ADVERTISEMENT

ಮಹಾನಗರ ಪಾಲಿಕೆ ಚುನಾವಣೆ: ಬೆಳಗಾವಿಗೆ ಸ್ಥಳಾಂತರಗೊಂಡ ಕಾಂಗ್ರೆಸ್ ಸಭೆ

ಹೆಚ್ಚಿದ ಕಾಂಗ್ರೆಸ್‌ ಆಕಾಂಕ್ಷಿಗಳ ದುಂಬಾಲು

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 1:02 IST
Last Updated 21 ಆಗಸ್ಟ್ 2021, 1:02 IST

ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳ ಒತ್ತಡ, ಮನವಿಗಳಿಂದ ಪಾರಾಗಲು ಕಾಂಗ್ರೆಸ್‌ ಪಕ್ಷದ ಚುನಾವಣಾ ಉಸ್ತುವಾರಿಗಳು ಸಭೆಯನ್ನು ಬೆಳಗಾವಿಯಲ್ಲಿ ನಡೆಸಿದ್ದಾರೆ.

82 ವಾರ್ಡ್‌ಗಳ ಪೈಕಿ ಬಹುತೇಕ ವಾರ್ಡ್‌ಗಳ ಟಿಕೆಟ್‌ ಅಂತಿಮಗೊಳಿಸಲಾಗಿದ್ದು, ಸೆಂಟ್ರಲ್‌ ಹಾಗೂ ಪೂರ್ವ ಕ್ಷೇತ್ರದಲ್ಲಿ ಒಂದೇ ವಾರ್ಡ್‌ಗೆ ಹೆಚ್ಚಿನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಈ ಕ್ಷೇತ್ರದಲ್ಲಿ ಪ್ರತಿ ವಾರ್ಡ್‌ಗೆ ಇಬ್ಬರ ಹೆಸರನ್ನು ಕೆಪಿಸಿಸಿಗೆ ಕಳುಹಿಸಲಾಗಿದ್ದು, ಸ್ಥಳೀಯ ನಾಯಕರ ಸಲಹೆ ಮೇರೆಗೆ ಪಕ್ಷದ ಹಿರಿಯರು ಟಿಕೆಟ್ ಅಂತಿಮಗೊಳಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಟಿಕೆಟ್‌ ಆಕಾಂಕ್ಷಿಗಳ ಹಾಗೂ ಮುಂಚೂಣಿ ನಾಯಕರ ಅಹವಾಲು ಆಲಿಸಲು ಗುರುವಾರ ನಗರದ ವಿವಿಧ ಹೋಟೆಲ್‌ಗಳಲ್ಲಿ ಸರಣಿ ಸಭೆಗಳು ನಡೆದಿದ್ದವು. ಸಮಯ ಏರಿದಂತೆಲ್ಲ ಆಕಾಂಕ್ಷಿಗಳ ಭೇಟಿ ಕೂಡ ಹೆಚ್ಚಾಗಿತ್ತು. ಆದ್ದರಿಂದ ಶುಕ್ರವಾರದ ಸಭೆಯಲ್ಲಿ ಸೀಮಿತ ಸಂಖ್ಯೆಯ ನಾಯಕರಿಗಷ್ಟೇ ಮಿತಿಗೊಳಿಸಿ ಬೆಳಗಾವಿಗೆ ಸ್ಥಳಾಂತರ ಮಾಡಲಾಯಿತು. ಅಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ವಿವಿಧ ಬ್ಲಾಕ್‌ ಘಟಕಗಳ ಮುಖಂಡರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು.

ADVERTISEMENT

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಚುನಾವಣೆಗೆ ಪಕ್ಷದ ಸಂಯೋಜಕರಾಗಿರುವ ಆರ್‌. ಧ್ರುವನಾರಾಯಣ, ಉಸ್ತುವಾರಿ ಸಮಿತಿ ಅಧ್ಯಕ್ಷ ಆರ್‌.ವಿ. ದೇಶಪಾಂಡೆ, ಸದಸ್ಯರಾದ ಶಿವಾನಂದ ಪಾಟೀಲ, ತನ್ವೀರ್‌ ಸೇಠ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ,ಸದಾನಂದ ಡಂಗನವರ, ನಾಗರಾಜ ಛಬ್ಬಿ ಸೇರಿದಂತೆ ಕೆಲ ಪ್ರಮುಖರು ಮಾತ್ರ ಪಾಲ್ಗೊಂಡಿದ್ದರು.

ವಾಗ್ವಾದ: ಟಿಕೆಟ್‌ ಅಂತಿಮಕ್ಕೆ ಗುರುವಾರ ನಡೆದ ಸಭೆಯಲ್ಲಿ ಕೆಲ ಮುಖಂಡರ ನಡುವೆ ಮಾತಿನ ವಾಗ್ವಾದ ನಡೆದಿದೆ.

ಪಕ್ಷಕ್ಕಾಗಿ ದುಡಿದವರಿಗೆ ಮತ್ತು ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್‌ ಕೊಡಬೇಕು ಎಂದು ದೀಪಾ ಗೌರಿ ಆಗ್ರಹಿಸಿದ್ದಾರೆ. ಯಾವ ಸಮುದಾಯದ ಜನ ವಾರ್ಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಅವರಿಗೆ ಟಿಕೆಟ್‌ ಕೊಡಬೇಕು ಎಂದು ಇಸ್ಮಾಯಿಲ್‌ ತಮಟಗಾರ ಒತ್ತಾಯಿಸಿದ್ದಾರೆ. ಈ ವಿಷಯಕ್ಕೆ ಕೆಲ ಹೊತ್ತು ವಾಗ್ವಾದ ನಡೆಯಿತು. ಆಗ ಇಬ್ಬರನ್ನೂ ನಾಯಕರು ಸಮಾಧಾನ ಪಡಿಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಭೆ ಬೆಳಗಾವಿಗೆ ಸ್ಥಳಾಂತರಗೊಂಡಿದ್ದು ಯಾಕೆ?

ನಾವು ಕೇಳುವ ಆಕಾಂಕ್ಷಿಗೇ ಟಿಕೆಟ್‌ ನೀಡಬೇಕೆಂದು ಬೆಂಬಲಿಗರು ಗುರುವಾರ ಹುಬ್ಬಳ್ಳಿಯ ಕ್ಯೂಬಿಕ್ಸ್‌ ಹೋಟೆಲ್‌ ಮುಂದುಗಡೆ ಘೋಷಣೆಗಳನ್ನು ಕೂಗಿ ಆಗ್ರಹಿಸಿದ್ದರು. ಇದೇ ರೀತಿ ಅನೇಕ ಆಕಾಂಕ್ಷಿಗಳ ಬೆಂಬಲಿಗರು ಕೂಡ ಉಸ್ತುವಾರಿಗಳನ್ನು, ಸ್ಥಳೀಯ ನಾಯಕರ ಮೇಲೆ ಒತ್ತಡ ಹೇರಿದ್ದರು. ಇನ್ನೂ ಕೆಲವರು ಪಕ್ಷದ ಹಿರಿಯರಿಗೆ ಫೋನ್‌ ಮಾಡಿಸಿ ಶಿಫಾರಸು ಮಾಡಿಸಿದ್ದರು.

ಮುಂಚೂಣಿ ನಾಯಕರಿಗಷ್ಟೇ ಚುನಾವಣಾ ಉಸ್ತುವಾರಿಗಳನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತಾದರೂ, ಆಕಾಂಕ್ಷಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದರಿಂದ ಆರ್‌.ವಿ. ದೇಶಪಾಂಡೆ ಅವರು ಗರಂ ಆಗಿದ್ದರು. ಈ ಕಾರಣಕ್ಕಾಗಿಯೇ ಸಭೆಯನ್ನು ಹುಬ್ಬಳ್ಳಿಯಿಂದ ಬೆಳಗಾವಿಗೆ ಸ್ಥಳಾಂತರ ಮಾಡಲಾಯಿತು ಎಂದು ಮೂಲಗಳು ಖಚಿತಪಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.