ADVERTISEMENT

ಜೀವವಿಜ್ಞಾನದ ಮಾಹಿತಿ ನಿರ್ವಹಣೆಗೆ ಗಣಕ ಜ್ಞಾನ ಅಗತ್ಯ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 13:48 IST
Last Updated 3 ಜುಲೈ 2019, 13:48 IST
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ. ಪಿ.ಬಲರಾಮ್ ಮಾತನಾಡಿದರು. ಪ್ರೊ. ಪ್ರಮೋದ ಗಾಯಿ, ಪ್ರೊ. ಎಸ್.ಎಂ.ಶಿವಪ್ರಸಾದ್ ಇದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಭವನದಲ್ಲಿ ಬುಧವಾರ ನಡೆದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪ್ರೊ. ಪಿ.ಬಲರಾಮ್ ಮಾತನಾಡಿದರು. ಪ್ರೊ. ಪ್ರಮೋದ ಗಾಯಿ, ಪ್ರೊ. ಎಸ್.ಎಂ.ಶಿವಪ್ರಸಾದ್ ಇದ್ದಾರೆ.   

ಧಾರವಾಡ: ‘ಜೀವ ವಿಜ್ಞಾನ ಕ್ಷೇತ್ರದಲ್ಲಿ ಈವರೆಗೂ ಬಹಳಷ್ಟು ಮಾಹಿತಿಗಳು ಸಂಗ್ರಹವಾಗಿವೆ. ಹೀಗೆ ಸಂಗ್ರಹವಾದ ಮಾಹಿತಿಯನ್ನು ವ್ಯವಸ್ಥಿತವಾಗಿ ಸಂಸ್ಕರಿಸಿ, ವಿಶ್ಲೇಷಿಸಿ ಕ್ರಮಬದ್ಧವಾಗಿ ದಾಖಲಿಸುವ ಅಗತ್ಯವಿದ್ದು, ಅದಕ್ಕೆ ಜೀವ ವಿಜ್ಞಾನಿಗಳಿಗೆ ಗಣಕವಿಜ್ಞಾನದ ಜ್ಞಾನವೂ ಅಗತ್ಯ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಪಿ.ಬಲರಾಮ್ ಅಭಿಪ್ರಾಯಪಟ್ಟರು.

ಜೀವಿವಿಜ್ಞಾನದಲ್ಲಿ ಹೊಸ ಆಯಾಮಗಳು ಎಂಬ ವಿಷಯ ಕುರಿತು ರಾಷ್ಟ್ರೀಯ ಕಾರ್ಯಾಗಾರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಮಿ ಮೇಲೆ ಜೀವ ಹುಟ್ಟಿದ ದಿನದಿಂದ ಜೀವ ವಿಜ್ಞಾನದ ಕಲಿಕೆ ಇದ್ದೇ ಇದೆ. ಬಹಳಷ್ಟು ವಿಜ್ಞಾನಿಗಳು ಜೀವ ವಿಕಾಸದ ಕುರಿತು ವಾದಗಳನ್ನು ಮಂಡಿಸಿದ್ದಾರೆ. ಜತೆಗೆ ಕಾಲಕಾಲಕ್ಕೆ ಜೀವ ವಿಜ್ಞಾನ ಕ್ಷೇತ್ರ ಬೆಳೆಯುತ್ತಲೇ ಬಂದಿದೆ. ತಂತ್ರಜ್ಞಾನ ಅಭಿವೃದ್ಧಿಗೊಳ್ಳುತ್ತ ವಿಜ್ಞಾನಿಗಳಿಗೆ ಜೀವವಿಜ್ಞಾನ ವಿಷಯವಷ್ಟೇ ಗೊತ್ತಿದ್ದರೆ ಸಾಲದು. ಬದಲಿಗೆ ಭೌತವಿಜ್ಞಾನ, ರಾಸಾಯನಿಕ, ಗಣಿತ ಹಾಗೂ ಕಂಪ್ಯೂಟರ್ ಜ್ಞಾನವೂ ತಿಳಿದಿರಬೇಕಾದ ಅಗತ್ಯವಿದೆ’ ಎಂದರು.

ADVERTISEMENT

‘ಹೀಗಾಗಿ ಜೀವ ವಿಜ್ಞಾನದ ಅಧ್ಯಯನದ ಈ ಹೊಸ ಆಯಾಮದಲ್ಲಿ ನಾವು ಕಂಪ್ಯೂಟರ್‌ ಜ್ಞಾನ, ಕೃತ ಬುದ್ಧಿಮತ್ತೆ ಹಾಗೂ ಡಾಟಾ ಮೈನಿಂಗ್‌ ಇತ್ಯಾದಿ ಜ್ಞಾನವನ್ನೂ ಹೊಂದಿರಬೇಕು. ಈ ನಿಟ್ಟಿನಲ್ಲಿ ಸಂಶೋಧಕರು ಹಾಗೂ ಜೀವವಿಜ್ಞಾನದ ಪ್ರಾಧ್ಯಾಪಕರು ಬದಲಾದ ಪರಿಸ್ಥಿತಿಯಲ್ಲಿ ಕಲಿಕೆಯ ಹೊಸ ಆಯಾಮಗಳನ್ನು ಕರಗತ ಮಾಡಿಕೊಳ್ಳುವ ಅಗತ್ಯವಿದೆ’ ಎಂದು ಪ್ರೊ. ಬಲರಾಮ್ ಹೇಳಿದರು.

ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪ್ರಮೋದ ಗಾಯಿ ಮಾತನಾಡಿ, ‘ಒಂದು ಡಿಎನ್‌ಎ ಸುಮಾರು 3ಶತಕೋಟಿ ಮಾಹಿತಿಯನ್ನು ಹೊಂದಿರುತ್ತದೆ. ಇದನ್ನು ವಿಶ್ಲೇಷಿಸುವುದು ಕಷ್ಟಸಾಧ್ಯ. ಇಂಥ ಸಂದರ್ಭದಲ್ಲಿ ಕಂಪ್ಯೂಟರ್‌ನ ದತ್ತಾಂಶ ನೆರವಿಗೆ ಬರಲಿದೆ. ಅದರಲ್ಲೂ ನರವಿಜ್ಞಾನ, ಕ್ಯಾನ್ಸರ್‌ ಕುರಿತ ಅಧ್ಯಯನಕ್ಕೆ ಕಂಪ್ಯೂಟರ್‌ ಜ್ಞಾನ ಬೇಕೆಬೇಕು. ಹೀಗಾಗಿ ಜೀವವಿಜ್ಞಾನದಲ್ಲಿ ಗಣಕಜ್ಞಾನ ಅಧ್ಯಯನದ ವಿಸ್ತಾರವನ್ನು ಹೆಚ್ಚಿಸುತ್ತದೆ’ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ನಿರ್ದೇಶಕ ಪ್ರೊ. ಎಸ್.ಎಂ.ಶಿವಪ್ರಸಾದ್ ಮಾತನಾಡಿ, ‘ಶಿಲಾಯುಗದಿಂದ, ಲೋಹಯುಗ, ಸಿಲಿಕಾನ್ ಯುಗದಿಂದ ಇಂದಿನ ಗಾರ್ಬೇಜ್‌ಯುಗದವರೆಗೂ ಬದಲಾವಣೆಗಳನ್ನು ಕಂಡಿದ್ದೇವೆ. ಅಂದು ಶತಮಾನಗಳಲ್ಲಿ ಆಗುತ್ತಿದ್ದ ಬದಲಾವಣೆ, ಇಂದು ದಿನಗಳಲ್ಲಿ ಆಗುತ್ತಿದೆ. ಬದಲಾಗುತ್ತಿರುವ ವೇಗಕ್ಕೆ ಒಗ್ಗಿಕೊಳ್ಳುವುದು ಹಾಗೂ ಹೊಸತನ್ನು ಬೇಗ ಕಲಿತು ಕಾಲದೊಂದಿಗೆ ಹೆಜ್ಜೆ ಹಾಕಬೇಕಾದ ಅನಿವಾರ್ಯತೆ ಇಂದಿನ ಪ್ರಾಧ್ಯಾಪಕರ ಮೇಲಿದೆ’ ಎಂದರು.

‘ತಂತ್ರಾಂಶ ಅಭಿವೃದ್ಧಿಗೆ ಇಡೀ ಜಗತ್ತು ಭಾರತದ ಯುವ ಸಮುದಾಯವನ್ನು ಬಳಸಿಕೊಳ್ಳುತ್ತಿದೆ. ಕಂಪ್ಯೂಟರ್‌ ಮುಂದೆ ದಿನವಿಡೀ ಕೂರುವ ಕೂಲಿಕಾರರನ್ನು ನಾವು ಸೃಷ್ಟಿಸುತ್ತಿದ್ದೇವೆ. ಆದರೆ ಜಗತ್ತಿನ ಬಹಳಷ್ಟು ವೈಜ್ಞಾನಿಕ ಸಂಗತಿಗಳನ್ನು ಅನ್ವೇಷಿಸುವ ಸಾಮರ್ಥ್ಯವಿರುವ ಯುವಕರು, ಹಣ ಗಳಿಕೆಯ ಹಿಂದೆ ಬಿದ್ದು, ಗುಲಾಮರಾಗುವತ್ತ ಸಾಗುತ್ತಿರುವುದು ವಿಪರ್ಯಾಸ. ಹೀಗಾಗಿ ಮೂಲವಿಜ್ಞಾನದಲ್ಲೂ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಲಿಕೆಯನ್ನು ಇನ್ನಷ್ಟು ಕುತೂಹಲ ಮೂಡಿಸುವಂತೆ ಪಾಠ ಮಾಡಬೇಕಾದ ಅನಿವಾರ್ಯತೆ ಎಲ್ಲಾ ಪ್ರಾಧ್ಯಾಪಕರ ಮೇಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.