ADVERTISEMENT

ದೇಶದಿಂದ ಹೊರಹಾಕುವ ಭೀತಿಯಿಂದ ಹೊರಬನ್ನಿ

ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಜಗದೀಶ ಶೆಟ್ಟರ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 11:21 IST
Last Updated 15 ಜನವರಿ 2020, 11:21 IST
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು
ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿದರು   

ಹುಬ್ಬಳ್ಳಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದರೆ ಮುಸ್ಲಿಮರನ್ನು ದೇಶದಿಂದ ಹೊರ ಹಾಕಲಾಗುತ್ತದೆ ಎಂದು ಕಾಂಗ್ರೆಸ್‌ ಅಪಪ್ರಚಾರ ಮಾಡುತ್ತಿದೆ. ಮುಸ್ಲಿಂ ಬಾಂಧವರು ಮೊದಲು ಈ ಸುಳ್ಳು ಮಾಹಿತಿಯಿಂದ ಹೊರಬರಬೇಕು ಎಂದು ಸಚಿವ ಜಗದೀಶ ಶೆಟ್ಟರ್‌ ಹೇಳಿದರು.

ಜ. 18ರಂದು ಗೃಹಸಚಿವ ಅಮಿತ್‌ ಶಾ ಹುಬ್ಬಳ್ಳಿಗೆ ಬರಲಿರುವ ಹಿನ್ನೆಲೆಯಲ್ಲಿ ಬಿಜೆಪಿ ಮಂಗಳವಾರ ಬಮ್ಮಾಪುರ ಓಣಿಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಭೆ ಮತ್ತು ಆಯುಷ್ಮಾನ್‌ ಕಾರ್ಡ್‌ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಆರು ವರ್ಷಗಳಿಂದ ನೆಲೆಸಿರುವ ಎಲ್ಲರಿಗೂ ಪೌರತ್ವ ನೀಡಲಾಗುತ್ತದೆ. ಹಿಂದೆ ಇದ್ದ ಕಾಯ್ದೆಯನ್ನು ಈಗ ತಿದ್ದುಪಡಿಯಷ್ಟೇ ಮಾಡಲಾಗಿದೆ. ಇದರ ಬಗ್ಗೆ ಕಾಂಗ್ರೆಸ್‌ ವಿನಾಕಾರಣ ಅಪಪ್ರಚಾರ ಮಾಡಿ ಜನರ ದಾರಿ ತಪ್ಪಿಸಿ ಮುಸ್ಲಿಮರಲ್ಲಿ ಭಯ ಹುಟ್ಟು ಹಾಕುತ್ತಿದೆ. ಇದಕ್ಕೆ ಯಾರೂ ಕಿವಿಗೊಡಬಾರದು’ ಎಂದು ಮನವಿ ಮಾಡಿದರು.

ADVERTISEMENT

‘ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ದೇಶದ ಎಲ್ಲ ಮುಸಲ್ಮಾನರಿಗೂ ಸೌಲಭ್ಯಗಳನ್ನು ಕೊಟ್ಟಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅವರ ಅಭಿವೃದ್ಧಿಗೆ ನೆರವಾಗಿವೆ. ಸ್ಥಗಿತಗೊಂಡಿದ್ದ ಭಾಗ್ಯಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರ ಮತ್ತೆ ಆರಂಭಿಸಲಿದೆ. ಎಲ್ಲ ಧರ್ಮದವರಿಗೂ ಸೌಲಭ್ಯಗಳು ಸಿಗುತ್ತವೆ’ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ ‘ಜಿಲ್ಲೆಯಲ್ಲಿ 40 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಇದರಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ದೇಶದ ಎಲ್ಲ ಬಡ ಜನರಿಗೂ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಆಯುಷ್ಮಾನ್‌ ಭಾರತ ಯೋಜನೆ ಆರಂಭಿಸಲಾಗಿದೆ’ ಎಂದರು.

’ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜನರಲ್ಲಿ ತಪ್ಪು ತಿಳಿವಳಿಕೆ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಆದ್ದರಿಂದ ಇದರ ಬಗ್ಗೆ ಮಾಹಿತಿ ನೀಡಲು ಅಮಿತ್ ಶಾ ಅವರು ಹುಬ್ಬಳ್ಳಿಗೆ ಬರಲಿದ್ದು, ಅಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕು’ ಎಂದರು.

ಕಾರ್ಯಕ್ರಮದ ಸಂಘಟಕ ಶಿವಾನಂದ ಮುತ್ತಣ್ಣನವರ, ಜಿಲ್ಲಾ ಗ್ರಾಮೀಣ ಬಿಜೆಪಿ ಘಟಕದ ನೂತನ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಪಕ್ಷದ ಮುಖಂಡರಾದ ಪ್ರಭು ನವಲಗುಂದ ಮಠ, ಗುರುಸಿದ್ದಣ್ಣ ಕಟಗೆ, ಗಣೇಶ ಅಮರಾವತಿ, ಬಸವರಾಜ ಮರಕಟ್ಟಿ, ಶಿವಣ್ಣ ಹೆಬ್ಬಳ್ಳಿ, ಚಂದ್ರಶೇಖರ ಗೋಕಾಕ, ಜಯತೀರ್ಥ ಕಟ್ಟಿ, ಕಲಾವಿದ ಗುರು ಚಲವಾದಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.