
ಹುಬ್ಬಳ್ಳಿ: ‘ಬದುಕು ಪ್ರತಿಯೊಬ್ಬರಿಗೂ ಭಿನ್ನ ಪರೀಕ್ಷೆ ಒಡ್ಡುತ್ತದೆ ಮತ್ತು ಇಲ್ಲಿ ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗುವುದಿಲ್ಲ. ಬದುಕಿನಲ್ಲಿ ಎದುರಾಗುವ ಪರೀಕ್ಷೆಗೆ ಸಾಹಿತ್ಯವೇ ಪಠ್ಯ’ ಎಂದು ಸಾಹಿತಿ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ನಗರದ ಕೊಪ್ಪಿಕರ ರಸ್ತೆಯಲ್ಲಿರುವ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆಯಲ್ಲಿ ಸೋಮವಾರ ನಡೆದ ‘ಕವಿಯೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಹಿಂದಿನ ಕಾಲದ ಸಾಹಿತಿಗಳು ಬಾಡಿಗೆ ಮನೆಯಲ್ಲಿ ಬದುಕುತ್ತಿದ್ದರು. ಅವರ ಬದುಕು ಪಾರದರ್ಶಕವಾಗಿತ್ತು. ಸಮಾಜವು ಅವರ ಮನದ ಭಾಗವೇ ಆಗಿರುತ್ತಿತ್ತು. ಅವರಿಗೆ ಸಮಾಜ – ಖಾಸಗಿ ಎಂಬ ಪರದೆಗಳೇ ಇರಲಿಲ್ಲ. ಅವರ ಬದುಕೇ ನಮಗೆ ಮಾದರಿ’ ಎಂದರು.
‘ವೈದ್ಯಕೀಯಕ್ಕೂ ಸಾಹಿತ್ಯಕ್ಕೂ ಭೇದವಿಲ್ಲ. ಮನುಷ್ಯರ ನೋವನ್ನು ಅರಿಯುವ, ಕಡಿಮೆ ಮಾಡುವ ಉದ್ದೇಶವೇ ಎರಡರದ್ದೂ. ವೈದ್ಯನಾಗಲು ಬೇಕಾದ ಅಧ್ಯಯನದಂತೆಯೇ ಸಾಹಿತ್ಯ ಕೃಷಿಗೂ ಅಧ್ಯಯನ ಅಗತ್ಯ. ಓದದಿದ್ದರೆ ಸಾಹಿತ್ಯ ಹುಟ್ಟುವುದಿಲ್ಲ. ವಾಹನ ಚಾಲನೆ ಕಲಿಯದೇ ಚಾಲಕನಾಗುವುದು ಎಷ್ಟು ಅಪರಾಧವೋ, ಅಷ್ಟೇ ದೊಡ್ಡ ಅಪರಾಧ ಓದಿಕೊಳ್ಳದೇ ಸಾಹಿತ್ಯ ರಚಿಸುವುದು’ ಎಂದು ಸಾಹಿತಿಗೆ ಅಗತ್ಯವಿರುವ ಅಧ್ಯಯನ, ಸಿದ್ಧತೆ ಕುರಿತು ತಿಳಿಸಿದ ಅವರು, ‘ಇಂದಿನ ಕೆಲವು ಬರಹಗಾರರಿಗೆ ಕನ್ನಡದ ಪತ್ರಿಕೆಗಳು, ಸಾಹಿತ್ಯ ಪತ್ರಿಕೆಗಳ ಬಗ್ಗೇ ಅರಿವಿಲ್ಲ’ ಎಂದು ಉದಾಹರಣೆ ಸಹಿತ ಪ್ರಸಂಗವೊಂದನ್ನು ಹಂಚಿಕೊಂಡರು.
ಸಂವಾದ: ‘ಸಿನಿಮಾ ಹಾಡುಗಳು ನನ್ನ ಜೀವನದೃಷ್ಟಿ ಅಲ್ಲ. ಅಲ್ಲಿನ ಸನ್ನಿವೇಶಕ್ಕೆ ಸೂಕ್ತವಾಗುವ ಸಾಹಿತ್ಯ ಬರೆದು ಕೊಡುತ್ತೇನೆ. ನನಗೆ ಒಪ್ಪದ ಕತೆಗೆ ಹಾಡು ಬರೆಯಲು ಒಪ್ಪಿಕೊಳ್ಳುವುದೇ ಇಲ್ಲ’ ಎಂದು ಸಭಿಕರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ನಮ್ಮ ಮನೆಯಲ್ಲಿ ಅಜೀರ್ಣವಾಗುವಷ್ಟು ಸಾಹಿತ್ಯ ವಾತಾವರಣವಿತ್ತು. ದಿನವಿಡೀ ಸಾಹಿತಿಗಳ ಮಾತುಕತೆಗಳು ನಡೆಯುತ್ತಲೇ ಇರುತ್ತಿದ್ದವು. ಅನೇಕ ವಿಚಾರಗಳಲ್ಲಿ ನಮ್ಮ ಮನೆ ಆಧುನಿಕ ಮತ್ತು ಪರಿಪೂರ್ಣ ಆಗಿತ್ತು. ಅದು ನನಗೆ ದೊಡ್ಡವನಾಗುತ್ತಿದ್ದಂತೆ ಅರ್ಥವಾಗುತ್ತಿತ್ತು. ಅಪ್ಪನ ವ್ಯಕ್ತಿತ್ವ ನನ್ನ ಮೇಲೆ ಅಗಾಧ ಪರಿಣಾಮ ಬೀರಿತ್ತು’ ಎಂದು ತಮ್ಮ ಬಾಲ್ಯ, ಮನೆಯ ಪರಿಸರದ ಬಗ್ಗೆ ತಿಳಿಸಿದರು.
ಸಾಹಿತಿಗಳು, ಲೆಕ್ಕ ಪರಿಶೋಧಕರು, ವಕೀಲರು, ಶಿಕ್ಷಕರು, ಯೋಗ ತರಬೇತುದಾರರು, ನಿವೃತ್ತ ರೈಲ್ವೆ ಹಾಗೂ ಬ್ಯಾಂಕ್ ಉದ್ಯೋಗಿಗಳು, ಛಾಯಾಗ್ರಾಹಕರು ಹೀಗೆ ವಿವಿಧ ಕ್ಷೇತ್ರಗಳ ಸಾಹಿತ್ಯಾಸಕ್ತರು ಸಂವಾದದಲ್ಲಿ ಪಾಲ್ಗೊಂಡಿದ್ದರು.
ಜಯಂತ ಕಾಯ್ಕಿಣಿ ಅವರ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸಭಿಕರು ಪುಸ್ತಕಗಳನ್ನು ಖರೀದಿಸಿ ಹಸ್ತಾಕ್ಷರ ಹಾಕಿಸಿಕೊಳ್ಳುವುದಲ್ಲದೆ, ಜನಪ್ರಿಯ ಲೇಖಕನೊಂದಿಗೆ ಸೆಲ್ಫಿಯನ್ನೂ ತೆಗೆದುಕೊಂಡರು.
–––
ಮಕ್ಕಳ ತಲೆಯಲ್ಲಿ ಜಾತಿ ಧರ್ಮದ ವಿಷ ತುಂಬುವುದಕ್ಕಿಂತ ಹೀನಾಯ ಕೆಲಸ ಬೇರೆ ಇಲ್ಲ. ಮನುಷ್ಯ ನಿರ್ಮಿಸಿದ ದರಿದ್ರ ಜಾತಿ ಧರ್ಮವನ್ನು ಮೀರಿದಾಗಲೇ ನಿಜವಾದ ಸಾಹಿತಿ ಕಲೆಗಾರ ಹುಟ್ಟುವುದು
–ಜಯಂತ ಕಾಯ್ಕಿಣಿ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.