ ಅಂದುಕೊಳ್ಳಬಾರದು. ಅವರಿಗೆ ಶಿಕ್ಷಣ ಕೊಡಿಸಬೇಕು. ಸಾಧನೆ ಮಾಡಲು ಪ್ರೋತ್ಸಾಹ ನೀಡಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಬಿ.ವೈ.ಪಾಟೀಲ ಮಾತನಾಡಿ, ‘ಬಾಲ್ಯವಿವಾಹಕ್ಕೆ ಒಳಗಾದ, ದೌರ್ಜನ್ಯಕ್ಕೆ ಒಳಗಾದ, ಭಿಕ್ಷಾಟನೆಯಲ್ಲಿ ತೊಡಗಿದ ಮಕ್ಕಳ ಪ್ರಕರಣ, ಬಾಲಕಾರ್ಮಿಕ ಮಕ್ಕಳ ಪ‍್ರಕರಣ, ದತ್ತು ಪ್ರಕ್ರಿಯೆ ಮುಂತಾದ ವಿಷಯಗಳನ್ನು ಮಕ್ಕಳ ಕಲ್ಯಾಣ ಸಮಿತಿ ನಿರ್ವಹಿಸುತ್ತದೆ. ಬಾಲ ಗರ್ಭಿಣಿಯರಿಗೆ ಜಿಲ್ಲೆಯಲ್ಲಿ ಪ್ರತ್ಯೇಕವಾದ ವಸತಿ ನಿಲಯದ ಅಗತ್ಯವಿದೆ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಎಚ್.ಎಚ್‌.ಕುಕನೂರ, ಡಿಡಿಪಿಐ ಎಸ್.ಎಸ್.ಕೆಳದಿಮಠ, ಡಿಎಚ್‌ಒ ಡಾ. ಎಸ್.ಎಂ.ಹೊನಕೇರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.