ADVERTISEMENT

ರಮೇಶ ಜಾರಕಿಹೊಳಿ ರಕ್ಷಣೆಗೆ ಬೊಮ್ಮಾಯಿ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 23 ಮೇ 2021, 15:07 IST
Last Updated 23 ಮೇ 2021, 15:07 IST
ರಮೇಶ್‌ ಜಾರಕಿಹೊಳಿ
ರಮೇಶ್‌ ಜಾರಕಿಹೊಳಿ    

ಹುಬ್ಬಳ್ಳಿ: ಸಿಡಿ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಶಾಸಕ ರಮೇಶ ಜಾರಕಿಹೊಳಿ ಗೋಪ್ಯವಾಗಿ ಹುಬ್ಬಳ್ಳಿಯಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿದ್ದಾರೆ. ಇದು ಹಲವು ಸಂಶಯಗಳಿಗೆ ಕಾರಣವಾಗಿದ್ದು, ಗೃಹ ಸಚಿವರೇ ರಮೇಶ ರಕ್ಷಣೆಗೆ ನಿಂತಿದ್ದಾರೆ ಎಂದು ಜಿಲ್ಲೆಯ ಕಾಂಗ್ರೆಸ್‌ ಪ್ರಮುಖರು ಆರೋಪಿಸಿದ್ದಾರೆ.

ಶಾಸಕರಾದ ಪ್ರಸಾದ ಅಬ್ಬಯ್ಯ, ಶ್ರೀನಿವಾಸ ಮಾನೆ, ಕುಸುಮಾವತಿ ಶಿವಳ್ಳಿ, ಧಾರವಾಡ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ ಕುಮಾರ್ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಹಾಗೂ ಮುಖಂಡ ಸದಾನಂದ ಡಂಗನವರ ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

‘ಆರೋಪಿ ಸ್ಥಾನದಲ್ಲಿರುವ ರಮೇಶ ಜಾರಕಿಹೊಳಿ, ಬೊಮ್ಮಾಯಿ ನಿವಾಸದಲ್ಲಿ ಸುಮಾರು ಎರಡು ಗಂಟೆಗಳ ಕಾಲ ಗೋಪ್ಯ ಸಭೆ ನಡೆಸಿದ್ದಾರೆ. ಗಂಭೀರ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಆರೋಪಿ ಮುಕ್ತವಾಗಿ ಓಡಾಡಿಕೊಂಡಿದ್ದರೂ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಮೇಶನನ್ನು ಬಂಧಿಸದೇ ಮುಕ್ತವಾಗಿ ಓಡಾಡಿಕೊಂಡು ಇರಲು ಅವಕಾಶ ಮಾಡಿಕೊಟ್ಟಿದ್ದು ಸರಿಯೇ’ ಎಂದು ಪ್ರಶ್ನಿಸಿದ್ದಾರೆ.

ADVERTISEMENT

‘ಸಂತ್ರಸ್ತೆ ಯುವತಿಯನ್ನು ಪದೇ ಪದೇ ಕರೆಸಿಕೊಂಡು ವಿಚಾರಣೆಗೊಳಪಡಿಸಿದ ಎಸ್ಐಟಿ ತಂಡ, ರಮೇಶ ಅವರನ್ನು ಕಾಟಾಚಾರಕ್ಕೆ ಎಂಬಂತೆ ಮೂರು ಸಲ ಮಾತ್ರ ವಿಚಾರಣೆಗೆ ಒಳಪಡಿಸಿದೆ. ಎಸ್ಐಟಿ ತಂಡಕ್ಕೆ ಆರೋಪಿಯನ್ನು ಬಂಧಿಸಲು ಸಾಧ್ಯವಾಗದೇ ಇರುವುದನ್ನು ನೋಡಿದರೆ, ಗೃಹ ಸಚಿವರು ಹಾಗೂ ಎಸ್ಐಟಿ ಅಧಿಕಾರಿಗಳ ಕೆಲಸದ ಮೇಲೆ ಅನುಮಾನ ಮೂಡುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.