ADVERTISEMENT

ಹಾಸ್ಟೆಲ್‌ಗಳಲ್ಲಿ ಬಾಲ ಗರ್ಭಿಣಿಯರು: SIT ತನಿಖೆಗೆ BJP ಮಹಿಳಾ ಮೋರ್ಚಾ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2025, 12:38 IST
Last Updated 12 ಡಿಸೆಂಬರ್ 2025, 12:38 IST
<div class="paragraphs"><p>ಸಿ.ಮಂಜುಳಾ</p></div>

ಸಿ.ಮಂಜುಳಾ

   

ಹುಬ್ಬಳ್ಳಿ: ‘ರಾಜ್ಯದಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗುತ್ತಿದ್ದು, ಅದರಲ್ಲೂ ಸರ್ಕಾರಿ ಎಸ್‌ಸಿ., ಎಸ್‌ಟಿ., ಬಾಲಕಿಯರ ಹಾಸ್ಟೆಲ್‌ಗಳಲ್ಲಿ ಈ ಪ್ರಕರಣಗಳು ಹೆಚ್ಚು ಕಂಡುಬರುತ್ತಿವೆ. ಈ ಬಗ್ಗೆ ತನಿಖೆ ನಡೆಸಲು ಸರ್ಕಾರ ಎಸ್‌ಐಟಿ ರಚಿಸಬೇಕು’ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷೆ ಸಿ.ಮಂಜುಳಾ ಆಗ್ರಹಿಸಿದರು. 

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿನ ಬಾಲಕಿಯರ ಕೆಲ ವಿದ್ಯಾರ್ಥಿ ನಿಲಯಗಳಲ್ಲಿ ಪುರುಷ ವಾರ್ಡನ್‌ಗಳನ್ನು ನೇಮಕ ಮಾಡಲಾಗಿದ್ದು, ಬಾಲ ಗರ್ಭಿಣಿಯರ ಪ್ರಕರಣಗಳಲ್ಲಿ ಇವರ ಪಾತ್ರವೂ ಇದೆ ಎಂಬ ಶಂಕೆಯಿದೆ’ ಎಂದು ಆರೋಪಿಸಿದರು.

ADVERTISEMENT

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅತ್ಯಾಚಾರ, ಕೊಲೆ, ಬಾಣಂತಿಯರ ಸಾವು ಮತ್ತು ಪೋಕ್ಸ್‌ ಪ್ರಕರಣಗಳು ಹೆಚ್ಚಳವಾಗುತ್ತಿವೆ. ವಿದ್ಯಾರ್ಥಿ ನಿಲಯಗಳಲ್ಲಿ ಇರುವ ಬಡ ಕುಟುಂಬದ ಬಾಲಕಿಯರು ಗರ್ಭಿಣಿ ಆಗುತ್ತಿದ್ದಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಏನೂ ಮಾತನಾಡುತ್ತಿಲ್ಲ. ರಾಜ್ಯದಲ್ಲಿನ ಮಹಿಳಾ ಆಯೋಗವೂ ಸಹ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಆಯೋಗವು ಕಾಂಗ್ರೆಸ್‌ ಸರ್ಕಾರದ ಏಜೆಂಟ್‌ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಆರೋಪಿಸಿದರು.

‘ಅತ್ಯಾಚಾರ, ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಇದೊಂದು ದುರ್ಬಲ ಹಾಗೂ ಅದಕ್ಷ ಸರ್ಕಾರವಾಗಿದೆ’ ಎಂದು ಟೀಕಿಸಿದರು. 

‘ನೇಹಾ ಹಿರೇಮಠ, ಅಂಜಲಿ ಅಂಬಿಗೇರ ಹಾಗೂ ಮಾಸೂರಿನ ಸ್ವಾತಿ ಅವರ ಕೊಲೆ ನಡೆದಾಗ ಮುಖ್ಯಮಂತ್ರಿ ಅವರು, ‘ಪ್ರಕರಣಗಳ ತನಿಖೆಗೆ ತ್ವರಿತ ಕೋರ್ಟ್‌ ರಚಿಸಲಾಗುವುದು’ ಎಂದು ಹೇಳಿಕೆ ನೀಡಿದ್ದರು. ಆದರೆ, ಪ್ರಕರಣಗಳು ನಡೆದು ವರ್ಷಗಳೇ ಕಳೆದರೂ ತ್ವರಿತ ಕೋರ್ಟ್‌ ರಚನೆಯಾಗಿಲ್ಲ. ಕೂಡಲೇ ತ್ವರಿತ ನ್ಯಾಯಾಲಯ ಸ್ಥಾಪನೆ ಮಾಡಬೇಕು’ ಎಂದು ಆಗ್ರಹಿಸಿದರು. 

‘ದೇಶದ ಆರ್ಥಿಕತೆಯ ಬಗ್ಗೆ ಮಾತನಾಡುವ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಅವರು ತಮ್ಮ ಜಿಲ್ಲೆಯಲ್ಲಿನ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಆರೋಪಿಸಿದರು. 

ಬಿಜೆಪಿ ಹು-ಧಾ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಸೀಮಾ ಲದ್ವಾ, ಶೋಭಾ ನಿಸ್ಸೀಮಗೌಡ, ರಾಜೇಶ್ವರಿ ಸಾಲಗಟ್ಟಿ ಇದ್ದರು.

ಸಿದ್ದರಾಮಯ್ಯ ಕ್ಷಮೆಯಾಚಿಸಲು ಆಗ್ರಹ

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಸಚಿವೆಗೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನ ಬಳಸಿ ಮಾತನಾಡಿದ್ದು ಖಂಡನೀಯ. ಕೂಡಲೇ ಅವರು ಕ್ಷಮೆಯಾಚಿಸಬೇಕು’ ಎಂದು ಆಗ್ರಹಿಸಿದರು. 

‘ಸಿದ್ದರಾಮಯ್ಯ ಅವರು ಏಕವಚನ ಬಳಸಿ ಮಾತಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅವರು ಕ್ಷಮೆಯಾಚಿಸದಿದ್ದರೆ ಬಿಜೆಪಿ ಮಹಿಳಾ ಮೋರ್ಚಾ ಹೋರಾಟ ಹಮ್ಮಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.