ADVERTISEMENT

ಸ್ವಚ್ಛತೆ ಅಧ್ಯಯನ; ಇಂದೋರ್‌ ಪ್ರವಾಸ

ಮಹಾನಗರ ಪಾಲಿಕೆಯ ಹಿರಿಯ ಸದಸ್ಯರು ಪ್ರವಾಸದಿಂದ ದೂರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:42 IST
Last Updated 26 ಡಿಸೆಂಬರ್ 2025, 4:42 IST
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹು–ಧಾ ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್, ಸದಸ್ಯರು ಮತ್ತು ಅಧಿಕಾರಿಗಳ ತಂಡ
ಮಧ್ಯಪ್ರದೇಶದ ಇಂದೋರ್‌ನಲ್ಲಿ ಹು–ಧಾ ಮಹಾನಗರ ಪಾಲಿಕೆಯ ಮೇಯರ್‌, ಉಪಮೇಯರ್, ಸದಸ್ಯರು ಮತ್ತು ಅಧಿಕಾರಿಗಳ ತಂಡ   

ಹುಬ್ಬಳ್ಳಿ: ಮಧ್ಯಪ್ರದೇಶದ ಇಂದೋರ್ ನಗರ ಸ್ವಚ್ಛತೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಅಲ್ಲಿಯ ವ್ಯವಸ್ಥೆ ಅಧ್ಯಯನಕ್ಕಾಗಿ ಮೇಯರ್, ಉಪಮೇಯರ್, ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳನ್ನೊಳಗೊಂಡ ತಂಡ ಇಂದೋರ್‌ಗೆ ತೆರಳಿದೆ.

ಮಹಾನಗರ ಪಾಲಿಕೆಯ 43 ಸದಸ್ಯರು, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ, ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ ಯರಂಗಳಿ ಸೇರಿ 10 ಜನ ಅಧಿಕಾರಿಗಳು ಇಂದೋರ್‌ ಪ್ರವಾಸದ ತಂಡದಲ್ಲಿದ್ದಾರೆ.

ಹುಬ್ಬಳ್ಳಿಯಿಂದ ಗುರುವಾರ ಬೆಳಿಗ್ಗೆ ವಿಶೇಷ ಬಸ್‌ನಲ್ಲಿ ಗೋವಾಕ್ಕೆ ತೆರಳಿರುವ ತಂಡವು, ಅಲ್ಲಿಂದ ವಿಮಾನದಲ್ಲಿ ಇಂದೋರ್‌ಗೆ ಹೋಗಿದೆ. ಸಭಾನಾಯಕ ಈರೇಶ ಅಂಚಟಗೇರಿ, ಹಿರಿಯ ಸದಸ್ಯರಾದ ವೀರಣ್ಣ ಸವಡಿ, ಶಿವು ಹಿರೇಮಠ, ರಾಜಣ್ಣ ಕೊರವಿ, ತಿಪ್ಪಣ್ಣ ಮಜ್ಜಗಿ, ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್ ಯಲಿಗಾರ ಪ್ರವಾಸಕ್ಕೆ ತೆರಳಿರುವ ತಂಡದಲ್ಲಿ ಇಲ್ಲ.

ADVERTISEMENT

ತಂಡವು ಶುಕ್ರವಾರ ಇಂದೋರ್ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿ, ನಗರ ವೀಕ್ಷಣೆ ಮಾಡಲಿದೆ. ಅಲ್ಲಿಂದ ಉಜ್ಜಯಿನಿಗೆ ತೆರಳಿ ವಾಸ್ತವ್ಯ ಮಾಡಿ, ಶನಿವಾರ ಉಜ್ಜಯಿನಿ, ಭಾನುವಾರ ಅಹಮದಾಬಾದ್‌, ಸೋಮವಾರ ಬೆಳಿಗ್ಗೆ ಗೋವಾಕ್ಕೆ ಬಂದು ಅಲ್ಲಿಂದ ಹುಬ್ಬಳ್ಳಿಗೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ಪ್ರವಾಸ; ಪಾಲಿಕೆ ಸದಸ್ಯರು ಈ ಹಿಂದೆಯೂ ಹಲವು ಬಾರಿ ಇಂದೋರ್‌ಗೆ ತೆರಳಿ, ಆಧ್ಯಯನ ಮಾಡಿದ್ದರು. ಆದರೆ, ಅವಳಿ ನಗರದ ಸ್ವಚ್ಛತೆ ವಿಷಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗ ಮತ್ತೊಮ್ಮೆ ಪ್ರವಾಸಕ್ಕೆ ಹೋಗಲಾಗಿದೆ. ಇದರಿಂದ ಏನು ಪ್ರಯೋಜನ ಎಂದು ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪ್ರಶ್ನಿಸಿದ್ದಾರೆ. 

ಆರೋಗ್ಯ ಸಾಯಿ ಸಮಿತಿ ಅಧ್ಯಕ್ಷರಾಗಿದ್ದ ರಾಜಣ್ಣ ಕೊರವಿ ನೇತೃತ್ವದಲ್ಲಿ ಕಳೆದ ವರ್ಷ ಕೆಲವು ಸದಸ್ಯರು ಹಾಗೂ ಅಧಿಕಾರಿಗಳು ಇಂದೋರ್‌ಗೆ ಭೇಟಿ ನೀಡಿದ್ದರು. ಬೀದಿ ನಾಯಿಗಳ ಹಾವಳಿ ನಿಯಂತ್ರಣ ಸಂಬಂಧ ಕೆಲ ಸದಸ್ಯರ ತಂಡ ಹೈದರಾಬಾದ್‌ಗೆ ಭೇಟಿ ನೀಡಿತ್ತು. 

ಸ್ವಚ್ಛ ಭಾರತ್ ಮಿಷನ್-2 ಯೋಜನೆಯಡಿ ಪಾಲಿಕೆಗೆ ₹2 ಕೋಟಿ ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ಅಧ್ಯಯನ ಪ್ರವಾಸ ಕೈಗೊಳ್ಳಲಾಗಿದೆ. ಸಾಮರ್ಥ್ಯ ಅಭಿವೃದ್ಧಿ ಅಡಿ ₹80 ಲಕ್ಷ ವೆಚ್ಚ ಮಾಡಲು ಅವಕಾಶವಿದ್ದು, ಇದೇ ಅನುದಾನ ಬಳಸಿಕೊಂಡು ಪ್ರವಾಸಕ್ಕೆ ತೆರಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.