ADVERTISEMENT

Christmas | ಸಂಘರ್ಷ, ಸಂತಸ ಬಿಂಬಿಸುವ ಗೋದಲಿ

ಮನೆಗಳಲ್ಲಿ ಕ್ರಿಸ್‌ಮಸ್‌ ಸಡಗರ; ಬಂಧು, ಸ್ನೇಹಿತರಿಗೆ ಆಹ್ವಾನ

ಕೃಷ್ಣಿ ಶಿರೂರ
Published 25 ಡಿಸೆಂಬರ್ 2023, 6:31 IST
Last Updated 25 ಡಿಸೆಂಬರ್ 2023, 6:31 IST
ಹುಬ್ಬಳ್ಳಿಯ ಬಾದಾಮಿನಗರದ ಪೀಟರ್‌ ಡೊಮ್ನಿಕ್‌ ಅವರ ಮನೆಯಲ್ಲಿ ನಿರ್ಮಿಸಿದ ಗೋದಲಿ  
ಹುಬ್ಬಳ್ಳಿಯ ಬಾದಾಮಿನಗರದ ಪೀಟರ್‌ ಡೊಮ್ನಿಕ್‌ ಅವರ ಮನೆಯಲ್ಲಿ ನಿರ್ಮಿಸಿದ ಗೋದಲಿ     

ಹುಬ್ಬಳ್ಳಿ: ‘ಮರಿಯಮ್ಮ ಕಷ್ಟದಲ್ಲಿ ಮೇಕೆಯ ದೊಡ್ಡಿಯಲ್ಲಿ ಯೇಸುವಿಗೆ ಜನ್ಮನೀಡುತ್ತಾರೆ. ಅಲ್ಲಿ ಸಂಘರ್ಷ, ನೋವು, ಯಾತನೆ, ಸಂತಸ, ಮಾನವೀಯತೆ ಎಲ್ಲವೂ ಇದ್ದವು. ಅದನ್ನು ತೋರ್ಪಡಿಸಲು ಕ್ರಿಸ್‌ಮಸ್‌ ಆಚರಣೆಯಲ್ಲಿ ನಾವು ಗೋದಲಿಯನ್ನು ನಿರ್ಮಿಸುತ್ತೇವೆ’ ಎಂದು ಗೋದಲಿ ನಿರ್ಮಾಣದ ಹಿನ್ನೆಲೆಯನ್ನು ಶಾಂತಿನಗರದ ಚರ್ಚ್‌ ಪಕ್ಕದ ನಿವಾಸಿ ರಾಬರ್ಟ್‌ ಬ್ರಗಾಂಜಾ ವಿವರಿಸುವಾಗ ಅವರ ಮೊಗದಲ್ಲಿ ಸಂಭ್ರಮ ಮನೆ ಮಾಡಿತ್ತು.

‘ಡಿಸೆಂಬರ್‌ 25; ಯೇಸು ಈ ಭುವಿಯಲ್ಲಿ ಜನಿಸಿದ ದಿನ. ಈ ದಿನದಂದು ನಾವುಗಳಲ್ಲದೆ ನಮ್ಮ ಸಂಬಂಧಿಗಳನ್ನು, ಸ್ನೇಹಿತರನ್ನು ಕರೆದು ಅವರಿಗೆ ಆತಿಥ್ಯ ನೀಡಿ ನಾವು ಸಂತಸ ಪಡುತ್ತೇವೆ’ ಎಂದು ರಾಬರ್ಟ್‌ ಹಾಗೂ ಅವರ ಪತ್ನಿ ರೋಸ್‌ ‘ಪ್ರಜಾವಾಣಿ’ ಜತೆ ಖುಷಿ ಹಂಚಿಕೊಂಡರು.

ಡಿ.10ರಿಂದಲೇ ಅವರು ಕ್ರಿಸ್‌ಮಸ್‌ ಸಿದ್ಧತೆಯಲ್ಲಿ ತೊಡಗಿದ್ದು, ಈ ಸಂಭ್ರಮ ಹೊಸ ವರ್ಷಾಚರಣೆವರೆಗೂ ಸಾಗಲಿದೆ. ಮನೆಯ ಆವರಣದಲ್ಲಿ ಸುಂದರ ಗೋದಲಿ ನಿರ್ಮಿಸಿ, ಕ್ರಿಸ್‌ಮಸ್‌ ಟ್ರಿ ನೆಡಲಾಗಿದೆ. ಎತ್ತರದಲ್ಲೊಂದು ನಕ್ಷತ್ರ ಕಟ್ಟಿ, ಗೋದಲಿ, ಕ್ರಿಸ್‌ಮಸ್‌ ಟ್ರೀ ಸಮೇತ ಮನೆಯನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ ಎಂದರು.

ADVERTISEMENT

‘ಹಬ್ಬದ ಅಂಗವಾಗಿ ವಾರದ ಮೊದಲೇ ನಾವು ವಿಶೇಷ ಅಡುಗೆಗಳನ್ನು ತಯಾರಿಸಿ, ಸ್ನೇಹಿತರನ್ನು ಆಹ್ವಾನಿಸಿ ಆತ್ಮೀಯ ಸತ್ಕಾರ ನೀಡುತ್ತೇವೆ. ಅವರ ಖುಷಿಯಲ್ಲಿ ನಮ್ಮ ಖುಷಿ ಕಾಣುತ್ತೇವೆ. ನಾವು ಸ್ಥಳೀಯ ಆಹಾರದ ಜತೆ ಮಾಂಸಾಹಾರವನ್ನೂ ಸಿದ್ಧಪಡಿಸುತ್ತೇವೆ. ಮಾಂಸಾಹಾರ ಸಿದ್ಧಪಡಿಸುವಲ್ಲಿ ರೋಸ್‌ ಅವರದ್ದು ಎತ್ತಿದ ಕೈ. ಚಕ್ಕುಲಿಯಂತಹ ತಿನಿಸು ಮಾಡಲು ಬಾರದು. ಅದನ್ನೆಲ್ಲ ಅಂಗಡಿಯಿಂದ ತಂದು ಬಡಿಸುತ್ತೇವೆ. ಒಟ್ಟಿನಲ್ಲಿ ಯೇಸು ಜನ್ಮವೆತ್ತ ದಿನವನ್ನು ಸಂಭ್ರಮಿಸುವುದು ನಮ್ಮ ಆಸೆ’ ಎಂದು ರಾಬರ್ಟ್‌ ವಿವರಿಸಿದರು.

‘ಕ್ರಿಸ್‌ಮಸ್‌ ಆಚರಣೆ ಎಂದರೆ ಮನೆಗೆ ಮಗು ಬಂದಂಥ ವಾತಾವರಣ. ಮನೆಯಲ್ಲಿ ಸ್ಟಾರ್‌ ಕಟ್ಟೋದು ಏಕೆಂದರೆ ಅದು ದೇವ ಮಾನವರ ಆಗಮನದ ಸೂಚನೆ. ಭುವಿಯಲ್ಲಿ ಹುಟ್ಟಿದ ಯೇಸುವನ್ನು ನೋಡಲು ಜ.6ರಂದು ಮೂವರು ದೇವ ಮಾನವರು ಬರುವುದರ ದ್ಯೋತಕವಾಗಿ ನಕ್ಷತ್ರ ಕಟ್ಟಲಾಗುವುದು. ಜ. 6ರವರೆಗೂ ಕ್ರಿಸ್‌ಮಸ್‌ ಸಂಭ್ರಮ ಇರಲಿದೆ’ ಎಂದು ನಕ್ಷತ್ರದ ಹಿನ್ನೆಲೆಯನ್ನು ಬಾದಾಮಿನಗರ ನಿವಾಸಿ ಪೀಟರ್‌ ಡೊಮ್ನಿಕ್‌ ತಿಳಿಸಿದರು. 

ಹುಬ್ಬಳ್ಳಿಯ ಶಾಂತಿನಗರದ ರಾಬರ್ಟ್‌ ಬ್ರಗಾಂಜಾ ಅವರ ಮನೆಯಲ್ಲಿ ಕ್ರಿಸ್‌ಮಸ್‌ ಟ್ರೀಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿರುವುದು
ಕ್ರಿಸ್‌ಮಸ್‌ ಸಂಭ್ರಮಕ್ಕೆ ಸಿದ್ಧಪಡಿಸಿದ ಭೋಜನ

ಕ್ರಿಸ್‌ಮಸ್‌ ಮತ್ತು ಅಡ್ವೆಂಟ್ ಕ್ಯಾಲೆಂಡರ್‌   ಅಡ್ವೆಂಟ್ ಕ್ಯಾಲೆಂಡರ್‌ಗಳನ್ನು ಸಾಂಪ್ರದಾಯಿಕವಾಗಿ ಕ್ರಿಸ್‌ಮಸ್‌ಗೆ ಎಣಿಸಲಾಗುತ್ತದೆ. ಇದು ಡಿಸೆಂಬರ್ 1 ರಿಂದ ಪ್ರಾರಂಭವಾಗುತ್ತದೆ ಮತ್ತು ಕ್ರಿಸ್‌ಮಸ್ ಈವ್‌ನಲ್ಲಿ ಕೊನೆಗೊಳ್ಳುತ್ತದೆ. ಕ್ಯಾಲೆಂಡರ್‌ನ ಚಲಿಸಬಲ್ಲ ಭಾಗಗಳನ್ನು 1–24 ಸಂಖ್ಯೆಗಳಿಂದ ಗುರುತಿಸಲಾಗಿದೆ. ಇದು ಕ್ರಿಸ್‌ಮಸ್‌ಗೆ ಹಿಂದಿನ ಡಿಸೆಂಬರ್‌ನಲ್ಲಿನ ದಿನಗಳನ್ನು ಪ್ರತಿನಿಧಿಸುತ್ತದೆ. ಅಡ್ವೆಂಟ್ ಕ್ಯಾಲೆಂಡರ್‌ನ ಉದ್ದೇಶವು ಕ್ರಿಸ್‌ಮಸ್ ದಿನದ ಪ್ರಗತಿಯನ್ನು ದೃಷ್ಟಿಗೋಚರವಾಗಿ ಅಳೆಯಲು ಪ್ರತಿ ದಿನವೂ ಒಂದು ತುಣುಕನ್ನು ಸರಿಸುವುದು ತೆಗೆದುಹಾಕುವುದು ಅಥವಾ ಕೆಲವೊಮ್ಮೆ ಸೇರಿಸುವುದಾಗಿದೆ ಎಂದು ಪೀಟರ್‌ ಡೊಮ್ನಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.