ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ವಕೀಲ ರಾಕೇಶ ಕಿಶೋರ ಶೂ ಎಸೆಯಲು ಯತ್ನಿಸಿದ ಘಟನೆ ಖಂಡಿಸಿ, ಆತನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ವಿವಿಧ ದಲಿತ ಸಂಘ– ಸಂಸ್ಥೆಗಳ ಮಹಾಮಂಡಳದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ಸ್ಟೇಷನ್ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಕೇಶ ಕಿಶೋರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
‘ಸಂವಿಧಾನ ಜಾರಿಗೆ ಬಂದ 75 ವರ್ಷಗಳ ನಂತರವೂ ಮನುವಾದಿಗಳ ಮನಸ್ಥಿತಿ ಬದಲಾಗಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಇದು ಸಂವಿಧಾನದ ಮೇಲಿನ ಆಕ್ರಮಣವಾಗಿದೆ. ಮನುವಾದಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡಿದ್ದರಿಂದಲೇ ಇಂತಹ ಘಟನೆ ನಡೆದಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಘಟನೆ ಕುರಿತು ಕಾಂಗ್ರೆಸ್ ನಾಯಕರು ಖಂಡನೆ ವ್ಯಕ್ತಪಡಿಸಿದ ಬಳಿಕ ಪ್ರಧಾನಿ ಮೋದಿ ಅವರು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಕರೆ ಮಾಡಿ ವಿಷಾದಿಸಿದ್ದಾರೆ. ಆದರೆ, ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ. ಇದು ದೇಶದ ಜನರನ್ನು ಸಂಶಯಕ್ಕೀಡು ಮಾಡಿದೆ’ ಎಂದರು.
‘ಯಾವುದೇ ಸಣ್ಣ ಪ್ರಕರಣಗಳು ನಡೆದರೂ ಮಾತನಾಡುತ್ತಿದ್ದ ಆರ್‌ಎಸ್‌ಎಸ್ ನಾಯಕರು, ಈ ಘಟನೆ ಕುರಿತು ಸುಮ್ಮನಿದ್ದಾರೆ. ರಾಕೇಶ ಕಿಶೋರ್ ಜಾಗದಲ್ಲಿ ಮುಸ್ಲಿಂ ಅಥವಾ ದಲಿತ ವ್ಯಕ್ತಿ ಇದ್ದಿದ್ದರೆ, ಆತನನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಲ್ಲಿ ಎಂದು ಹೇಳಿಕೆ ನೀಡಿ ಪ್ರಚಾರ ಪಡೆಯುತ್ತಿದ್ದರು’ ಎಂದು ಟೀಕಿಸಿದರು.
ಪ್ರಮುಖರಾದ ಗುರುನಾಥ ಉಳ್ಳಿಕಾಶಿ, ಗುರುನಾಥ ಚಲವಾದಿ, ರೇವಣಸಿದ್ದಪ್ಪ ಹೊಸಮನಿ, ಶಿವಾನಂದ ಮುತ್ತಣ್ಣವರ, ಲೋಹಿತ್ ಗಾಮನಗಟ್ಟಿ, ರಾಜು ಎಸ್., ವಿನಾಯಕ ಅಮರಗೋಳ, ನಾಗಪ್ಪ ನರೇಂದ್ರ, ಶಿವಕುಮಾರ ಗೋಕಾವಿ, ನಾಗರಾಜ ದೊಡ್ಡಮನಿ, ಮಂಜುನಾಥ ವಾಲೀಕಾರ, ಗುರುಸಿದ್ದಪ್ಪ ಅಂಗಡಿ, ಭೀಮಪ್ಪ ಕೆಂಪಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.