ನವಲಗುಂದ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಈ ಹಿಂದೆ ಯಾವ ಸರ್ಕಾರಗಳು ನೀಡದಂತಹ ಸೌಲಭ್ಯ ನೀಡುವ ಮೂಲಕ ರಾಜ್ಯದ ಪ್ರತಿಯೊಬ್ಬ ಪ್ರಜೆಗಳಿಗೂ ಸರ್ಕಾರದ ಒಂದಿಲ್ಲೊಂದು ಸೌಲಭ್ಯ ತಲುಪುವಂತೆ ಮಾಡಿದ್ದು, ಸರ್ಕಾರದ ಸಾಧನೆಗಳೇ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಶುಕ್ರವಾರ ಇಲ್ಲಿನ ಅಪ್ಪಾಜಿ ಗಾರ್ಡನ್‌ನಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಲೋಕಸಭಾ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಅತೀ ಹೆಚ್ಚು ಮತಗಳನ್ನು ನೀಡಿದ್ದಾರೆ. ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಎರಡು ಪಟ್ಟು ಮತಗಳು ವಿನೋದ ಅಸೂಟಿಗೆ ದೊರಕಲಿದ್ದು, ಪ್ರತಿಯೊಬ್ಬ ಕಾರ್ಯಕರ್ತರು ಅಸೂಟಿ ಗೆಲುವಿಗೆ ಪಣ ತೊಡಬೇಕು ಎಂದರು.
ಅಭ್ಯರ್ಥಿ ವಿನೋದ ಅಸೂಟಿ ಮಾತನಾಡಿ, ಕಾಂಗ್ರೆಸ್ ಪಕ್ಷ ಅತೀ ಸಾಮಾನ್ಯ ವ್ಯಕ್ತಿಯಾದ ನನ್ನನ್ನು ಗುರುತಿಸಿ ಟಿಕೆಟ್ ನೀಡಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆ ಶೂನ್ಯವಾಗಿವೆ. ಬರೀ ಮಾತಿನ ಭರಾಟೆಯಿಂದ ಬಡವರ ಬದುಕು ಸುಧಾರಿಸಲು ಸಾಧ್ಯವಿಲ್ಲ ಎಂಬುವುದಕ್ಕೆ ಸಾಕ್ಷಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ನೀಡಿದ ಕೊಡುಗೆಗಳು ಜನಮಾನಸದಲ್ಲಿದ್ದು, ಜನಸೇವೆ ಮಾಡಲು ಒಂದು ಅವಕಾಶ ನೀಡುವಂತೆ ಮನವಿ ಮಾಡಿದರು.
ಚುನಾವಣೆ ವೀಕ್ಷಕ ಪ್ರಕಾಶಗೌಡ ಪಾಟೀಲ, ಬಾಪುಗೌಡ ಪಾಟೀಲ, ವಿ.ಪಿ.ಪಾಟೀಲ, ಉಸ್ಮಾನ ಬಬರ್ಚಿ, ವಿಜಯಗೌಡ ಪಾಟೀಲ, ಆರ್.ಎಚ್.ಕೋನರಡ್ಡಿ, ಜೀವನ ಪವಾರ, ಮಂಜು ಜಾಧವ, ಶಾಂತವ್ವ ಗುಜ್ಜಳ್ಳ, ಕೆಂಪೇಗೌಡ ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವರ್ಧಮಾನಗೌಡ ಹಿರೇಗೌಡ್ರ, ಮಂಜು ಮಾಯಣ್ಣವರ, ಜೀವನ ಪವಾರ, ಕಿರಣ ಉಳ್ಳಿಗೇರಿ ಸೇರಿದಂತೆ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.