ADVERTISEMENT

ಧಾರವಾಡ: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಪ್ರಗತಿ ಪರಿಶೀಲನಾ ಸಭೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 4:08 IST
Last Updated 23 ಆಗಸ್ಟ್ 2025, 4:08 IST
ಧಾರವಾಡದಲ್ಲಿ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಧ್ಯಕ್ಷ ಕೆ. ನಾಗನಗೌಡ ಮತ್ತು ಆಯೋಗದ ಸದಸ್ಯರು ಮಕ್ಕಳ ಸಹಾಯವಾಣಿ ಭಿತ್ತಿಫಲಕವನ್ನು ಬಿಡುಗಡೆಗೊಳಿಸಿದರು.
ಧಾರವಾಡದಲ್ಲಿ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಅಧ್ಯಕ್ಷ ಕೆ. ನಾಗನಗೌಡ ಮತ್ತು ಆಯೋಗದ ಸದಸ್ಯರು ಮಕ್ಕಳ ಸಹಾಯವಾಣಿ ಭಿತ್ತಿಫಲಕವನ್ನು ಬಿಡುಗಡೆಗೊಳಿಸಿದರು.   

ಧಾರವಾಡ: ‘ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮತ್ತು ಕುಂದಗೋಳದ ಅಂಬೇಡ್ಕರ್‌ ನಗರದ ಮೆಟ್ರಿಕ್‌ಪೂರ್ವ ಬಾಲಕಿಯರ ಹಾಸ್ಟೆಲ್‌ (ಹಿಂದುಳಿದವರ್ಗ) ಪ್ರಭಾರ ವಾರ್ಡ್‌ನ್‌ಗೆ ನೋಟಿಸ್‌ ಜಾರಿಗೊಳಿಸಬೇಕು’ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಡಗೌಡ ಸೂಚನೆ ನಿಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ನೋಟಿಸ್‌ ನೀಡಿ ಕ್ರಮ ವಹಿಸಬೇಕು. ನೋಟಿಸ್‌ ಪ್ರತಿಯನ್ನು ಆಯೋಗಕ್ಕೂ ಕಳಿಸಬೇಕು’ ಎಂದರು.

‘ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಆಯೋಗದ ತಂಡಕ್ಕೆ ಹಾಸ್ಟೆಲ್‌ ವಿಳಾಸದ ನೀಡಲು ಹಿಂದೇಟು ಹಾಕಿದರು. ಸಿಂಗನಹಳ್ಳಿಯಲ್ಲಿ ಹಾಸ್ಟೆಲ್‌ನಲ್ಲಿ (ಅಲ್ಪಸಂಖ್ಯಾತ ಅಭಿವೃದ್ಧಿ ಇಲಾಖೆ) ವ್ಯವಸ್ಥೆಗಳು ಸರಿಯಿಲ್ಲ. ಸ್ಯಾನಿಟರಿ ನ್ಯಾಪ್ಕಿನ್ ಪೂರೈಸುತ್ತಿಲ್ಲ. ಊಟಕ್ಕೆ ಮತ್ತೊಂದು ಕಡೆಗೆ ಹೋಗಬೇಕಾದ ಸ್ಥಿತಿಯಿದೆ’ ಎಂದು ಆಯೋಗದ ಸದಸ್ಯೆ ಅಪರ್ಣಾ ಕೊಳ್ಳ ಸಭೆಗೆ ತಿಳಿಸಿದರು.

ADVERTISEMENT

‘ಕುಂದಗೋಳದ ಅಂಬೇಡ್ಕರ್‌ ನಗರದ ಬಿಸಿಎಂ ಇಲಾಖೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಸ್ಚ‌ಚ್ಛತೆ ಇಲ್ಲ. ಆಹಾರ ಪದಾರ್ಥ ದಾಸ್ತಾನು ಪಟ್ಟಿಯಲ್ಲೂ ಬಹಳಷ್ಟು ವ್ಯತ್ಯಾಸ ಕಂಡುಬಂದಿದೆ’ ಎಂದು ಸದಸ್ಯೆ ಮಂಜು ಹೇಳಿದರು.

ಎಲ್ಲ ಶಾಲೆ, ಕಚೇರಿಗಳಲ್ಲಿ ಮಕ್ಕಳ ಸಹಾಯವಾಣಿ 1098 ಫಲಕ ಅಳವಡಿಸಬೇಕು. ಸಲಹಾ ಪೆಟ್ಟಿಗೆಗಳನ್ನು ಇಡಬೇಕು. ಅಂಗನಾಡಿ ಕೇಂದ್ರಗಳು ಅಸುರಕ್ಷಿತ ಕಟ್ಟಡದಲ್ಲಿದ್ದರೆ ತಕ್ಷಣವೇ ಸ್ಥಳಾಂತರಿಸಬೇಕು ಎಂದು ಶೇಖರಗೌಡ ರಾಮತ್ನಾಳ ತಿಳಿಸಿದರು.

‘ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಶೇಷ ಪೊಲೀಸ್‌ ಘಟಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರಿಜಿಸ್ಟರ್‌ ಅನ್ನು ನಿರ್ವಹಣೆ ಮಾಡಿಲ್ಲ. ಠಾಣೆಯ ವ್ಯಾಪ್ತಿಯ ಶಾಲೆಗಳಲ್ಲಿ ಪ್ರತಿ ಗುರುವಾರ ತೆರೆದ ಮನೆ ಕಾರ್ಯಕ್ರಮ ನಡೆಸಲು ಕ್ರಮ ವಹಿಸಿಲ್ಲ’ ಎಂದು ಸದಸ್ಯ ಶಶಿಧರ ಎಸ್‌.ಕೋಸಂಬೆ ತಿಳಿಸಿದರು.

ಶಾಲೆ ಬಿಟ್ಟ ವಿದ್ಯಾರ್ಥಿಗಳು, ಕೋಚಿಂಗ್‌ ಕೇಂದ್ರಗಳು ನಿಯಮಾವಳಿ ಪ್ರಕಾರ ನಡೆಯುತ್ತಿವೆಯೇ ಎಂಬ ಕುರಿತು ವರದಿ ನೀಡಬೇಕು. ಖಾಸಗಿ ಶಾಲಾ ವಾಹನಗಳ ಸ್ಥಿ‌ತಿ, ವಾಹನಗಳಲ್ಲಿ ಸಿ.ಸಿ ಕ್ಯಾಮೆರಾ, ‌ಜಿಪಿಎಸ್‌ ವ್ಯವಸ್ಥೆ ಇದೆಯೇ ಎಂಬುದನ್ನು ಪರಿಶೀಲಿಸಿ ವರದಿ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.. ಕೆಳದಿಮಠ ಸದಸ್ಯ ‌ಶೇಖರಗೌಡ ರಾಮತ್ನಾಳ ತಿಳಿಸಿದರು

ಆಯೋಗದ ಸದಸ್ಯರಾದ ವೆಂಕಟೇಶ, ತಿಪ್ಪೇಸ್ವಾಮಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ವೈ.ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಡಿಸಿಪಿ ಮಹಾನಿಂಗ ನಂದಗಾವಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅಜಯ ಎನ್. ಉಪಸ್ಥಿತ ರಿದ್ದರು.

ಬಾಲ್ಯವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಾಲ್ಯವಿವಾಹ ಪತ್ತೆಯಾದರೆ ಪ್ರಕರಣ ದಾಖಲಿಸಬೇಕು. ನಾಗಣ್ಣ ನಾಗನಗೌಡ ಸೂಚನೆ ನೀಡಿದರು. ಬಹಳಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಮಕ್ಕಳ ಗ್ರಾಮಸಭೆ ಮಕ್ಕಳ ಸ್ನೇಹಿ ಅಭಿಯಾನ ನಡೆಸಿಲ್ಲ. ಬಹಳಷ್ಟು ಅಧಿಕಾರಿಗಳಿಗೆ ಮಕ್ಕಳ ಗ್ರಾಮಸಭೆ ಮಾಹಿತಿ ತಿಳಿದಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.

‘ಪ್ರಸವಪೂರ್ವ ಭೂಣಲಿಂಗ ಪತ್ತೆ; ವಿಸ್ತೃತ ವರದಿ ನೀಡಿ’

‘ಜಿಲ್ಲೆಯಲ್ಲಿ ಪ್ರಸವಪೂರ್ವ ಭ್ರೂಣ ಲಿಂಗ ಪತ್ತೆ ಮತ್ತು ಭ್ರೂಣ ಹತ್ಯೆ ನಡೆಯುತ್ತಿದೆ ಎಂದು ಮಾಹಿತಿ ಇದೆ. ಸ್ಕ್ಯಾನಿಂಗ್‌ ಕೇಂದ್ರಗಳಿಗೆ ದಿಢೀರ್‌ ಕಾರ್ಯಾಚರಣೆ ನಡೆಸಿ ಅಲ್ಲಿನ ವ್ಯವಸ್ಥೆಗಳ ಕುರಿತು ಒಂದು ತಿಂಗಳಲ್ಲಿ ವರದಿ ನೀಡಬೇಕು ಎಂದು ಸದಸ್ಯ ಶಶಿಧರ ಎಸ್‌.ಕೋಸಂಬೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ 2355 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣ ಕಡಿವಾಣ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದರು. ಇದಕ್ಕೂ ಮುನ್ನ ಕೆಎಂಸಿಆರ್‌ಐ ಆಸ್ಪತ್ರೆಗೆ ಭೇಟಿ ನೀಡಿದರು. ಅಲ್ಲಿ ಶಿಶುಗಳ ಅರೈಕೆ ಬಗ್ಗೆ ಮಾಹಿತಿ ಪಡೆದರು. ‘5034 ಶಿಶುಗಳು ದಾಖಲಾಗಿವೆ. ಈ ಪೈಕಿ 454 ಮೃತಪಟ್ಟಿವೆ. ಈ ವರ್ಷ ಜನವರಿಯಿಂದ ಜುಲೈವರೆಗೆ 2794 ಶಿಶುಗಳು ದಾಖಲಾಗಿದ್ದು ಈ ಪೈಕಿ 291 ಮೃತಪಟ್ಟಿವೆ. ಈ ಪ್ರಕರಣಗಳ ತಡೆ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಕೋಸಂಬೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.