ಧಾರವಾಡ: ಕ್ರಿಸ್‍ಮಸ್ ಅನ್ನು ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರ ಸಂಭ್ರಮದಿಂದ ಆಚರಿಸಲಾಯಿತು.
ಕ್ರೈಸ್ತರು ಬೆಳಿಗ್ಗೆ ಕುಟುಂಬ ಸಮೇತವಾಗಿ ಚರ್ಚ್‍ಗೆ ತೆರಳಿ ಶ್ರದ್ಧಾ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಕುರಿತು ಗೀತೆಗಳನ್ನು ಹಾಡಿದರು. ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು.
ನಗರದ ಹೆಬಿಕ್ ಮೆಮೊರಿಯಲ್ ಚರ್ಚ್, ಸೇಂಟ್ ಜೋಸೆಫ್ ಚರ್ಚ್, ಹೋಲಿ ಕ್ರಾಸ್ ಚರ್ಚ್, ನಿರ್ಮಲ ನಗರ, ಕಲ್ಯಾಣ ನಗರದ ಚರ್ಚ್‍ಗಳು ಸಹಿತ ಎಲ್ಲ ಚರ್ಚ್‍ಗಳಲ್ಲಿ ವಿಶೇಷ ವಿದ್ಯುದ್ದೀಪಾಲಂಕಾರ ಮಾಡಲಾಗಿತ್ತು. ಹೆಬಿಕ್ ಸ್ಮಾರಕ ದೇವಾಲಯದಲ್ಲಿ ಯೇಸು ಕಿಸ್ತ ಅವರ ಜನ್ಮ ವೃತ್ತಾಂತ ಸಾರುವ ಗೋದಲಿ ನಿರ್ಮಿಸಲಾಗಿತ್ತು. ಹಲವರು ಗೋದಲಿ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡರು. ಬೊಂಬತ್ತಿ ಬೆಳಗಿಸಿ ಸಂಭ್ರಮಿಸಿದರು.
ವೈವಿಧ್ಯಮಯ ಕೇಕ್, ವಿವಿಧ ಬಗೆಯ ಸಿಹಿ ಖಾದ್ಯಗಳನ್ನು ಹಂಚಿ, ಪರಿಸ್ಪರ ಶುಭಾಶಯ ಕೋರಿದರು.
‘ಕಷ್ಟದಲ್ಲಿದ್ದವರಿಗೆ ನೆರವಾಗಿ’
‘ಎಲ್ಲರೂ ಪ್ರೀತಿ ಅನ್ಯೋನ್ಯತೆ ಸ್ನೇಹದಿಂದ ಜೀವಿಸಬೇಕು. ಬಡವರ ನಿರ್ಗತಿಕರ ರೋಗಿಗಳು ಕಷ್ಟದಲ್ಲಿರುವವರಿಗೆ ಪ್ರೀತಿ ತೋರಬೇಕು ನೆರವು ನೀಡಬೇಕು. ಅವರ ಜೀವನಮಟ್ಟ ಸುಧಾರಣೆಗೆ ಎಲ್ಲರೂ ಕೈಜೋಡಿಸಬೇಕು’ ಎಂದು ಬಿಷಪ್ ಮಾರ್ಟಿನ್ ಸಿ ಬೋರ್ಗಾಯಿ ಅವರು ಹಬ್ಬದ ಸಂದೇಶದಲ್ಲಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.