ADVERTISEMENT

ಭೋವಿ ನಿಗಮದ ಭ್ರಷ್ಟಾಚಾರ ತಡೆಯಿರಿ: ಡಾ. ಟಿ. ತಿಪ್ಪೇರುದ್ರಸ್ವಾಮಿ

ವಡ್ಡೆ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಮೇ 2022, 5:25 IST
Last Updated 3 ಮೇ 2022, 5:25 IST

ಹುಬ್ಬಳ್ಳಿ: ‘ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಸಮುದಾಯದ ಬಡವರಿಗೆ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಅಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು’ ಎಂದು ವಡ್ಡೆ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಡಾ. ಟಿ. ತಿಪ್ಪೇರುದ್ರಸ್ವಾಮಿ ಆಗ್ರಹಿಸಿದರು.

‘ನಿಗಮದಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು, ತಮಗೆ ಬೇಕಾದವರಿಗೆ ಮಾತ್ರ ಸೌಲಭ್ಯಗಳನ್ನು ಕೊಡಿಸುವ ಕೆಲಸ ನಡೆಯುತ್ತಿದೆ. ಇದನ್ನು ಅಧಿಕಾರಿಗಳು ಹಾಗೂ ಸಮುದಾಯದ ಜನಪ್ರತಿನಿಧಿಗಳು ತಡೆಯಬೇಕು’ ಎಂದು ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಸ್ವಯಂ ಉದ್ಯೋಗಕ್ಕೆ ಸಾಲ ವಿತರಣೆ, ಮನೆ ನಿರ್ಮಾಣಕ್ಕೆ ಸಾಲ, ಉಚಿತವಾಗಿ ಕೊಳವೆ ಬಾವಿ ಕೊರೆಯಿಸುವುದು ಸೇರಿದಂತೆ ನಿಗಮದಿಂದ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವುಗಳ ಕುರಿತು ಗ್ರಾಮ ಮಟ್ಟದಲ್ಲಿ ಜನರಿಗೆ ಅರಿವು ಮೂಡಿಸಬೇಕು. ಸೌಲಭ್ಯಗಳು ಅರ್ಹರಿಗಷ್ಟೇ ಸಿಗುವಂತೆ ಮಾಡಬೇಕು’ ಎಂದರು.

ADVERTISEMENT

‘ಪರಿಶಿಷ್ಟ ಜಾತಿ ಸಮುದಾಯವಾದ ಭೋವಿ ಸಮುದಾಯದವರ ಮೇಲೆ ಗ್ರಾಮೀಣ ಭಾಗದಲ್ಲಿ ದೌರ್ಜನ್ಯ ನಡೆಯುತ್ತಿದೆ. ಇಂತಹ ಘಟನೆಗಳು ನಡೆದಾಗ, ಪೊಲೀಸರು ನಿರ್ಲಕ್ಷ್ಯ ಮಾಡದೆ ತಕ್ಷಣ ಪರಿಶಿಷ್ಟ ಜಾತಿ ದೌರ್ಜನ್ಯ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕು. ಆದರೆ, ಹಲವೆಡೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರಕರಣವೇ ದಾಖಲಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಬೋಯಿ ಎಂಬ ಮೀನುಗಾರಿಕಾ ಜಾತಿಯು ಭೋವಿ ಸಮುದಾಯದ ಮೀಸಲಾತಿಯನ್ನು ಕಾನೂನುಬಾಹಿರವಾಗಿ ಪಡೆಯುತ್ತಿದ್ದು, ಈ ಕುರಿತು ಕೆಲ ಜಿಲ್ಲಾಧಿಕಾರಿಗಳಿಗೆ ದೂರು ಕೂಡ ನೀಡಲಾಗಿದೆ. ವಡ್ಡೆ ಸೇನೆಯು ರಾಜ್ಯದಾದ್ಯಂತ ಸಮುದಾಯವನ್ನು ಸಂಘಟಿಸುವ ಕೆಲಸ ಮಾಡುತ್ತಿದೆ’ ಎಂದರು.

ಸೇನೆಯ ಶ್ರೀನಿವಾಸ ಹಳ್ಳೂರು, ಗಿಡಪ್ಪ ಶಿವಳ್ಳಿ, ಆನಂದ ವಡ್ಡರ, ಗೌತಮ್‌ರಾಜ್ ಅರಿವಾಣ ಹಾಗೂ ಬಸವರಾಜ ವಡ್ಡರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.