ADVERTISEMENT

‘ಪೆಟ್ರೋಲ್‌ 100 ನಾಟ್‌ ಔಟ್‌’: ಮುಂದುವರಿದ ಕಾಂಗ್ರೆಸ್ ಪ್ರತಿಭಟನೆ

ಇಂಧನ ದರ ಏರಿಕೆ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದ ಬಿ.ಕೆ. ಹರಿಪ್ರಸಾದ್

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 4:33 IST
Last Updated 14 ಜೂನ್ 2021, 4:33 IST
ಹುಬ್ಬಳ್ಳಿಯ ಕೇಶ್ವಾಪುರದ ರಮೇಶ ಭವನದ ಬಳಿ ಪೆಟ್ರೋಲ್‌ ಬಂಕ್‌ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು
ಹುಬ್ಬಳ್ಳಿಯ ಕೇಶ್ವಾಪುರದ ರಮೇಶ ಭವನದ ಬಳಿ ಪೆಟ್ರೋಲ್‌ ಬಂಕ್‌ ಎದುರು ಕಾಂಗ್ರೆಸ್‌ ಕಾರ್ಯಕರ್ತರು ಭಾನುವಾರ ಪ್ರತಿಭಟನೆ ನಡೆಸಿದರು   

ಹುಬ್ಬಳ್ಳಿ: ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಖಂಡಿಸಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ‘100 ನಾಟ್‌ ಔಟ್‌’ ಪ್ರತಿಭಟನೆ ಮೂರನೇ ದಿನವಾದ ಭಾನುವಾರವೂ ಮುಂದುವರಿಯಿತು. ನಗರದ ಇಂಡಿಪಂಪ್‌, ಆನಂದ ನಗರ, ಕಾರವಾರ ರಸ್ತೆ ಹಾಗೂ ಕೇಶ್ವಾಪುರದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೇಶ್ವಾಪುರದ ರಮೇಶ ಭವನದ ಪೆಟ್ರೋಲ್‌ ಬಂಕ್‌ ಎದುರು ವಿಧಾನ ಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಹರಿಪ್ರಸಾದ್‌ ಮಾತನಾಡಿ, ‘ಕಚ್ಚಾ ತೈಲದ ಬೆಲೆ ಇಳಿಕೆಯಾದರೂ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗುತ್ತಲೇ ಇದೆ. ಯಾವ ರಾಷ್ಟ್ರದಲ್ಲೂ ಈ ನೀತಿಯಿಲ್ಲ. 2014ರಿಂದ 2021ರ ವರೆಗೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ದರ ಹೆಚ್ಚಳ ಮಾಡುತ್ತಲೇ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಮದ್ಯದ ಅಂಗಡಿಯಲ್ಲಿ ₹ 70ಕ್ಕೆ ಬಿಯರ್ ಬಾಟಲ್‌ ದೊರೆಯುತ್ತದೆ. ಆದರೆ, ಪೆಟ್ರೋಲ್‌ ದರ ₹ 100 ದಾಟಿದೆ. ಇನ್ನುಮುಂದೆ ಪೆಟ್ರೋಲ್‌ ಉಪಯೋಗಿಸಬೇಡಿ, ಬಿಯರ್‌ಕುಡಿಯಿರಿ ಎಂದು ಸರ್ಕಾರ ಹೇಳುತ್ತಿದೆ’ ಎಂದು ವ್ಯಂಗ್ಯವಾಡಿದರು.

ಹುಬ್ಬಳ್ಳಿ–ಧಾರವಾಡಮಹಾನಗರ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಪ್ರಮುಖರಾದರಜತ್‌ ಉಳ್ಳಾಗಡ್ಡಿಮಠ, ಅಬ್ದುಲ್‌ಗನಿ ಅಹ್ಮದ್‌ವಲಿ, ಸಮೀರ್‌ ಖಾನ್‌, ರಾಜೇಂದ್ರ ಪಾಟೀಲ, ಸತೀಶ ಮೆಹರವಾಡೆ, ಜ್ಯೋತಿ ವಾಲೀಕಾರ, ಶಾಕೀರ್‌ ಸನದಿ ಇದ್ದರು.

ಮಹಿಳಾ ಕಾಂಗ್ರೆಸ್‌:ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ದೀಪಾ ಗೌರಿ ನೇತೃತ್ವದಲ್ಲಿ ಇಂದಿರಾನಗರ ಹಾಗೂ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್‌ ಕಾರ್ಯಕರ್ತರು ನಗರದ ವಿವಿಧ ಪೆಟ್ರೋಲ್‌ ಬಂಕ್‌ ಎದುರು ಪ್ರತಿಭಟನೆ ನಡೆಸಿದರು.

ಕೂಡಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಮಾಡಿ, ಜನ ಸಾಮಾನ್ಯರ ಸಂಕಷ್ಟಕ್ಕೆನೆರವಾಗಬೇಕು ಎಂದು ಆಗ್ರಹಿಸಿದರು. ಚೇತನಾ ಲಿಂಗದಾಳ, ಬಾಳಮ್ಮ ಜಂಗಿನವರ, ಪ್ರೀತಿ ಜೈನ, ಖೈರುನ್ನೀಸಾ ಧಾರವಾಡ, ಮಂಜುಳಾ ಹೆಬ್ಬಳ್ಳಿ, ಸಲ್ಮಾ ಇದ್ದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.