ADVERTISEMENT

ಲಾಕ್‌ಡೌನ್: ಬಲಪ್ರಯೋಗ ಮಾಡದಿದ್ದರೆ ನಿಯಂತ್ರಣ ಸಾಧ್ಯವಿಲ್ಲ ಎಂದ ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 12:07 IST
Last Updated 3 ಏಪ್ರಿಲ್ 2020, 12:07 IST
ಜಗದೀಶ ಶೆಟ್ಟರ್ (ಸಂಗ್ರಹ ಚಿತ್ರ)
ಜಗದೀಶ ಶೆಟ್ಟರ್ (ಸಂಗ್ರಹ ಚಿತ್ರ)   

ಧಾರವಾಡ: ‘ಕೋವಿಡ್–19 ಸೋಂಕು ತಡೆಗಟ್ಟಲು ಏಪ್ರಿಲ್14ರವರೆಗೆ ಸ್ವಯಂ ಜನರೇ ನಿಯಂತ್ರಣ ಹೇರಿಕೊಂಡರೆ ಪೊಲೀಸರು ಲಾಠಿ ಎತ್ತುವ ಪ್ರಸಂಗ ಬಾರದು. ಬಲಪ್ರಯೋಗ ಮಾಡದಿದ್ದರೆ ನಿಯಂತ್ರಣ ಸಾಧ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಕಡುಬಡವರಿಗೆ ಹಾಲು ವಿತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಅವರು ಕರೆ ನೀಡಿದ್ದು ಲಾಕ್‌ಡೌನ್ ಅವಧಿಯಲ್ಲಿ ಸ್ವಯಂ ಶಿಸ್ತು ಕಾಪಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕೋವಿಡ್–19 ಹೊಡೆದೋಡಿಸಲು ಶ್ರಮಿಸಬೇಕು. ಇದರಿಂದ ಭವಿಷ್ಯದಲ್ಲಿ ಭಾರತಕ್ಕೆ ಒಳಿತಾಗಲಿದೆ’ ಎಂದರು.

‘ಲಾಕ್‌ಡೌನ್‌ ಎದುರಿಸಲು ಎಲ್ಲಾ ಇಲಾಖೆಗಳು ಪರಸ್ಪರ ಸಹಕಾರದಿಂದ ಉತ್ತಮವಾಗಿ ನಿರ್ವಹಿಸುತ್ತಿವೆ. ಜನ ಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಧಾರವಾಡದಲ್ಲಿ ಈವರೆಗೂ ಒಬ್ಬ ವ್ಯಕ್ತಿಗೆ ಕೋವಿಡ್–19 ಸೋಂಕು ಪತ್ತೆಯಾಗಿತ್ತು. ಇವರಿಗೆ ಚಿಕಿತ್ಸೆ ಮುಂದುವರಿದಿದ್ದು, ಇತ್ತೀಚಿಗೆ ನಡೆಸಿದ ಮತ್ತೊಂದು ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಇವರಿಗೆ ಮತ್ತೊಂದು ಬಾರಿ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ADVERTISEMENT

‘ದೆಹಲಿಯಿಂದ ಬಂದ 34 ಜನರ ಆರೋಗ್ಯ ಕುರಿತು ನಿಗಾ ವಹಿಸಲಾಗಿದೆ. 17 ಜನರ ಪ್ರಯೋಗಾಲಯದ ವರದಿಯಲ್ಲಿ ಸೋಂಕು ಕಂಡುಬಂದಿಲ್ಲ. ಉಳಿದ 17 ಜನರ ವರದಿ ಬರುವುದು ಬಾಕಿ ಇದೆ. ಲಾಕ್‌ಡೌನ್ ಅವಧಿಯಲ್ಲಿ ಕಡು ಬಡವರಿಗೆ ಉಚಿತವಾಗಿ ಹಾಲು ನೀಡಲು ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ಚಾಲನೆ ನೀಡಲಾಗಿದೆ. ಪ್ರತಿ ಕುಟುಂಬಕ್ಕೆ ಅರ್ಧ ಲೀಟರ್‌ನಂತೆ ಹಾಲು ನೀಡುತ್ತಿದ್ದು, ಜಿಲ್ಲೆಗೆ 25 ಸಾವಿರ ಲೀಟರ್ ಮಂಜೂರಾಗಿದೆ. ಕೆಎಂಎಫ್‌ ಮೂಲಕ ನೀಡಲಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚಿಸಿದರೆ, ಈ ಕುಟುಂಬಗಳಿಗೆ ನಿತ್ಯ ತಲಾ ಒಂದು ಲೀಟರ್‌ ಹಾಲು ಕೊಡಲು ಸಾಧ್ಯವಾಗಲಿದೆ’ ಎದು ಶೆಟ್ಟರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.