ADVERTISEMENT

ಸರ್ಕಾರದ 6ನೇ ಗ್ಯಾರಂಟಿ ರೈತರ ಆತ್ಮಹತ್ಯೆ: ಜಿ.ಟಿ. ದೇವೇಗೌಡ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2023, 14:04 IST
Last Updated 13 ಅಕ್ಟೋಬರ್ 2023, 14:04 IST
ಜಿ.ಟಿ.ದೇವೇಗೌಡ
ಜಿ.ಟಿ.ದೇವೇಗೌಡ   

ಧಾರವಾಡ: ‘ಭೀಕರ ಬರಗಾಲ, ವಿದ್ಯುತ್‌ ಸಮಸ್ಯೆಯಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ರೈತರನ್ನು ಕಡೆಗಣಿಸಿದೆ. ರೈತರ ಆತ್ಮಹತ್ಯೆ ಈ ಸರ್ಕಾರದ ಆರನೇ ಗ್ಯಾರಂಟಿ’ ಎಂದು ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ರೈತರಿಗೆ ಕೃಷಿ ಉಪಕರಣ, ಯಂತ್ರಗಳನ್ನು ಒದಗಿಸುವ ಯಂತ್ರಧಾರೆ ಯೋಜನೆಯನ್ನು ರದ್ದುಗೊಳಿಸಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ರಾಜ್ಯ ಸರ್ಕಾರದ ಪಾಲು ರೈತರಿಗೆ ತಲಾ ₹ 4 ಸಾವಿರ ನೆರವನ್ನು ಸ್ಥಗಿತಗೊಳಿಸಿದೆ. ಮಳೆ ಇಲ್ಲದೆ ಬೆಳೆ ಹಾನಿಯಾಗಿದೆ, ಹೀಗಾಗಿ ರೈತರು ಆತ್ಮಹತ್ಯೆ ದಾರಿ ಹಿಡಿಯುವಂತಾಗಿದೆ’ ಎಂದರು.

‘ರಾಜ್ಯದಲ್ಲಿ ಬರಗಾಲ ಇದೆ. 40 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ₹4,800 ಕೋಟಿಯಷ್ಟು ಬೆಳೆ ನಷ್ಟವಾಗಿದೆ ಎಂದು ಸರ್ಕಾರ ವರದಿ ನೀಡಿದೆ. ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಬೆಳೆ ಹಾನಿ ಪ್ರದೇಶಗಳ ವೀಕ್ಷಣೆ ಮತ್ತು ರೈತರ ಭೇಟಿಯಾಗಿಲ್ಲ’ ಎಂದು ಆಪಾದಿಸಿದರು.

ADVERTISEMENT

‘ಈ ಹಿಂದೆ ಕೃಷಿ ಪಂಪ್‌ಸೆಟ್‌ ಏಳು ಗಂಟೆ ತ್ರಿಫೇಸ್‌ ಪೂರೈಸಲಾಗುತ್ತಿತ್ತು. ಆದರೆ, ಈಗ ಎರಡು ಗಂಟೆಯೂ ಪೂರೈಸುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ವಿದ್ಯುತ್‌ ಕೊರತೆಗೆ ಕೇಂದ್ರದ ಕಡೆಗೆ ಬೊಟ್ಟು ಮಾಡಿದ್ದಾರೆ. ಕೇಂದ್ರಕ್ಕೆ ಹಣ ಪಾವತಿಸಿ ವಿದ್ಯುತ್‌ ಖರೀದಿಸಲು ಆಸಕ್ತಿ ತೋರುತ್ತಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಆಡಳಿತ ಚುಕ್ಕಾಣಿ ಹಿಡಿದು ಐದು ತಿಂಗಳಾಗಿದೆ. ಆ ಪಕ್ಷ ಐದು ಗ್ಯಾರಂಟಿ ಕಾರ್ಯಕ್ರಮ ಅನುಷ್ಠಾನ ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ 20 ಸ್ಥಾನ ಗೆಲ್ಲುವುದನ್ನು ಮಾತ್ರ ಗುರಿಯಾಗಿಸಿಕೊಂಡಿದೆ. ರಾಜ್ಯದ ಅಭಿವೃದ್ಧಿ ಮರೆತಿದೆ’ ಎಂದು ಟೀಕಿಸಿದರು.

‘ಅನ್ನಭಾಗ್ಯ ಯೋಜನೆಯಡಿ ನೀಡುತ್ತಿರುವ 5 ಕೆ.ಜಿ ಅಕ್ಕಿ ಕೇಂದ್ರ ಸರ್ಕಾರದ ಪಾಲು, ರಾಜ್ಯ ಸರ್ಕಾರದ ಬಾಕಿ 5 ಕೆ.ಜಿ ವಿತರಿಸುತ್ತಿಲ್ಲ. ಬದಲಿಗೆ ಪಡಿತರದಾರರ ಖಾತೆಗೆ ₹ 170 ಪಾವತಿ ಮಾಡಲಾಗುತ್ತಿದೆ. ಅನ್ನಭಾಗ್ಯ ಜಾರಿ ಸಂಪೂರ್ಣ ವಿಫಲವಾಗಿದೆ’ ಎಂದು ದೂರಿದರು.

ಜೆಡಿಎಸ್‌ ಪುನಶ್ಚೇತನ: ‘ಜೆಡಿಎಸ್‌ ಪಕ್ಷದ ಪುನಶ್ಚೇತನ ಪರ್ವ ಹಾಗೂ ಸಂಘಟನೆ ಕಾರ್ಯವನ್ನು ಉತ್ತರ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಭಾಗದಿಂದ ಆರಂಭಿಸಿದ್ದೇವೆ. ಸರ್ಕಾರದ ಲೋಪಗಳನ್ನು ಎತ್ತಿಹಿಡಿಯಲು ಮತ್ತು ಅವುಗಳ ವಿರುದ್ಧ ಹೋರಾಡಲು ಪಕ್ಷ ಸಜ್ಜುಗೊಳಿಸುವ ಕಾರ್ಯದಲ್ಲಿ ತೊಡಗಿದ್ದೇವೆ’ ಎಂದು ಹೇಳಿದರು.

ಎಚ್‌.ಕೆ.ಕುಮಾರಸ್ವಾಮಿ, ಗುರುರಾಜ ಹುಣಸಿಮರದ, ಗಂಗಾಧರ ಮಠ ಇದ್ದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಪಕ್ಷ ಬಿಟ್ಟು ಹೋಗುವುದಿಲ್ಲ. ಆ ಕುರಿತು ಚರ್ಚೆಯೂ ನಡೆದಿಲ್ಲ
ಜಿ.ಟಿ. ದೇವೇಗೌಡ ಜೆಡಿಎಸ್‌ ಕೋರ್‌ ಕಮಿಟಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.