ADVERTISEMENT

ನನ್ನ ಶಕ್ತಿ ಧಾರೆ ಎರೆವೆ; ತಂದೆ ಹೆಸರು ಉಳಿಸುವೆ: ಮಧು ಬಂಗಾರಪ್ಪ

ಜೆಡಿಎಸ್ ತೊರೆದು ಬೆಂಬಲಿಗರೊಂದಿಗೆ ‘ಕೈ’ ಹಿಡಿದ ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 9:14 IST
Last Updated 30 ಜುಲೈ 2021, 9:14 IST
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ, ಮುಖಂಡರು ಪಕ್ಷದ ಧ್ವಜವನ್ನು ಅವರಿಗೆ ನೀಡಿ ಬರಮಾಡಿಕೊಂಡರು
ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ, ಮುಖಂಡರು ಪಕ್ಷದ ಧ್ವಜವನ್ನು ಅವರಿಗೆ ನೀಡಿ ಬರಮಾಡಿಕೊಂಡರು   

ಹುಬ್ಬಳ್ಳಿ: ‘ಕಾಂಗ್ರೆಸ್ ಪಕ್ಷಕ್ಕೆ ನನ್ನ ಶಕ್ತಿಯನ್ನೆಲ್ಲಾ ಧಾರೆಯೆರೆವೆ. ತಂದೆ ಎಸ್. ಬಂಗಾರಪ್ಪ ಅವರ ಹೆಸರನ್ನು ಉಳಿಸುವಂತಹ ಕೆಲಸ ಮಾಡುವೆ’ ಎಂದುಮಾಜಿ ಶಾಸಕ ಮಧು ಬಂಗಾರಪ್ಪ ಭರವಸೆ ನೀಡಿದರು.

ಹುಬ್ಬಳ್ಳಿಯಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಜೆಡಿಎಸ್ ತೊರೆದುತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿ ಮಾತನಾಡಿದ ಅವರು, ‘ನನಗೆ ಇದ್ದದ್ದು ಒಂದೇ ಪಕ್ಷ. ಅದು ಬಂಗಾರಪ್ಪ ಪಕ್ಷ. ಅವರ ನೆರಳಿನಲ್ಲಿಯೇ ಬೆಳೆದೆ. ನನ್ನ ಮೇಲೆ ನಂಬಿಕೆ ಇಟ್ಟು, ಕಾಂಗ್ರೆಸ್‌ಗೆ ಬರ ಮಾಡಿಕೊಂಡಿರುವವರ ವಿಶ್ವಾಸ ಉಳಿಸುವಂತಹ ಕೆಲಸವನ್ನು ಮಾಡುತ್ತೇನೆ’ ಎಂದರು.

‘ಯಾವುದೇ ಹುದ್ದೆಯ ಆಕಾಂಕ್ಷಿಯಾಗಿ ಪಕ್ಷಕ್ಕೆ ಬಂದಿಲ್ಲ. ತಂದೆ ಹೆಸರಿಗಿಂತ ನನಗೆ ದೊಡ್ಡ ಹುದ್ದೆ ಇಲ್ಲ. ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುವೆ. ಬೇರೆ ಪಕ್ಷಗಳಲ್ಲಿರುವ ತಂದೆಯ ಅನುಯಾಯಿಗಳನ್ನು ಕಾಂಗ್ರೆಸ್‌ಗೆ ಕರೆತರಲು ಶ್ರಮಿಸುವೆ. ಜಾತಿ ತಾಯಿ ಇದ್ದಂತೆ. ಇತರ ತಾಯಂದಿರಿಗೂ ಗೌರವ ಕೊಟ್ಟಾಗ, ನನ್ನ ತಾಯಿ ಗೌರವ ಹೆಚ್ಚಾಗುತ್ತದೆ ಎಂದು ತಂದೆ ಹೇಳುತ್ತಿದ್ದರು. ಸಮುದಾಯದ ದನಿಯನ್ನು ಮುಟ್ಟಿಸಬೇಕಾದವರಿಗೆ ಮುಟ್ಟಿಸುವೆ. ತಂದೆಯಂತೆ, ಜಾತಿ ಮೀರಿ ರಾಜಕಾರಣ ಮಾಡುವೆ’ ಎಂದು ಹೇಳಿದರು.

ADVERTISEMENT

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮಧು ಕಾಂಗ್ರೆಸ್‌ ಸೇರ್ಪಡೆ ಸಂದರ್ಭದಲ್ಲೇ ಶಿವಮೊಗ್ಗದಲ್ಲಿ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾಲ ಮುಗಿಯುತ್ತಾ ಬಂದಿದೆ. ತಂದೆಯ ವಾರಸುದಾರನಾಗಿ, ಭವಿಷ್ಯದ ನಾಯಕನಾಗಿ ಮಧು ಬೆಳೆಯಬೇಕು. ರಾಜ್ಯ ಸುತ್ತಿ ಪಕ್ಷವನ್ನು ಸಂಘಟಿಸಬೇಕು. ಎಸ್. ಬಂಗಾರಪ್ಪ ಅವರಿಂದ ಪಕ್ಷಕ್ಕೆ ಆಗಿದ್ದ ನಷ್ಟವನ್ನು ನೀವು ತುಂಬಬೇಕು’ ಎಂದು ಸಲಹೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಈಶ್ವರ ಖಂಡ್ರೆ, ವಿಧಾನ ಪರಿಷತ್ ವಿರೋಧ ಪಕ್ಷದ ಮುಖಂಡ ಎಸ್.ಆರ್. ಪಾಟೀಲ, ಶಾಸಕರಾದ ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಕೆ.ಎಸ್. ಮುನಿಯಪ್ಪ, ವೀರಣ್ಣ ಮತ್ತಿಕಟ್ಟಿ, ವಿ.ಆರ್. ಸುದರ್ಶನ್, ಐ.ಜಿ. ಸನದಿ, ಹಿಂಡಸಗೇರಿ, ಭೀಮಣ್ಣ ನಾಯ್ಕ, ಅಲ್ಲಂ ವೀರಭದ್ರಪ್ಪ ಮುಂತಾದವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.