ADVERTISEMENT

ಪ್ರಜಾ‘ಮತ’ ಚಲಾವಣೆಗೆ ಕ್ಷಣಗಣನೆ, ಮತಗಟ್ಟೆಗಳಲ್ಲಿ ಸಿಬ್ಬಂದಿಯಿಂದ ಸಕಲ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 14:03 IST
Last Updated 22 ಏಪ್ರಿಲ್ 2019, 14:03 IST
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಿಂದ ಮತಯಂತ್ರಗಳೊಂದಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ
ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಶಾಲೆಯಿಂದ ಮತಯಂತ್ರಗಳೊಂದಿಗೆ ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ   

ಹುಬ್ಬಳ್ಳಿ: ಧಾರವಾಡ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ(ಏ.23) ಮತದಾನ ನಡೆಯುವ ಹಿನ್ನೆಲೆಯಲ್ಲಿ, ಪೂರ್ವ ಮತ್ತು ಸೆಂಟ್ರಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಂಡ ಸಿಬ್ಬಂದಿಗೆ ಮತಯಂತ್ರ ಹಾಗೂ ಚುನಾವಣಾ ಸಾಮಾಗ್ರಿ ವಿತರಿಸುವ ಮಸ್ಟರಿಂಗ್ ಕಾರ್ಯ ನಗರದಲ್ಲಿ ಸೋಮವಾರ ನಡೆಯಿತು.

ಲ್ಯಾಮಿಂಗ್ಟನ್ ಶಾಲೆಯಲ್ಲಿ ಸಹಾಯಕ ಚುನಾವಣಾಧಿಕಾರಿ (ಎಆರ್‌ಒ) ಅಶೋಕ ಕಲಘಟಗಿ ನೇತೃತ್ವದಲ್ಲಿ ಪೂರ್ವ ಕ್ಷೇತ್ರದ (72) ಹಾಗೂ ಎಆರ್‌ಒ ಪ್ರಶಾಂತ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ಹುಬ್ಬಳ್ಳಿಯ ಮಹಿಳಾ ವಿದ್ಯಾಪೀಠ ಸಂಸ್ಥೆಯಲ್ಲಿ ಸೆಂಟ್ರಲ್ ಕ್ಷೇತ್ರದ (73) ಮಸ್ಟರಿಂಗ್ ಕೆಲಸಕ್ಕೆ ಬೆಳಿಗ್ಗೆ ಚಾಲನೆ ನೀಡಲಾಯಿತು.

ಚುನಾವಣಾ ಕಾರ್ಯಕ್ಕೆ ನಿಯುಕ್ತಿಕೊಂಡ ಸಿಬ್ಬಂದಿ, ಪೊಲೀಸರು, ಭದ್ರತಾ ಸಿಬ್ಬಂದಿ ಬೆಳಿಗ್ಗೆ 7ರ ಹೊತ್ತಿಗೆ ಮಸ್ಟರಿಂಗ್ ಕೇಂದ್ರಗಳತ್ತ ಬರಲಾರಂಭಿಸಿದರು. ತಮ್ಮ ಮತಗಟ್ಟೆಯ ಬಗ್ಗೆ ಮಾಹಿತಿ ಪಡೆಯುವ ಜತೆಗೆ, ಕಡೆ ಗಳಿಗೆಯ ಗೊಂದಲಗಳನ್ನು ಪರಿಹರಿಸಿಕೊಂಡರು.

ADVERTISEMENT

ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಮತದಾನ ಸಹಾಯಕರು ಹಾಗೂ ಪೊಲೀಸರನ್ನೊಳಗೊಂಡ ಚುನಾವಣಾ ಸಿಬ್ಬಂದಿ, ವಿದ್ಯುನ್ಮಾನ ಮತಯಂತ್ರ (ಇವಿಎಂ), ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್‌ನೊಂದಿಗೆ ತಾವು ನಿಯುಕ್ತಿಗೊಂಡ ಸ್ಥಳಕ್ಕೆ ವಾಹನಗಳಲ್ಲಿ ತೆರಳಿದರು.

ಪೂರ್ವ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 1,008 ಸಿಬ್ಬಂದಿಯನ್ನು 94 ವಾಹನಗಳಲ್ಲಿ ಹಾಗೂ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 1,012 ಸಿಬ್ಬಂದಿಯನ್ನು 96 ವಾಹನಗಳಲ್ಲಿ ನಿಯುಕ್ತಿಗೊಂಡ ಸ್ಥಳಕ್ಕೆ ಕರೆದೊಯ್ಯಲಾಯಿತು.

ಮಸ್ಟರಿಂಗ್ ಕೇಂದ್ರಗಳಲ್ಲಿ ಎಲ್ಲಾ ಸಿಬ್ಬಂದಿಗೆ ಬೆಳಿಗ್ಗೆ ಉಪಾಹಾರ ಮತ್ತು ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.