ADVERTISEMENT

ಕಾಂಗ್ರೆಸ್ ಗೆ ಹಿಂದೂ ಪದವೆಂದರೆ ಅಲರ್ಜಿ: ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 10:00 IST
Last Updated 8 ನವೆಂಬರ್ 2022, 10:00 IST

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರಿಗೆ ಹಿಂದೂ ಪದವೆಂದರೆ ಅಲರ್ಜಿ. ಚರ್ಚೆಯಾಗದ ವಿಷಯಗಳನ್ನು ಚುನಾವಣೆ ಹತ್ತಿರದ ಸಂದರ್ಭದಲ್ಲಿ ತೆಗೆದುಕೊಂಡು ಬರುವುದು ಅವರ ಅಜ್ಞಾನವನ್ನು ತೋರಿಸುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಿಡಿಕಾರಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಹಿಂದೂ ಪರಂಪರೆ ಮತ್ತು ಸಂಸ್ಕೃತಿಯನ್ನು ಟೀಕಿಸಿದಾಗಲೇ ಸಮಾಧಾನವಾಗುತ್ತದೆ. ಹಿಂದೂಗಳ ವಿರೋಧಿ ಎಂದು ತೋರಿಸಿಕೊಂಡು ಅಲ್ಪಸಂಖ್ಯಾತರನ್ನು ಓಲೈಸಿ ಅವರ ಮತಗಳನ್ನು ಸೆಳೆಯುವ ಸಲುವಾಗಿ ಕಾಂಗ್ರೆಸ್ ನವರು ಈ ತರಹದ ಕೆಲಸ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಹುಲ್‌ ಗಾಂಧಿ ತಾವು ಹಿಂದೂ ಎಂದು ಹೇಳುತ್ತಾರೆ. ಜನಿವಾರ ತೋರಿಸುತ್ತಾರೆ. ಇತ್ತಿಚೆಗೆ ಅವರಿಗೆ ಹಿಂದೂಗಳ ಮತಗಳು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಅವರೇ ಹಿಂದೂ ಎಂಬುದನ್ನು ಪ್ರಾರಂಭ ಮಾಡಿದ್ದಾರೆ. ಹಿಂದೂ ಪದದ ಬಗ್ಗೆ ಚರ್ಚೆ ಮಾಡುವುದೇ ಅನವಶ್ಯಕ. ಹಿಂದೂಗಳ ಭಾವನೆಗಳಿಗೆ ದಕ್ಕೆ ತರುವ ಕೆಲಸ ಆಗುತ್ತಿದೆ. ಇದು ಸರಿಯಲ್ಲ. ಒಂದು ವೇಳೆ ಸತೀಶ ಜಾರಕಿಹೊಳಿ ಹಿಂದೂ ಬಗ್ಗೆ ಹೇಳಿಕೆ ನೀಡಿರುವುದು ವೈಯಕ್ತಿಕವಾಗಿದ್ದರೇ ಅವರನ್ನು ಪಕ್ಷದಿಂದ ತೆಗೆದು ಹಾಕುತ್ತಾರೆಯೇ ಎಂದು ಪ್ರಶ್ನೆ ಮಾಡಿದರು‌.

ADVERTISEMENT

ಸತೀಶ ಜಾರಕಿಹೊಳಿ ಒಬ್ಬ ಕಾರ್ಯಕರ್ತರಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾರೆ. ಇದೆಲ್ಲ ಅಲ್ಪಸಂಖ್ಯಾತರನ್ನು ಓಲೈಸುವ ಹುನ್ನಾರ ಆಗಿದೆ. ಇದರಿಂದ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಅಧೋಗತಿಗೆ ಹೋಗುತ್ತಿದೆ‌ ಎಂದು ಹೇಳಿದರು.

ಸಚಿವ ಬೈರತಿ ಬಸವರಾಜ ಮೇಲೆ ಬಂದಿರುವ ಭ್ರಷ್ಟಾಚಾರ ಆರೋಪದ ಕುರಿತು ಮಾತನಾಡಿದ ಅವರು, ಯಾರೇ ಆಗಲಿ ತಪ್ಪು ಮಾಡಿದರೆ ಕ್ರಮ ಆಗಬೇಕು. ಇದೀಗ ಲಂಚದ ಆರೋಪ ಬಂದಾಗ ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆ ಆಗಲಿ. ಕೇವಲ ಹಿಟ್ ಆ್ಯಂಡ್ ರನ್ ಆಗಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.