ಹುನಗುಂದ: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಶಕ್ತಿ ಯೋಜನೆ ಅಡಿ ₹500 ಕೋಟಿ ಜನ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಿದ್ದು ವಿಶೇಷವಾಗಿದೆ’ ಎಂದು ಶಾಸಕ ವಿಜಯಾನಂದ ಕಾಶಪ್ಪನವರು ಹೇಳಿದರು.
ಪಟ್ಟಣದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ತಾಲ್ಲೂಕುಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಕಚೇರಿ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ದೇಶದಲ್ಲಿ ಯಾವ ಸರ್ಕಾರವೂ ಇಂತಹ ಮಹತ್ವದ ಪಂಚ ಗ್ಯಾರಂಟಿ ಯೋಜನೆಯನ್ನು ಕೊಟ್ಟಿಲ್ಲ. ಪಂಚ ಗ್ಯಾರಂಟಿ ಯೋಜನೆಗಳು ಎಲ್ಲ ವರ್ಗ ಮತ್ತು ಎಲ್ಲ ಕೋಮೀನ ಫಲಾನುಭವಿಗಳಿಗೆ ನೇರವಾಗಿ ಅವರ ಖಾತೆಯ ತಲುಪಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು’ ಎಂದರು.
‘ಶಕ್ತಿ ಯೋಜನೆಯಡಿ ಹುನಗುಂದ ಮತ್ತು ಇಳಕಲ್ ಅವಳಿ ತಾಲ್ಲೂಕಿನಿಂದ 2,50 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದು, ಇದಕ್ಕೆ ಸರ್ಕಾರ ₹92.78 ಕೋಟಿ ಖರ್ಚು ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಅವಳಿ ತಾಲ್ಲೂಕಿನ 67,728 ಫಲಾನುಭವಿಗಳ ಖಾತೆಗೆ ₹167 ಕೋಟಿ ಜಮಾ ಮಾಡಲಾಗಿದೆ. ಇನ್ನು ಗೃಹ ಜ್ಯೋತಿ ಯೋಜನೆಯಲ್ಲಿ ಅವಳಿ ತಾಲ್ಲೂಕಿನ 70,425 ಕುಟುಂಬಗಳಿಗೆ ₹54.56 ಕೋಟಿ ಮೌಲ್ಯದ ಉಚಿತ ವಿದ್ಯುತ್ ನೀಡಲಾಗಿದೆ. ಯುವನಿಧಿ ಅಡಿಯಲ್ಲಿ 1,350 ನಿರುದ್ಯೋಗಿ ಯುವಕರ ಖಾತೆಗೆ ₹2,62 ಕೋಟಿ ಜಮಾ ಮಾಡಲಾಗಿದೆ’ ಎಂದರು.
ಚಿತ್ತರಗಿ ಸಂಸ್ಥಾನ ಮಠ ಇಳಕಲ್ ಗುರು ಮಹಾಂತ ಶ್ರೀ ಮಾತನಾಡಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಘಟಕದ ಅಧ್ಯಕ್ಷ ಸಾಗರ ತೆಕ್ಕಣ್ಣವರ ಮಾತನಾಡಿ, ‘ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಭರವಸೆಯನ್ನು ಈಡೇರಿಸುವುದಕ್ಕಾಗಿ ಆರಂಭದಲ್ಲಿ ₹36 ಸಾವಿರ ಕೋಟಿ ಹಣ ಮೀಸಲಿಟ್ಟರೆ ಸದ್ಯ ₹52.32 ಸಾವಿರ ಕೋಟಿ ಮೀಸಲಿಡಲಾಗಿದೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ನೂತನ ಅಧ್ಯಕ್ಷ ಮುತ್ತಣ್ಣ ಕಲಗುಡಿ ಮತ್ತು ಮಹಾಂತೇಶ ಹನಮನಾಳ ಅವರು ಅಧಿಕಾರ ಸ್ವೀಕಾರ ಮಾಡಿದರು.
ಪುರಸಭೆಯ ಅಧ್ಯಕ್ಷೆ ಭಾಗ್ಯಶ್ರೀ ರೇವಡಿ, ಇಳಕಲ್ ನಗರಸಭೆಯ ಅಧ್ಯಕ್ಷೆ ಸುಧಾರಾಣಿ ಸಂಗಮ, ಹುನಗುಂದ ಮತ್ತು ಇಳಕಲ್ ತಾಲ್ಲೂಕು ಪಂಚಾಯಿತಿ ಇಒಗಳಾದ ಮುರಳಿಧರ ದೇಶಪಾಂಡೆ, ಸೋಮಲಿಂಗಪ್ಪ ಅಂಟರತಾನಿ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅವಳಿ ತಾಲ್ಲೂಕಿನ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.