ADVERTISEMENT

ಜ್ಞಾನದ ಬೆಳಕು ನೀಡಿದ ಸಿದ್ಧೇಶ್ವರ ಶ್ರೀ

ನುಡಿನಮನ ಕಾರ್ಯಕ್ರಮದಲ್ಲಿ ಅಮೃತಾನಂದ ಸ್ವಾಮೀಜಿ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:13 IST
Last Updated 29 ಜನವರಿ 2023, 16:13 IST
ಹುಬ್ಬಳ್ಳಿಯ ಅಕ್ಷಯನಗರದ ಸಚೇತನ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮದಲ್ಲಿ, ವಿವಿಧ ಮಠಾಧೀಶರು ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು / ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯ ಅಕ್ಷಯನಗರದ ಸಚೇತನ ಪದವಿ ಪೂರ್ವ ಮಹಾವಿದ್ಯಾಲಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿಗೆ ನುಡಿನಮನ ಕಾರ್ಯಕ್ರಮದಲ್ಲಿ, ವಿವಿಧ ಮಠಾಧೀಶರು ಹಾಗೂ ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು / ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ವ್ಯಕ್ತಿತ್ವವನ್ನು ಪದಗಳಿಂದ ಹೇಳಲು ಅಥವಾ ಲೇಖನಿಯಿಂದ ವರ್ಣಿಸಲು ಸಾಧ್ಯವಿಲ್ಲ. ಅವರದ್ದು ದಿವ್ಯ ವ್ಯಕ್ತಿತ್ವವಾಗಿತ್ತು’ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.

ಇಲ್ಲಿನ ಅಕ್ಷಯ ನಗರದ ಸಚೇತನ ಪದವಿ ಪೂರ್ವ ಮಹಾವಿದ್ಯಾಲಯ, ಚೇತನ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ವಿಜಯಪುರ ಜ್ಞಾನಯೋಗಾಶ್ರಮ ಹಾಗೂ ಧಾರವಾಡ ಜಿಲ್ಲೆಯ ಸಿದ್ಧೇಶ್ವರ ಸ್ವಾಮೀಜಿ ಅವರ ಭಕ್ತ ವೃಂದ ಭಾನುವಾರ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜೀವನವೇ ಒಂದು ಪರಮಸಿದ್ಧಿ ಎಂದು ತಿಳಿದು ಬಾಳಿದವರು ಸಿದ್ಧೇಶ್ವರ ಸ್ವಾಮೀಜಿ. ಅವರು ಇಲ್ಲದಿರುವುದು ಹಗಲು ಸೂರ್ಯ, ರಾತ್ರಿ ಚಂದ್ರನನ್ನು ಕಳೆದುಕೊಂಡತ್ತಾಗಿದೆ’ ಎಂದು ಹೇಳಿದರು.

ADVERTISEMENT

ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿ ಎಲ್ಲರ ಬದುಕಿಗೂ ಬೆಳಕು ತೋರಿದವರು. ಪದವಿ, ಗೌರವ, ಹಣ, ಅಂತಸ್ತನ್ನು ನಯವಾಗಿ ತಿರಸ್ಕರಿಸಿದ ಆ ಗುರುವಿಗೆ ನಮಿಸುವುದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ಸ್ಮಾರಕ ಬೇಡ ಎಂದ ಅವರು, ಭಕ್ತರ ಮನದ ಮಂದಿರದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ’ ಎಂದರು.

ಹುಲ್ಯಾಳದ ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ, ಸದಲಗಾ ಗೀತಾಶ್ರಮದ ಶ್ರದ್ಧಾನಂದ ಸ್ವಾಮೀಜಿ, ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಷಡಕ್ಷರಿ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಮಾತನಾಡಿದರು. ದ್ಯಾವಪ್ಪನವರ-ವಳಸಂಗ ಶಿಕ್ಷಣ ಸಂಸ್ಥೆಯ ಪ್ರಮುಖರಾದ ಜಗದೀಶ ದ್ಯಾವಪ್ಪನವರ, ಮಹೇಶ ದ್ಯಾವಪ್ಪನವರ, ವಿಶ್ವನಾಥ ಕೊರವಿ, ರಾಜಣ್ಣ ಕೊರವಿ, ಶಂಭು ಆರೇರ, ಸುಧೀರ ಮುದ್ದಿ ಇದ್ದರು.

‘ನಾಡು ಕಂಡ ಶ್ರೇಷ್ಠ ಸಂತ’

‘ದೇವರನ್ನಂತೂ ನಾವು ನೋಡಿಲ್ಲ. ಆದರೆ, ಸಿದ್ಧೇಶ್ವರ ಸ್ವಾಮೀಜಿ ದೇವರಾಗಿ ಮಾರ್ಗದರ್ಶನ ನೀಡಿದ್ದರು. ಬುದ್ದ, ಬಸವಣ್ಣನವರನ್ನು ಅವರಲ್ಲಿ ಕಂಡಿದ್ದೇವೆ. ಅವರ ತತ್ವಾದರ್ಶ ಅನುಸರಿಸಿ ನಡೆದರೆ ಬದುಕು ಸಾರ್ಥಕ. ಎಲ್ಲ ಮಠಾಧೀಶರು ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಸಾಗಬೇಕು. ಅವರ ಸಂದೇಶ ಜನರಿಗೆ ತಲುಪಿಸುವ ಕಾರ್ಯವಾಗಬೇಕು. ನಾಡು ಕಂಡ ಶ್ರೇಷ್ಠ ಸಂತ ಅವರು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.