ADVERTISEMENT

ಹುಬ್ಬಳ್ಳಿ: ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಕಾಂಗ್ರೆಸ್ ಕಾರ್ಯಕರ್ತರಿಂದ ರಸ್ತೆಯಲ್ಲಿ ಚಹಾ ಮಾಡಿ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 13:46 IST
Last Updated 22 ಜುಲೈ 2021, 13:46 IST
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಹುಬ್ಬಳ್ಳಿಯ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಗುರುವಾರ ಸಾಯಿನಗರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದರು  – ಪ್ರಜಾವಾಣಿ ಚಿತ್ರ
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಹುಬ್ಬಳ್ಳಿಯ ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಗುರುವಾರ ಸಾಯಿನಗರ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದರು  – ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಉಣಕಲ್ ಬ್ಲಾಕ್ ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತರು ನಗರದ ಸಾಯಿನಗರ ಕ್ರಾಸ್‌ನಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು, ರಸ್ತೆಯಲ್ಲಿ ಒಲೆ ಹಚ್ಚಿ ಚಹಾ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ನಾಗರಾಜ್ ಗೌರಿ ಮಾತನಾಡಿ, ‘ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದಾಗಿ ಸರಿಯಾದ ಉದ್ಯೋಗವಿಲ್ಲದೆ ಜನ ತತ್ತರಿಸಿದ್ದಾರೆ. ಇಂತಹ ಸಂದರ್ಭದಲ್ಲಿ ದಿನೇ ದಿನೇ ಏರಿಕೆಯಾಗುತ್ತಿರುವ ಅಗತ್ಯ ವಸ್ತುಗಳ ಬೆಲೆಯು ಗಾಯದ ಮೇಲೆ ಬರೆ ಎಳೆದಂತಾಗಿದೆ. ತೈಲ, ಅಡುಗೆ ಅನಿಲ, ಅಡುಗೆ ಎಣ್ಣೆ, ಹಾಲು, ತುಪ್ಪ, ಬೇಳೆ ಸೇರಿದಂತೆ ದಿನಸಿ ಸಾಮಗ್ರಿಗಳ ಬೆಲೆ ಗಗನಮುಖಿಯಾಗಿದೆ’ ಎಂದರು.

‘ಜನ ಸಂಕಷ್ಟದಲ್ಲಿರುವಾಗ ಬೆಲೆ ಇಳಿಕೆ ಮಾಡಿ ಅನುಕೂಲ ಮಾಡಿಕೊಡಬೇಕಾಗಿದ್ದ ಸರ್ಕಾರ, ಬೆಲೆ ಏರಿಕೆ ಮಾಡಿ ಬಡವರ ಬದುಕನ್ನು ಮತ್ತಷ್ಟು ದುಸ್ತರಗೊಳಿಸಿವೆ. ಇನ್ನಾದರೂ ಅಗತ್ಯ ವಸ್ತುಗಳ ಬೆಲೆ ಇಳಿಕೆಗೆ ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು’ ಎಂದು ಹೇಳಿದರು.

ADVERTISEMENT

ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಾಲಿಕಾರ ಮಾತನಾಡಿ, ‘ಕಾಂಗ್ರೆಸ್ ಅವಧಿಯಲ್ಲಿ ಬೆಲೆ ಏರಿಕೆ ವಿರುದ್ಧ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದಾಗ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಬಿಜೆಪಿಗೆ ಜನರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದರೆ, ಕೂಡಲೇ ಬೆಲೆ ಇಳಿಕೆ ಮಾಡಬೇಕು’ ಎಂದು ಆಗ್ರಹಿಸಿದರು.

ಪಕ್ಷದ ಮುಖಂಡರಾದ ಚೇತನಾ ಲಿಂಗದಾಳ, ಸುಜನ್ ಕಾಕಿ, ಬಾಳಮ್ಮ ಜಂಗಿನವರ್, ಲಕ್ಷ್ಮಿ ಗುತ್ತೆ, ಅಕ್ಕಮ್ಮ ಕಂಬಳಿ, ಶಶಿಕಲಾ ಹಾಳ್ಯಾಳ, ಸುಧಾ ಕಮದೊಡ್ಡ, ಕಲಾವತಿ ಧಟ್ಟವಡಿ, ಸುಮಾ ಮಾಳಗಿ, ಬಿಬಿಜಾನ್ ನದಾಫ, ದೀಪಾ ವಿ.ಬಿ, ಲಲಿತಾ ಹಾಗೂ ಮನೀಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.