ADVERTISEMENT

ಸೈನಿಕರಿಗೆ ಸವಲತ್ತು ನೀಡಲು ಬದ್ಧ: ಶಾಸಕ ಎನ್.ಎಚ್.ಕೋನರಡ್ಡಿ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 5:47 IST
Last Updated 4 ಆಗಸ್ಟ್ 2025, 5:47 IST
ಅಣ್ಣಿಗೇರಿ ಆದಿಕವಿ ಪಂಪಸ್ಮಾರಕ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕಕ್ಕೆ ಚಾಲನೆ ನೀಡಲಾಯಿತು
ಅಣ್ಣಿಗೇರಿ ಆದಿಕವಿ ಪಂಪಸ್ಮಾರಕ ಭವನದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ತಾಲ್ಲೂಕು ಘಟಕಕ್ಕೆ ಚಾಲನೆ ನೀಡಲಾಯಿತು   

ಅಣ್ಣಿಗೇರಿ: ಸೈನಿಕರು ತಮ್ಮ ಕುಟುಂಬ ಹಾಗೂ ಬಂಧು ಬಳಗವನ್ನು ತ್ಯಾಗ ಮಾಡಿ ದೇಶದ ರಕ್ಷಣೆಗಾಗಿ ತಮ್ಮ ಜೀವನವನ್ನೆ ಮುಡಿಪಾಗಿಟ್ಟು ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ. ದೇಶ ಸೇವೆ ಮಾಡಿ ನಿವೃತ್ತಿ ನಂತರ ಮರಳಿ ತಮ್ಮ ಸ್ವಗ್ರಾಮಕ್ಕೆ ಬಂದಾಗ ಅವರಿಗೆ ಸಿಗುವ ಸೌಲಭ್ಯಗಳನ್ನು ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದು ದುರದೃಷ್ಠಕರ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಶಿವಣ್ಣ ಎನ್.ಕೆ. ಹೇಳಿದರು.

ಆದಿಕವಿ ಪಂಪ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ನೂತನ ತಾಲ್ಲೂಕು ಘಟಕದ ಉದ್ಘಾಟನೆ ಹಾಗೂ ಕಾರ್ಗಿಲ್‌ ವಿಜಯೋತ್ಸವ-2025ರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಅಧಿಕಾರಿಗಳ ನಿರ್ಲಕ್ಷದಿಂದ ಮಾಜಿ ಸೈನಿಕರಿಗೆ ಸಿಗಬೇಕಾದ ನಿವೇಶನ, ಜಮೀನು ಹಂಚಿಕೆ ಸೇರಿದಂತೆ ಇತರೆ ಸೌಲಭ್ಯಗಳು ಮರಿಚಿಕೆಯಾಗುತ್ತಿವೆ. ಕಾರ್ಗಿಲ್‌ ಯುದ್ದದಲ್ಲಿ ದೇಶಕ್ಕಾಗಿ ಸಾಕಷ್ಟು ಸೈನಿಕರು ತಮ್ಮ ಪ್ರಾಣ ಬಲಿದಾನ ಮಾಡಿದ್ದಾರೆ ಎಂದರು.

ADVERTISEMENT

ಶಾಸಕ ಎನ್.ಎಚ್.ಕೋನರಡ್ಡಿ ಮಾತನಾಡಿ, ಸೈನಿಕರ ವಿಷಯದಲ್ಲಿ ಯಾರು ರಾಜಕಾರಣ ಮಾಡಬಾರದು. ಸೈನಿಕ ಮತ್ತು ರೈತ ಒಂದೇ ಮುಖದ ಎರಡು ಕಣ್ಣುಗಳಿದ್ದಂತೆ. ದೇಶ ಪ್ರೇಮದ ವಿಷಯದಲ್ಲಿ ರಾಜಕಾರಣ ಮಾಡುವವರು ದೇಶ ದ್ರೋಹಿಗಳು ಎಂದರು.

ಮಾಜಿ ಸೈನಿಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸಿ ಕೂಡಲು ಶೀಘ್ರದಲ್ಲೇ ಸಿಎಂ, ಡಿಸಿಎಂ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವಂತೆ ಮಾಡುತ್ತೇನೆ ಎಂದರು. ಅಣ್ಣಿಗೇರಿ ಮತ್ತು ನವಲಗುಂದ ತಾಲೂಕು ಘಟಕಗಳಿಗೆ ಶೀಘ್ರದಲ್ಲೇ ಕಚೇರಿ ಸ್ಥಾಪಿಸಲು ಸ್ಥಳವಕಾಶ ನೀಡಲಾಗುವುದು ಎಂದರು.

ಮಾಜಿ ಸೈನಿಕರ ಕುಟುಂಬಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅಮರ್ ಜವಾನ್ ಪಥ ಸಂಚಲನವನ್ನು ಪಟ್ಟಣದ ಅಮೃತೇಶ್ವರ ದೇವಸ್ಥಾನದ ಬಯಲಿನಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆದಿಕವಿ ಪಂಪ ಭವನದವರೆಗೆ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ಗುದ್ನೇಶ್ವರ ಮಠದ ಪ್ರಭುಲಿಂಗ ದೇವರು, ಜಿಲ್ಲಾ ಘಟಕದ ಅಧ್ಯಕ್ಷ ನಿಂಗಪ್ಪ ಸಿಂಗೋಟಿ, ತಾಲ್ಲೂಕು ಘಟಕದ ಅಧ್ಯಕ್ಷ ಯಲ್ಲಪ್ಪ ಕಂಬಳಿ, ಷಣ್ಮುಖ ಗುರಿಕಾರ, ಪುರಸಭೆ ಅಧ್ಯಕ್ಷ ಶಿವಾನಂದ ಬೆಳಹಾರ, ಚಂಬಣ್ಣ ಹಾಳದೋಟರ, ಶಿವಯೋಗಿ ಸುರಕೋಡ, ದೇವರಾಜ ದಾಡಿಬಾವಿ, ವಿವಿಧ ಜಿಲ್ಲೆಯ ಜಿಲ್ಲಾಧ್ಯಕ್ಷರು, ತಾಲ್ಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.