ADVERTISEMENT

ಹುಬ್ಬಳ್ಳಿ ಮಾರುಕಟ್ಟೆಯಲ್ಲೀಗ ಮೆಣಸಿನಕಾಯಿ ಘಾಟು

ಬಸವರಾಜ ಹವಾಲ್ದಾರ
Published 22 ಜನವರಿ 2022, 4:22 IST
Last Updated 22 ಜನವರಿ 2022, 4:22 IST
ಹುಬ್ಬಳ್ಳಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಶಿ, ರಾಶಿಯಾಗಿ ಚೀಲದಲ್ಲಿ ತುಂಬಿಟ್ಟಿರುವ ಒಣ ಮೆಣಸಿನಕಾಯಿ
ಹುಬ್ಬಳ್ಳಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ರಾಶಿ, ರಾಶಿಯಾಗಿ ಚೀಲದಲ್ಲಿ ತುಂಬಿಟ್ಟಿರುವ ಒಣ ಮೆಣಸಿನಕಾಯಿ   

ಹುಬ್ಬಳ್ಳಿ: ಉಳ್ಳಾಗಡ್ಡಿ, ಕಾಳು ಖರೀದಿಗೆ ಹೆಸರುವಾಸಿಯಾಗಿದ್ದ ಹುಬ್ಬಳ್ಳಿಯ ಅಮರಗೋಳದ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲೀಗ ಒಣ ಮೆಣಸಿನಕಾಯಿ ಘಾಟು ಹೆಚ್ಚಿದೆ.

ಒಣ ಮೆಣಸಿನಕಾಯಿ ಫಸಲು ಬರುವ ಸಮಯದಲ್ಲಿಯೂ ಇಲ್ಲಿ ಆವಕವಾಗುತ್ತಿದ್ದ ಪ್ರಮಾಣ 22 ಸಾವಿರ ಚೀಲಗಳನ್ನು ದಾಟುತ್ತಿರಲಿಲ್ಲ. ಆದರೆ, ಈಗ ವಾರದಿಂದ ವಾರಕ್ಕೆ ಆವಕದಲ್ಲಿ ಹೊಸ ದಾಖಲೆ ಸೃಷ್ಟಿಯಾಗುತ್ತಿದೆ. ಕಳೆದ ಗುರುವಾರ 37,454 ಚೀಲ ಆವಕವಾಗಿದ್ದರೆ, ಈ ಗುರುವಾರ 42,330 ಚೀಲ ಆವಕವಾಗಿದೆ. ಹೀಗಾಗಿ, ಎಪಿಎಂಸಿಯ ರಸ್ತೆ, ರಸ್ತೆಗಳಲ್ಲಿ ಮೆಣಸಿನಕಾಯಿ ಚೀಲಗಳ ರಾಶಿಯೇ ಬಿದ್ದಿದೆ.

ಹುಬ್ಬಳ್ಳಿ ಮಾರುಕಟ್ಟೆಯಲ್ಲಿ ಉಳ್ಳಾಗಡ್ಡಿ, ಶೇಂಗಾ, ಕಾಳು, ತರಕಾರಿ, ಮೆಣಸಿನಕಾಯಿ, ಆಲೂಗಡ್ಡೆ ಮುಂತಾದವುಗಳ ವ್ಯಾಪಾರ ನಡೆಯುತ್ತದೆ. ವಿವಿಧ ಉತ್ಪನ್ನಗಳು ಬರುತ್ತಿದ್ದರಿಂದ ಈ ಭಾಗದ ಒಣ ಮೆಣಸಿನಕಾಯಿ ಬ್ಯಾಡಗಿಗೆ ಹೋಗುತ್ತಿತ್ತು. ಹೊಸದಾಗಿ ಅಧ್ಯಕ್ಷರಾಗಿರುವ ಸುರೇಶ ಕಿರೇಸೂರ ಅವರು, ವರ್ತಕರೊಂದಿಗೆ ಮಾತುಕತೆ ನಡೆಸಿ ವಹಿವಾಟು ಹೆಚ್ಚಿಸಲು ಮುಂದಾಗಿದ್ದರು. ವರ್ತಕರೂ, ರೈತರೊಂದಿಗೆ ಮಾತುಕತೆ ನಡೆಸಿದ ಫಲವಾಗಿ ಆವಕ ಹೆಚ್ಚಿದೆ.

ADVERTISEMENT

ಖರೀದಿ ಸಂಕಷ್ಟ: ಗದಗ, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ರೈತರು ಒಣ ಮೆಣಸಿನಕಾಯಿಯನ್ನು ತರುತ್ತಿದ್ದಾರೆ. ಆದರೆ, ಖರೀದಿಗೆ ಬೇಕಾದ ಸೌಲಭ್ಯಗಳೇ ಇಲ್ಲ.

ಮೆಣಸಿನಕಾಯಿ ತೂಕ ಮಾಡಲು ಸೂಕ್ತ ವ್ಯವಸ್ಥೆ ಇಲ್ಲ, ಅವುಗಳನ್ನು ಸಂಗ್ರಹಿಸಿಡಲು ಗೋದಾಮುಗಳಿಲ್ಲ. ಒಣಗಿಸಲು ಸೂಕ್ತ ಜಾಗವಿಲ್ಲ. ಜಾಗದ ಕೊರತೆಯಿಂದಾಗಿ ರಸ್ತೆಗಳಲ್ಲಿಯೇ ರಾಶಿ, ರಾಶಿ ಮೆಣಸಿನಕಾಯಿ ಚೀಲಗಳು ಬಿದ್ದಿವೆ. ಪ್ರತಿ ಕ್ವಿಂಟಲ್‌ಗೆ ಡಬ್ಬಿ ಮೆಣಸಿನಕಾಯಿ ₹35,797 ರಿಂದ ₹56,986 ವರೆಗೆ ಮಾರಾಟವಾಗಿದೆ. ಕಳೆದ ವಾರ ₹60 ಸಾವಿರ ದಾಟಿತ್ತು.

ಸೌಲಭ್ಯಗಳ ಕೊರತೆ: ರೈತರಿಗೆ ರಾತ್ರಿ ವೇಳೆ ಉಳಿದುಕೊಳ್ಳಲು, ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಇಲ್ಲ. ಊಟಕ್ಕೊಂದು ಉತ್ತಮ ಹೋಟೆಲ್‌ ಸಹ ಹತ್ತಿರದಲ್ಲಿ ಇಲ್ಲ.

‘ಗುರುವಾರ ರಾತ್ರಿ 9.30ವರೆಗೆ ಖರೀದಿ ಮಾಡಲಾಯಿತು. ಆದರೆ, ತೂಕ ಆಗಲಿಲ್ಲ. ಆ ನಂತರ ಊಟಕ್ಕೆ ಹೋದರೆ, ರಾತ್ರಿ ಕರ್ಫ್ಯೂ ಎಂದು ಹೋಟೆಲ್‌ಗಳೇ ಬಂದ್ ಮಾಡಲಾಗಿತ್ತು. ಊಟ ಸಿಗದಿದ್ದರಿಂದಾಗಿ ತೀವ್ರ ತೊಂದರೆಯಾಯಿತು. ಅಂಗಡಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ’ ಎಂದು ಗದಗ ಜಿಲ್ಲೆಯ ಮಲ್ಲಾಪುರ ರೈತ ಸುಭಾಷ ದ್ಯಾಮನಗೌಡ್ರ ದೂರಿದರು.

‘ಹಿಂದಿನ ವರ್ಷಗಳಲ್ಲಿ ದಿನಕ್ಕೆ 20 ಸಾವಿರ ಚೀಲಗಳು ಬಂದಿದ್ದೇ ಗರಿಷ್ಠವಾಗಿತ್ತು. ಈಗ ಅದರ ಎರಡು ಪಟ್ಟು ಆವಕವಾಗುತ್ತಿದೆ. ನುರಿತ ಕಾರ್ಮಿಕರ ಕೊರತೆ ಇದೆ. ಗುರುವಾರ ಸಾಧ್ಯವಾಗದ ಖರೀದಿಯನ್ನು ಶುಕ್ರವಾರವೂ ಮಾಡಲಾಗುತ್ತಿದೆ’ ಎಂದು ಗುರುಬಸವ ಟ್ರೇಡರ್ಸ್‌ನ ರಾಜಕಿರಣ ಮೆಣಸಿನಕಾಯಿ ಹೇಳಿದರು.

ಎರಡು ದಿನ ಖರೀದಿ ಬಂದ್

ಹುಬ್ಬಳ್ಳಿ: ಇಲ್ಲಿನ ಎಪಿಎಂಸಿಗೆ ಗುರುವಾರ ನಿರೀಕ್ಷೆಗೂ ಮೀರಿ ಒಣ ಮೆಣಸಿನಕಾಯಿ ಆವಕವಾಗಿರುವುದರಿಂದ ಶನಿವಾರ ಹಾಗೂ ಸೋಮವಾರ ಖರೀದಿ ಮಾಡವುದಿಲ್ಲ ಎಂದು ವ್ಯಾಪಾರಸ್ಥರ ಸಂಘ ತಿಳಿಸಿದೆ.

ವಾರದಲ್ಲಿ ಮೂರು ದಿನ (ಗುರುವಾರ, ಶನಿವಾರ ಹಾಗೂ ಸೋಮವಾರ) ಮಾತ್ರ ಒಣ ಮೆಣಸಿನಕಾಯಿ ಖರೀದಿ ನಡೆಯುತ್ತದೆ. ಗುರುವಾರದ ಖರೀದಿ ಸಾಧ್ಯವಾಗದ್ದರಿಂದ ಶುಕ್ರವಾರವೂ ಸಂಜೆಯವರೆಗೆ ಖರೀದಿ ನಡೆದಿತ್ತು. ಸಂಗ್ರಹಿಸಿಡಲು ಗೋದಾಮು ಕೊರತೆಯೂ ಇರುವುದರಿಂದ ಎರಡು ದಿನ ಖರೀದಿ ನಡೆಸದಿರಲು ವರ್ತಕರು ನಿರ್ಧರಿಸಿದ್ದಾರೆ.

ಒಣ ಮೆಣಸಿನಕಾಯಿ ಆವಕ ಹೆಚ್ಚಾಗಿದೆ. ಇದು ಮಾರುಕಟ್ಟೆ ದೃಷ್ಟಿಯಿಂದ ಒಳ್ಳೆಯದು. ವಹಿವಾಟಿಗೆ ಅವಶ್ಯವಿರುವ ಎಲ್ಲ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು.
–ಸುರೇಶ ಕಿರೇಸೂರ, ಅಧ್ಯಕ್ಷ, ಎಪಿಎಂಸಿ, ಹುಬ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.