
ಜಗದೀಶ ಶೆಟ್ಟರ್
ಹುಬ್ಬಳ್ಳಿ: ‘ಕಾಂಗ್ರೆಸ್ ಪಕ್ಷದ ಕೆಲವು ಮಿತ್ರ ಪಕ್ಷಗಳು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಮೇಲಿನ ವಿಶ್ವಾಸ ಕಳೆದುಕೊಂಡಂತಿವೆ. ಇದಕ್ಕಾಗಿಯೇ ಆರ್‌ಜೆಡಿ ಶಾಸಕರು ಎನ್‌ಡಿಎ ಸೇರ್ಪಡೆಯಾಗುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ ಗಾಂಧಿ ಮಾತಿಗೆ ಸಿಗುತ್ತಿಲ್ಲ ಎಂದು ಕೇರಳದಲ್ಲಿ ಕೂಡಾ ಕೆಲವು ಶಾಸಕರು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಾರೆ, ನಾಯಕತ್ವ ಬದಲಾವಣೆಯಾದರೆ ಮಾತ್ರ ಕಾಂಗ್ರೆಸ್ ಪಕ್ಷವು ಮುಂದಿನ ದಿನಗಳಲ್ಲಿ ಉಸಿರಾಡಬಹುದು’ ಎಂದರು.
‘ಕೇಂದ್ರ ಸರ್ಕಾರದ ಯೋಜನೆಗಳು ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದು ಆಗಿರುವುದಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದೇಶದಲ್ಲಿರುವ ವಿಮಾನ ನಿಲ್ದಾಣ ಮತ್ತು ಕಚೇರಿಗಳಿಗೆ ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರು ಹೆಸರಿಡಲಾಗಿತ್ತು. ಎನ್‌ಡಿಎ ಅಧಿಕಾರ ಅವಧಿಯಲ್ಲಿ ವ್ಯಕ್ತಿಯ ಹೆಸರು ನಾಮಕರಣ ಮಾಡಿಲ್ಲ. ನರೇಗಾ ಯೋಜನೆಗೆ ಬಾಪೂಜಿ ಎಂದು ಹೆಸರಿಡಲಾಗಿದೆ’ ಎಂದು ಹೇಳಿದರು.
ಕುಸಿದ ಆಡಳಿತ: ರಾಜ್ಯದಲ್ಲೂ ಕಾಂಗ್ರೆಸ್ ಸರ್ಕಾರದ ದಿನನಿತ್ಯದ ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಪಕ್ಷದೊಳಗೆ ಅಧಿಕಾರಕ್ಕಾಗಿ ಬಹಿರಂಗವಾಗಿ ಪೈಪೋಟಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಯತೀಂದ್ರ ಅವರು ಪದೆಪದೇ ಹೇಳುತ್ತಿದ್ದಾರೆ. ಹೀಗೆ ಹೇಳುವ ಅಗತ್ಯ ಇದೆಯೇ? ಎಂದು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದರೂ ಅಧಿಕಾರ ಹಂಚಿಕೆಯ ಕಿತ್ತಾಟ ಶಮನಗೊಂಡಿಲ್ಲ. ಪ್ರತ್ಯೇಕ ಬಣದಲ್ಲಿ ಊಟಕ್ಕೆ ಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಇಲ್ಲ ಎನ್ನುವುದಕ್ಕೆ ಸಾಧ್ಯವೆ ಇಲ್ಲ ಎಂದು ಹೇಳಿದರು.
ಉ.ಕ.ಭಾಗಕ್ಕೆ ಅನ್ಯಾಯ: ಅಭಿವೃದ್ಧಿ ವಿಷಯದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸ್ವತಃ ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ. ವಾಸ್ತವ ಪರಿಸ್ಥಿತಿ ನೋಡಿಕೊಳ್ಳದೆ, ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುವುದನ್ನು ರಾಜ್ಯ ಕಾಂಗ್ರೆಸ್ ಮುಖಂಡರು ಕೈಬಿಡಬೇಕು ಎಂದರು.
ಯೋಜನೆ ವಿಳಂಬ: ರಾಜ್ಯದ ಖಜಾನೆ ಖಾಲಿ ಆಗಿರುವುದರಿಂದ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಇಲ್ಲದಂತಾಗಿದೆ. ಧಾರವಾಡ– ಬೆಳಗಾವಿ (ವಯಾ ಕಿತ್ತೂರು) ರೈಲು ಮಾರ್ಗದ ಯೋಜನೆಗೆ ಭೂಸ್ವಾಧೀನ ಮಾಡಿಕೊಳ್ಳಲು ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ. ಇದರಿಂದ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.