ADVERTISEMENT

ಹುಬ್ಬಳ್ಳಿ: ಮಹಾಬಲನ ತಯಾರಿಕೆಗೆ ಮಣ್ಣಿನ ಕೊರತೆ

ಗೌರಮ್ಮ ಕಟ್ಟಿಮನಿ
Published 23 ಆಗಸ್ಟ್ 2025, 3:59 IST
Last Updated 23 ಆಗಸ್ಟ್ 2025, 3:59 IST
ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಅವರು ತಮ್ಮ ಕಲಾಧಾಮದಲ್ಲಿ ಗಣಪತಿ ತಯಾರಿಸಲು ಮುಗದ ಕೆರೆಯಿಂದ ಮಣ್ಣು ಸಂಗ್ರಹಿಸಿರುವುದು
ಧಾರವಾಡದ ಕಲಾವಿದ ಮಂಜುನಾಥ ಹಿರೇಮಠ ಅವರು ತಮ್ಮ ಕಲಾಧಾಮದಲ್ಲಿ ಗಣಪತಿ ತಯಾರಿಸಲು ಮುಗದ ಕೆರೆಯಿಂದ ಮಣ್ಣು ಸಂಗ್ರಹಿಸಿರುವುದು   

ಹುಬ್ಬಳ್ಳಿ: ಪಿಒಪಿ (ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌) ಗಣಪತಿ ಮೂರ್ತಿಗಳನ್ನು ನಿಷೇಧಿಸಿರುವುದಕ್ಕೆ ಮಣ್ಣಿನ ಗಣಪತಿ ಮೂರ್ತಿಗಳಿಗೆ ಬೇಡಿಕೆಯಿದೆ. ಆದರೆ ಮಣ್ಣಿನ ಗಣಪತಿ ಮೂರ್ತಿ ತಯಾರಿಸಲು ಬೇಕಿರುವ ಕೆರೆಯ ಮಣ್ಣು ಕಲಾವಿದರಿಗೆ ಸಿಗುತ್ತಿಲ್ಲ. ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ಕೆರೆಗಳಿವೆ. ಆದರೆ, ಬಹುತೇಕ ಕಡೆ ಹೂಳೆತ್ತದ ಕಾರಣ ಕೆರೆಗಳ ಮಣ್ಣು ಪಡೆಯಲು ಸಾಧ್ಯವಾಗುತ್ತಿಲ್ಲ.

‘ಜಿಲ್ಲೆಯಲ್ಲಿ 900ಕ್ಕೂ ಹೆಚ್ಚು ಗಣಪತಿ ತಯಾರಕರಿದ್ದಾರೆ. ಮಣ್ಣಿನ ಕೊರತೆ ಮತ್ತು ಅದನ್ನು ಸಂಗ್ರಹಿಸಿಡಲು ಬೇಕಾದ ಸ್ಥಳದ ಅಭಾವದಿಂದ ಬಹುತೇಕ ಕಲಾವಿದರು ಗದಗ ಜಿಲ್ಲೆ ಕೊಣ್ಣುರಿನಿಂದ ಸಿದ್ಧವಿರುವ ಮಣ್ಣಿನ ಮೂರ್ತಿಗಳನ್ನು ತಂದು, ಇಲ್ಲಿ ಅಂತಿಮ ಸ್ಪರ್ಶ ನೀಡಿ ಮಾರುತ್ತಾರೆ’ ಎಂದು ಗಣೇಶೋತ್ಸವ ಸಮಿತಿಗಳ ಮಹಾಮಂಡಳ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ತಿಳಿಸಿದರು.

’ಬೆಂಡಿಗೇರಿ, ಚನ್ನಾಪೂರ, ಗೋಟೂರು, ಗಿರಿಯಾಲ, ಮಾವನೂರ, ಅಂಚಟಗೇರಿ ಸೇರಿ ವಿವಿಧ ಗ್ರಾಮಗಳ ಕೆರೆಗಳಿಂದ ಮಣ್ಣು ಪೂರೈಸಲಾಗುತ್ತದೆ. ಮಣ್ಣಿನ ಗುಣಮಟ್ಟದ ಆಧಾರದ ಮೇಲೆ ಒಂದು ಟ್ರ್ಯಾಕ್ಟರ್‌ಗೆ ₹6 ಸಾವಿರದಿಂದ ₹8 ಸಾವಿರದವರೆಗೆ ದರ ಇದೆ. ಪುಣೆ ಹಾಗೂ ಕೊಲ್ಕತ್ತಾದಿಂದ ತರಿಸುವ ಪ್ರತಿ 25ಕೆ.ಜಿ ಮಣ್ಣಿನ ಪ್ಯಾಕೆಟ್‌ಗೆ ₹900 ರಿಂದ ₹1000 ದರ ಇದೆ’ ಎಂದರು.

ADVERTISEMENT

ಮೂರ್ನಾಲ್ಕು ವರ್ಷ ಮೊದಲೇ ಸಂಗ್ರಹ:

ಮಣ್ಣು ಹಳೆಯದಾದಂತೆ ಗಣಪತಿ ಮೂರ್ತಿ ಸುಂದರವಾಗುತ್ತದೆ. ಮೊದಲೆಲ್ಲ ಮೂರು–ನಾಲ್ಕು ವರ್ಷ ಗಣಪತಿ ಮೂರ್ತಿ ತಯಾರಿಸಲು ಬೇಕಾಗುವಷ್ಟು ಮಣ್ಣನ್ನು ಸಂಗ್ರಹಿಸಿ ಇಡುತ್ತಿದ್ದೇವು. ಎರಡು ವರ್ಷದಿಂದ ಮಣ್ಣಿನ ಕೊರತೆ ಕಾಡುತ್ತಿದೆ. ಕೃಷಿಭೂಮಿಗಳು ಲೇಔಟ್‌ಗಳಾಗಿ ಬದಲಾಗುತ್ತಿವೆ. ಕೆರೆಯ ನೀರು ಅಲ್ಲಲ್ಲಿ ಖಾಲಿಯಾಗದೇ, ಅಲ್ಲಿಯ ಮಣ್ಣು ಪಡೆಯಲು ಸಾಧ್ಯವಿಲ್ಲ’ ಎಂದು ಕಲಾವಿದ ಮಂಜುನಾಥ ಹಿರೇಮಠ ತಿಳಿಸಿದರು.

ಬೇರೆ ಕಡೆಯಿಂದ ಮಣ್ಣು ತರಿಸಿಕೊಳ್ಳಲು, ಅದರ ವೆಚ್ಚವೂ ಹೆಚ್ಚಾಗುತ್ತದೆ. ಆಗ ಸಹಜವಾಗಿಯೇ ಗಣಪತಿ ಮೂರ್ತಿಗಳ ಬೆಲೆಯೂ ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಈ ವರ್ಷ ಶೇ 10ರಿಂದ 15ರಷ್ಟು ಬೆಲೆ ಹೆಚ್ಚಳವಾಗಿದೆ. ಮಣ್ಣಿನ ಕೊರತೆಯಾದಲ್ಲಿ ಬೆಲೆ ಇನ್ನು ಜಾಸ್ತಿಯಾಗುತ್ತದೆ’ ಎಂದರು.

ಕಳೆದ ವರ್ಷಕ್ಕಿಂತ ಈ ವರ್ಷ ಚಿಕ್ಕ ಮಣ್ಣಿನ ಗಣಪತಿಯ ಬೆಲೆ ಹೆಚ್ಚಾಗಿದೆ. ಮನೆಯಲ್ಲಿ ಗಣಪತಿ ಇಡುವ ಸಂಪ್ರದಾಯವಿದೆ. ಹಾಗಾಗಿ ದುಬಾರಿಯಾದರೂ ಬುಕ್ ಮಾಡಿದ್ದೇವೆ
ಪ್ರಸನ್ನ ಎಂ ಹುಬ್ಬಳ್ಳಿ ನಿವಾಸಿ
ಈ ವರ್ಷ ಮುಗದ ಕೆರೆಯಿಂದ ಮುಂದಿನ ಒಂದು ವರ್ಷಕ್ಕೆ ಆಗುವಷ್ಟು ಮಾತ್ರ ಸಂಗ್ರಹವಾಗಿದೆ. ಪ್ರತಿ ವರ್ಷ 20 ಟ್ರ್ಯಾಕ್ಟರ್‌ನಷ್ಟು ಮಣ್ಣು ಬೇಕು.
ಮಂಜುನಾಥ ಹಿರೇಮಠ ಕಲಾವಿದ ಧಾರವಾಡ
ನಾವು ವಾಸಿಸುವ ಜಾಗದಲ್ಲೇ ಮಣ್ಣು ಸಂಗ್ರಹಿಸಿಡಲು ಆಗಲ್ಲ. ಹಬ್ಬಕ್ಕೂ ಮೊದಲು ಬೆಂಡಿಗೇರಿ ಗ್ರಾಮದಿಂದ ಮಣ್ಣು ತರಿಸಿ 200 ಮೂರ್ತಿಗಳನ್ನು ತಯಾರಿಸಿ ಮಾರುತ್ತೇವೆ.
ರಾಕೇಶ ಕಾಂಬಳೆ ಕಲಾವಿದ ಹುಬ್ಬಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.