ADVERTISEMENT

ರಾಷ್ಟ್ರಪತಿಗೆ ಪೌರ ಸನ್ಮಾನ: ವೇದಿಕೆಯಲ್ಲಿ ಶೆಟ್ಟರ್‌ಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2022, 16:28 IST
Last Updated 26 ಸೆಪ್ಟೆಂಬರ್ 2022, 16:28 IST
ಹಸಿರು ಮ್ಯಾಟ್‌ ಹಾಗೂ ಕೃತಕ ಹೂವಿನ ಬಳ್ಳಿಯಿಂದ ಸಿಂಗಾರಗೊಂಡಿದ್ದ ಹುಬ್ಬಳ್ಳಿ ದೇಶಪಾಂಡೆ ನಗರದ ರಾಜಕಾಲುವೆ ತಡೆಗೋಡೆ ಸೋಮವಾರ ಸಾರ್ವಜನಿಕರ ‘ಸೆಲ್ಫಿ ಸ್ಪಾಟ್‌’ ಆಗಿತ್ತು
ಹಸಿರು ಮ್ಯಾಟ್‌ ಹಾಗೂ ಕೃತಕ ಹೂವಿನ ಬಳ್ಳಿಯಿಂದ ಸಿಂಗಾರಗೊಂಡಿದ್ದ ಹುಬ್ಬಳ್ಳಿ ದೇಶಪಾಂಡೆ ನಗರದ ರಾಜಕಾಲುವೆ ತಡೆಗೋಡೆ ಸೋಮವಾರ ಸಾರ್ವಜನಿಕರ ‘ಸೆಲ್ಫಿ ಸ್ಪಾಟ್‌’ ಆಗಿತ್ತು   

ಹುಬ್ಬಳ್ಳಿ: ಪೌರ ಸನ್ಮಾನ ಕಾರ್ಯಕ್ರಮದ ವೇದಿಕೆ ಮೇಲೆ ಆಸೀನರಾಗುವ ಗಣ್ಯರ ಪಟ್ಟಿಯಿಂದ ಶಾಸಕ ಜಗದೀಶ ಶೆಟ್ಟರ್ ಹೆಸರು ಕೈ ಬಿಡಲಾಗಿತ್ತು. ಅದರಿಂದ ಶೆಟ್ಟರ್‌ ಅಭಿಮಾನಿಗಳಲ್ಲಿ ಅಸಮಾಧಾನ ಉಂಟಾಗಿತ್ತು. ಆದರೆ, ಭಾನುವಾರ ತಡರಾತ್ರಿ ಅವರ ಹೆಸರಿನ ಜೊತೆ ಅವಳಿನಗರದ ಶಾಸಕರಾದ ಪ್ರಸಾದ ಅಬ್ಬಯ್ಯ, ಅರವಿಂದ ಬೆಲ್ಲದ, ಅಮೃತ ದೇಸಾಯಿ ಅವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಯಿತು.

ಈ ನಡುವೆ ಪಾಲಿಕೆಯ ಕಾಂಗ್ರೆಸ್‌ ಸದಸ್ಯರು, ಕಾರ್ಯಕ್ರಮದ ಸಿದ್ಧತೆಗೆ ತಮ್ಮನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದರು. ಆದರೆ, ಪಟ್ಟಿಯಲ್ಲಿ ಕಾಂಗ್ರೆಸ್‌ ಶಾಸಕ ಪ್ರಸಾದ ಅಬ್ಬಯ್ಯ ಅವರ ಹೆಸರು ಸೇರ್ಪಡೆಯಾದ ಹಿನ್ನೆಲೆಯಲ್ಲಿ, ತಮ್ಮ ನಿರ್ಧಾರದಿಂದ ಹಿಂದೆ ಸರಿದು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾನುವಾರ ಬೆಳಿಗ್ಗೆ ಸಿದ್ಧವಾದ ಅಂತಿಮ ಪಟ್ಟಿಯಲ್ಲಿ ರಾಷ್ಟ್ರಪತಿ ಸೇರಿದಂತೆ ಒಂಬತ್ತು ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.

ಪಾಸ್ ಇದ್ದರೂ ಸಿಗದ ಅವಕಾಶ: ಗಣ್ಯರ ಗ್ಯಾಲರಿ ಭರ್ತಿಯಾದ ಹಿನ್ನೆಲೆಯಲ್ಲಿ ಪಾಸ್‌ ಪಡೆದ ನೂರಾರು ಗಣ್ಯರು, ಅತಿ ಗಣ್ಯರು, ವಿಶೇಷ ಆಹ್ವಾನಿತರು ಹಾಗೂ ಜನಪ್ರತಿನಿಧಿಗಳಿಗೆ ಪೊಲೀಸರು ಪ್ರವೇಶ ನಿರಾಕರಿಸಿದರು. ಪೊಲೀಸರೊಂದಿಗೆ ಮಾತಿನಚಕಮಕಿನಡೆಯಿತು.

ADVERTISEMENT

ಸ್ಥಳೀಯ ಜನಪ್ರತಿನಿಧಿಗಳು, ಗಣ್ಯರಿಗೆ ಎಂದು 1,000 ಆಸನಗಳನ್ನು ಸಿದ್ಧಪಡಿಸಿ, ಪಾಸ್ ವಿತರಿಸಲಾಗುವುದು ಎಂದು ಮೇಯರ್‌ ತಿಳಿಸಿದ್ದರು. ಆದರೆ, ಒಂದು ಸಾವಿರಕ್ಕಿಂತಲೂ ಹೆಚ್ಚು ಪಾಸ್‌ ವಿತರಿಸಿದ್ದರಿಂದ ಗೊಂದಲ ಏರ್ಪಟ್ಟಿತ್ತು. ಅನಿವಾರ್ಯವಾಗಿ ಗಣ್ಯರು ಸಾರ್ವಜನಿಕರ ಗ್ಯಾಲರಿಯಲ್ಲಿ ಬಂದು ಕುಳಿತರು.

ರಾಜಕಾಲುವೆಗೆ ರಾಜ ಮರ್ಯಾದೆ: ಸದಾ ಗಬ್ಬೆದ್ದು ನಾರುತ್ತಿದ್ದ ಸವಾಯಿ ಗಂಧರ್ವ ಸಭಾಂಗಣ ಪಕ್ಕದ ರಾಜಕಾಲುವೆ, ಸೋಮವಾರ ಮದುವಣಗಿತ್ತಿಯಂತೆ ಸಿಂಗಾರಗೊಂಡಿತ್ತು. ರಾಜಕಾಲುವೆಗೆ 75 ಮೀಟರ್‌ ಉದ್ದದ ವರೆಗೆ ಕಬ್ಬಿಣದ ಜಾಲರಿ ಹಾಕಿ, ಹಸಿರು ಮ್ಯಾಟ್‌ ಹೊಸಿಸಲಾಗಿತ್ತು. ಮ್ಯಾಟ್‌ ಮೇಲ್ಭಾಗದಲ್ಲಿ ಕೃತಕ ಹೂವಿನ ಬಳ್ಳಿ ಇಳಿ ಬಿಟ್ಟು ಸೌಂದರ್ಯ ಹೆಚ್ಚಿಸಲಾಗಿತ್ತು. ಮಧ್ಯದಲ್ಲಿ ರಾಷ್ಟ್ರಪತಿ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ ಹಾಕಲಾಗಿತ್ತು. ಆ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಿದ್ದರಿಂದ, ಕಾಲ್ನಡಿಗೆಯಲ್ಲಿ ಸಾಗುತ್ತಿದ್ದ ಗಣ್ಯರು ಹಾಗೂ ಪಾಲಿಕೆಯ ಕೆಲವು ಸದಸ್ಯರು ಬ್ಯಾನರ್‌ ಎದುರು ನಿಂತು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.

ಒಂದು ತಾಸು ಮೊದಲು ಪರೀಕ್ಷೆ ಮೊಟಕು: ಪೌರಸನ್ಮಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ಜಿಮ್ಖಾನ ಮೈದಾನದ ಬಳಿಯ ರೋಟರಿ ಶಾಲೆಯ ಮಕ್ಕಳಿಗೆ ನಿಗದಿತ ಅವಧಿಗಿಂತ ಒಂದು ತಾಸು‌ ಮೊದಲೇ ಪರೀಕ್ಷೆ ಮೊಟಕುಗೊಳಿಸಲಾಯಿತು. ಇದರಿಂದ ಮಕ್ಕಳು ಮತ್ತು ಪಾಲಕರು ಆತಂಕಕ್ಕೆ ಒಳಗಾದರು. ಬೆಳಿಗ್ಗೆ 9ಕ್ಕೆ ಆರಂಭವಾಗಿದ್ದ ಪರೀಕ್ಷೆ 11ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, 10 ಗಂಟೆ ಆಗುತ್ತಿದ್ದಂತೆ ಪೊಲೀಸರು ಶಾಲೆಗೆ ತೆರಳಿ, ಬಂದ್‌ ಮಾಡುವಂತೆ ಸೂಚಿಸಿ ಮಕ್ಕಳನ್ನು ತರಗತಿಯಿಂದ ಹೊರ‌ಗೆ ಕಳಿಸಿದರು. ಮಕ್ಕಳು ಆತಂಕದಿಂದ ಹೊರ‌ಬಂದರು. ಶಾಲೆಯಿಂದ ಮಕ್ಕಳ ಪಾಲಕರಿಗೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಲಾಯಿತು. ಕೆಲವು ಪಾಲಕರಿಗೆ ಸಂದೇಶ ತಲುಪದ ಕಾರಣ, ಮಕ್ಕಳು ಶಾಲೆಯ ಆವರಣದಲ್ಲಿ ಪಾಲಕರಿಗಾಗಿ ಕಾಯುತ್ತ ಕುಳಿತಿದ್ದರು. ಆಗ ಪೊಲೀಸರೇ ಮೊಬೈಲ್‌ನಿಂದ ಪಾಲಕರಿಗೆ ಕರೆ ಮಾಡಿ ಮಾತನಾಡಿಸುತ್ತಿದ್ದ ದೃಶ್ಯ ಕಂಡು ಬಂದಿತು.

ಬೆಳಿಗ್ಗೆಯಿಂದಲೇ ಸಂಚಾರ ದಟ್ಟಣೆ: ರಾಷ್ಟ್ರಪತಿ ಅವರು ನಗರಕ್ಕೆ ಆಗಮಿಸುವುದು 12.30 ಎನ್ನುವ ವೇಳಾಪಟ್ಟಿ ಇದ್ದರೂ, ಭದ್ರತೆ ಕಾರಣಕ್ಕೆ ಪೊಲೀಸರು ಬೆಳಿಗ್ಗೆಯಿಂದಲೇ ಜಿಮ್ಖಾನ ಮೈದಾನದ ಮುಂಭಾಗ ಮತ್ತು ಹಿಂಭಾಗ, ದೇಶಪಾಂಡೆ ನಗರದ ಕುಂಭಕೋಣಂ ಪ್ಲಾಟ್‌ ಸುತ್ತಮುತ್ತ ವಾಹನಗಳ ಸಂಚಾರ ಸ್ಥಗಿತಗೊಳಿಸಿದ್ದರು. ವಿಮಾನ ನಿಲ್ದಾಣದಿಂದ ಜಿಮ್ಖಾನ ಮೈದಾನದವರೆಗೆ ಹಾಗೂ ಧಾರವಾಡ ಐಐಐಟಿಯಿಂದ ವಿಮಾನ ನಿಲ್ದಾಣದವರೆಗಿನ ಮಾರ್ಗವನ್ನು ರಾಷ್ಟ್ರಪತಿ ಬರುವ ಹಾಗೂ ತೆರಳುವ ಪೂರ್ವ 20 ನಿಮಿಷ ಸಂಪೂರ್ಣ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಇದರಿಂದ ವಾಹನಗಳ ದಟ್ಟಣೆ ತೀವ್ರವಾಗಿದ್ದಲ್ಲದೆ, ಸಾರ್ವಜನಿಕರು ಪರದಾಡುವಂತಾಯಿತು.

ಒಂದು ನಿಮಿಷಕ್ಕೆ ₹3.93 ಲಕ್ಷ: ರಾಷ್ಟ್ರಪತಿ ಅವರ ಪೌರ ಸನ್ಮಾನ ಕಾರ್ಯಕ್ರಮ 33 ನಿಮಿಷ ನಡೆದಿದ್ದು, ಅದಕ್ಕಾಗಿ ₹1.30 ಕೋಟಿ ವೆಚ್ಚ ಮಾಡಲಾಗಿದೆ. ಅಂದರೆ, ಪ್ರತಿ ನಿಮಿಷಕ್ಕೆ ₹3.93 ಲಕ್ಷ ವೆಚ್ಚವಾಗಿದೆ. ‘ಮೊದಲೇ ಪಾಲಿಕೆ ಆರ್ಥಿಕವಾಗಿ ನಷ್ಟದಲ್ಲಿದ್ದು, ಸರಳವಾಗಿ ಕಾರ್ಯಕ್ರಮ ಆಯೋಜಿಸಬಹುದಿತ್ತು. ಸಂಕಷ್ಟದ ಪರಿಸ್ಥಿತಿಯಲ್ಲಿ ಇಷ್ಟೊಂದು ದುಂಚುವೆಚ್ಚ ಮಾಡುವುದು ಸರಿಯಲ್ಲ’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ದೊರೆರಾಜ ಮಣಿಕುಂಟ್ಲ ಭಾನುವಾರವೇ ಆರೋಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.