ADVERTISEMENT

ಮೌಲ್ಯಾಧಾರಿತ ಸಮಾಜ ನಿರ್ಮಿಸಿ: ಡಾ. ಸಿ. ಬಸವರಾಜು

ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2022, 6:41 IST
Last Updated 1 ನವೆಂಬರ್ 2022, 6:41 IST

ಹುಬ್ಬಳ್ಳಿ: ‘ಅಸ್ಪೃಶ್ಯತೆ, ಲಿಂಗ ತಾರತಮ್ಯ, ಭ್ರಷ್ಟಾಚಾರದಂತಹ ಅನಿಷ್ಟಗಳು ಸಮಾಜವನ್ನು ಅನಾದಿ ಕಾಲದಿಂದ ಬಾಧಿಸುತ್ತಿವೆ. ಸಂಸ್ಕೃತಿ ಮತ್ತು ಸಂಸ್ಕಾರಗಳಿಂದ ಮನುಷ್ಯ ದೂರ ಸರಿಯುತ್ತಿರುವುದು ಇದಕ್ಕೆ ಕಾರಣ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ’ ಎಂದುಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ. ಬಸವರಾಜು ಅಭಿಪ್ರಾಯಪಟ್ಟರು.

ನವನಗರದಲ್ಲಿರುವ ವಿಶ್ವವಿದ್ಯಾಲಯದಲ್ಲಿ ಸೋಮವಾರ ನಡೆದ ಜಾಗೃತಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಏಕತಾ ದಿವಸ್ ಆಚರಣೆಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ರಚನೆಯಾಗಿ 72 ವರ್ಷಗಳಾದರೂ ಸಮಾಜದಲ್ಲಿ ನಿರೀಕ್ಷಿತ ಪರಿವರ್ತನೆಯಾಗಿಲ್ಲ. ಮನುಷ್ಯನ ದುರಾಸೆಯೇ ಭ್ರಷ್ಟಾಚಾರ ಸೇರಿದಂತೆ ಹಲವು ಜ್ವಲಂತ ಸಮಸ್ಯೆಗಳಿಗೆ ಕಾರಣವಾಗಿದೆ’ ಎಂದರು.

‘ಅನಿಷ್ಟ ಪದ್ಧತಿಗಳನ್ನು ನಿಯಂತ್ರಿಸುವ ಹಾಗೂ ಮೌಲ್ಯಯುತ ಸಮಾಜ ನಿರ್ಮಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಅದಕ್ಕಾಗಿ ಶಿಕ್ಷಣದಲ್ಲಿ ಮೌಲ್ಯಗಳನ್ನು ಸೇರಿಸಬೇಕು. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಅದಕ್ಕೆ ಒತ್ತು ನೀಡಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮತ್ತು ಸಮಸಮಾಜದ ನಿರ್ಮಾಣಕ್ಕೆ ಇದು ಸಹಕಾರಿಯಾಗಿದೆ’ ಎಂದು ಹೇಳಿದರು.

ADVERTISEMENT

ಭ್ರಷ್ಟಾಚಾರದ ವಿರುದ್ಧದ ಹೋರಾಟ ಬೆಂಬಲಿಸಲು ಮತ್ತು ಜಾಗೃತ ಭಾರತದ ಪ್ರಾಮಾಣಿಕ ನಿರ್ಮಾತೃಗಳಾಗುವುದಾಗಿ ವಿ.ವಿ ಬೋಧಕರು, ನೌಕರರು ಹಾಗೂ ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿದರು.

ಕುಲಸಚಿವ ಡಾ. ಜಿ.ಬಿ. ಪಾಟೀಲ ಹಾಗೂ ಡಾ. ಅರ್ಚನಾ ಕೆ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.