
ಧಾರವಾಡ: ನಗರದ ಹೆಬಿಕ್ ಸ್ಮಾರಕ ಚರ್ಚ್ ಚಾವಣಿಗೆ ಹೊಸ ಹೆಂಚು, ನೆಲಹಾಸಿಗೆ ಗ್ರಾನೈಟ್ ಅಳವಡಿಸಿ, ವೇದಿ (ಮುಖ್ಯಸ್ಥಳ) ಭಾಗದಲ್ಲಿ ಕುಸುರಿ, ಪಾಲಿಶ್ ಮಾಡಿಸಿ, ಕಟ್ಟಡಕ್ಕೆ ಬಣ್ಣ ಬಳಿದು ನವೀಕರಣಗೊಳಿಸಲಾಗಿದೆ. ನವ ಸ್ಪರ್ಶ, ವಿದ್ಯುತ್ ದೀಪಾಲಂಕಾರದ ಮೆರುಗಿನಲ್ಲಿ ಕ್ರಿಸ್‌ಮಸ್ ಸಡಗರ ಕಳೆಗಟ್ಟಿದೆ.
ಬಾಸೆಲ್ ಮಿಶನ್ ಕಾಂಪೌಂಡ್‌ನಲ್ಲಿರುವ ಈ ಚರ್ಚ್‌ನ ಸಭಾಂಗಣದ ಆಸನಗಳಿಗೆ ಮೆರುಗು ನೀಡಲಾಗಿದೆ. ರಂಗಿನ ಹಾರಗಳನ್ನು ಕಟ್ಟಿ ಶೃಂಗರಿಸಲಾಗಿದೆ. ವೇದಿ ಭಾಗದಲ್ಲಿ ಪ್ರಸಂಗ ಪೀಠ, ದೈವ ಸಂದೇಶ ಪಠಣ ಸ್ಥಳಗಳನ್ನು ಸುಂದರವಾಗಿ ಸಜ್ಜುಗೊಳಿಸಲಾಗಿದೆ. ಮರ ಕುಸುರಿ ಮೂಲಕ ಅಂದಗೊಳಿಸಲಾಗಿದೆ.
ಸ್ನಾನ ದೀಕ್ಷೆ ಪೀಠ: ವೇದಿ ಮುಂಭಾಗದಲ್ಲಿರುವ ಸ್ನಾನ ದೀಕ್ಷೆ ಭಾಗವನ್ನು ಕಲಾ ಕುಸರಿಯಲ್ಲಿ ವೈವಿಧ್ಯಮಯವಾಗಿ ಅಲಂಕಾರಗೊಳಿಸಲಾಗಿದೆ.
‘ಶಿಶು ಜನಿಸಿದ 40 ದಿನಗಳ ನಂತರ ಸ್ನಾನ ದೀಕ್ಷೆ ನಡೆಸಿ, ನಾಮಕರಣ ಮಾಡಲಾಗುತ್ತದೆ’ ಎಂದು ಫಾದರ್ ಸಾಮ್ಯುಯೆಲ್ ಕ್ಯಾಲ್ವಿನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಆವರಣದಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಯೇಸುವಿನ ಜೀವನ ವೃತ್ತಾಂತ ತಿಳಿಸುವ ಗೋದಲಿ ನಿರ್ಮಿಸಲಾಗಿದೆ.
‘1836ರಲ್ಲಿ ಸಭಾವಾಗಿ ಆರಂಭವಾಗಿ, 1845ರಲ್ಲಿ ಈ ಚರ್ಚ್ ನಿರ್ಮಾಣವಾಗಿದೆ. ಯುರೋಪಿಯನ್ ಶೈಲಿಯಲ್ಲಿ ನಿರ್ಮಿಸಿರುವ ಆಲಯ ಇದು. ನಿಘಂಟು ರಚನಾಕಾರ ಫರ್ಡಿನಾಂಡ್ ಕಿಟೆಲ್ ಅವರು ಈ ಚರ್ಚ್‌ನಲ್ಲಿ ಪ್ರಾದ್ರಿಯಾಗಿ ಸೇವೆ ಮಾಡಿದ್ದಾರೆ. ಇಲ್ಲಿನ ಬಾಸೆಲ್ ಮಿಷನ್ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು’ ಎಂದು ಶಾಲೆಯ ನಿವೃತ್ತ ಮುಖ್ಯಶಿಕ್ಷಕ ವಿಲ್ಸನ್ ಜೆ. ಮೈಲಿ ತಿಳಿಸಿದರು.
‘ಕ್ರಿಸ್‌ಮಸ್ ಆಚರಣೆಗೆ ಚರ್ಚ್‌ನ ಭೇಟಿ ನೀಡುವ ಎಲ್ಲರಿಗೂ ಕೇಕ್ ವಿತರಿಸಲಾಗುವುದು. ಬೈಬಲ್‌ನಲ್ಲಿನ ವಚನಗಳನ್ನು ಹಾಡಲಾಗುವುದು. ಜಗತ್ತಿನ ಶಾಂತಿ, ಸಮೃದ್ಧಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗುವುದು’ ಎಂದು ಅವರು ತಿಳಿಸಿದರು.
ಕಿಟೆಲ್ ಪಾದ್ರಿಯಾಗಿದ್ದ ಸೇವೆ ಸಲ್ಲಿಸಿದ ಚರ್ಚ್ ಯುರೋಪಿಯನ್ ಶೈಲಿಯ ವಾಸ್ತುಶಿಲ್ಪ ವೇದಿ, ಸ್ನಾನ ದೀಕ್ಷೆ ಪೀಠ, ನೆಲಹಾಸಿಗೆ ಹೊಸ ರೂಪ
₹ 75 ಲಕ್ಷ ವೆಚ್ಚದಲ್ಲಿ ಚರ್ಚ್ ಅನ್ನು ನವೀಕರಣಗೊಳಿಸಲಾಗಿದೆ. 186 ವರ್ಷಗಳ ಹಿಂದೆ ಅಳವಡಿಸಿದ್ದ ಹೆಂಚುಗಳನ್ನು ಬದಲಾಯಿಸಲಾಗಿದೆಸಾಮ್ಯುಯೆಲ್ ಕ್ಯಾಲ್ವಿನ್ ಫಾದರ್ ಹೆಬಿಕ್ ಸ್ಮಾರಕ ಚರ್ಚ್ ಧಾರವಾಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.