ADVERTISEMENT

ಮಾಸ್ಕ್‌ ಹಾಕಿದರೆ ಮುಖಮುಖ ನೋಡ್ತಾರೆ!

ಕೊರೊನಾ ಭಯ ತಿಳಿಯಾಗುತ್ತಿದೆ; ಜನರ ಮೊಗದಲ್ಲಿ ಮುಖಗವಸು ಮರೆಯಾಗುತ್ತಿದೆ

ಕೃಷ್ಣಿ ಶಿರೂರ
Published 8 ಫೆಬ್ರುವರಿ 2021, 19:30 IST
Last Updated 8 ಫೆಬ್ರುವರಿ 2021, 19:30 IST
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಾಸ್ಕ್‌ ಇಲ್ಲದೆ ಓಡಾಡುವ ಜನ   ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಾಸ್ಕ್‌ ಇಲ್ಲದೆ ಓಡಾಡುವ ಜನ   ಪ್ರಜಾವಾಣಿ ಚಿತ್ರ: ಗುರು ಹಬೀಬ   

ಹುಬ್ಬಳ್ಳಿ: ಕೊರೊನಾ ಇನ್ನೂ ಶಾಶ್ವತವಾಗಿ ದೂರವಾಗದಿದ್ದರೂ ನಮ್ಮ ಜನರ ಮುಖದ ಮೇಲಿನ ಗವಸು ಮರೆಯಾಗಿದೆ. ಹುಬ್ಬಳ್ಳಿ ಮಹಾನಗರದ ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜು ಕ್ಯಾಂಪಸ್‌ಗಳಲ್ಲಿ, ಬಸ್‌ಗಳಲ್ಲಿ ಒಮ್ಮೆ ದಿಟ್ಟಿಸಿ ನೋಡಿದರೆ ಮಾಸ್ಕ್‌ ತೊಡದವರ ಸಂಖ್ಯೆಯೇ ಹೆಚ್ಚು ಕಾಣಿಸಲಿದೆ.

ಮಾಸ್ಕ್‌ ಧರಿಸುವವರು, ಧರಿಸದೇ ಇದ್ದವರಲ್ಲಿ ಕೆಲವರನ್ನು ಮಾತಿಗೆಳೆದಾಗ ಅಷ್ಟೇ ಕುತೂಹಲಕರ ಸಂಗತಿಗಳು ವ್ಯಕ್ತಗೊಂಡವು.

ಸುರೇಖಾ ಅವರಿಗೆ ತಿಂಗಳಿಗೊಮ್ಮೆಯಾದರೂ ದೂಳಿನ ಅಲರ್ಜಿಯಿಂದ ನೆಗಡಿಯಾಗಿ, ಅದು ಕಫವಾಗಿ, ಕೆಮ್ಮಿಗೆ ದಾರಿ ಮಾಡಿಕೊಟ್ಟು ಹೈರಾಣಾಗಿಸುತ್ತಿತ್ತು.

ADVERTISEMENT

ಕೊರೊನಾ ಭೀತಿ ಮುತ್ತಿಕೊಂಡ ಮೇಲೆ ಅವರಿಗೆ ಅಲರ್ಜಿ, ನೆಗಡಿ ಆಗಲೇ ಇಲ್ವಂತೆ. ಕಾರಣ ಅವರು ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸುತ್ತಿದ್ದಾರೆ.

ಮಾಸ್ಕ್‌ ಧರಿಸದ ರಾಘವೇಂದ್ರ ಅವರಿಗೆ ಮಾಸ್ಕ್‌ ಹಾಕ್ಕೊಳ್ಳೋದು ಅಂದ್ರೆನೆ ಕಿರಿಕಿರಿಯಂತೆ. ‘ನಮಗೆ ಅಡಿಕೆ ಚೀಟ್‌ ಬೇಕೆಬೇಕ್ರಿ. ಅದು ಹಾಕಿದಾಗ ಉಗುಳೊಕೆ ಬಾಳ್‌ ಕಿರಕಿರಿ ಆಗುತ್ತೆ. ಉಸಿರು ಕಟ್‌ದಾಂಗ ಆಗ್ತದೆ’ ಎನ್ನುವ ಮೊದಲೊಮ್ಮೆ ಇವರು ನಿಂತಿದ್ದಲ್ಲೆ ಪಕ್ಕದಲ್ಲಿ ಪಿಚಕ್‌ ಅಂತಾ ಉಗುಳಿ ಬಾಯಲ್ಲಿರೋ ಅಡಿಕಿ ರಸಾನ ಹೊರ ಹಾಕಿದ್ರು.

ನಗರದ ಪ್ರತಿಷ್ಠಿತ ಕಾಲೇಜಿನ ಎದುರು ಸಿಕ್ಕ ಮಾಸ್ಕ್‌ ಧರಿಸದ ವಿದ್ಯಾರ್ಥಿನಿಯೊಬ್ಬರನ್ನು ‘ನಿವ್ಯಾಕೆ ಮಾಸ್ಕ್‌ ಧರಿಸುತ್ತಿಲ್ಲ’ ಎಂದು ಕೇಳಿದ್ದಕ್ಕೆ, ಪ್ರತಿಕ್ರಿಯಿಸದೆ ಅಲ್ಲಿಂದ ಜಾರಿಕೊಂಡರು.

‘ಮಾಸ್ಕ್‌ ಧರಿಸುವುದರಿಂದ ಕೊರೊನಾ ವೈರಸ್‌ ಹರಡುವುದನ್ನು ನಿಯಂತ್ರಿಸುವು ಮಾತ್ರವಲ್ಲದೆ, ಶ್ವಾಸ ಸಂಬಂಧಿ ರೋಗ ಅಂಟಿಕೊಳ್ಳುವುದರಿಂದಲೂ ದೂರ ಇರಬಹುದು. ಕ್ಯಾನ್ಸರ್‌ ರೋಗಿಗಳು ಬಹುಬೇಗ ಸೋಂಕಿಗೆ ಸಂಪರ್ಕ ಪಡೆದುಕೊಳ್ಳುವ ಸಂಭವ ಇರುವುದರಿಂದ ಅವರುಮಾಸ್ಕ್‌ ಇಲ್ಲದೆ ಹೊರಗೆ ಬರಲೇ ಬಾರದು. ಮಾಸ್ಕ್‌ ಧರಿಸುವುದರಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಎನ್ನುವುದನ್ನು ಜನರಿಗೆ ಮನವರಿಕೆಯಾಗಬೇಕಿದೆ’ ಎನ್ನುತ್ತಾರೆ ಕಿಮ್ಸ್‌ನಲ್ಲಿ ಫಿಜಿಸಿಯನ್‌, ಸಹಾಯಕ ಪ್ರಾಧ್ಯಾಪಕರೂ ಆಗಿರುವ ಆಗಿರುವ ಡಾ. ಸಚಿನ್‌ ಹೊಸ್ಕಟ್ಟಿ.

‘ಕೊರೊನಾ ಬಂದ ಮೇಲೆ ಶ್ವಾಸಕೋಶ ಕಾಯಿಲೆಗಳಿಂದ, ದೂಳಿನ ಅಲರ್ಜಿಯಿಂದ ಬಳಲಿ ಆಸ್ಪತ್ರೆಗೆ ಬರುವವರ ಸಂಖ್ಯೆ ಗಣನೀಯವಾಗಿ ಕಮ್ಮಿಯಾಗಿದೆ. ಕೊರೊನಾ ವೈರಸ್‌ನಂತೆ ಮನುಷ್ಯರ ಉಗುಳಿನಿಂದ ಅಪಾಯಕಾರಿ ಬ್ಯಾಕ್ಟಿರಿಯಾಗಳು ಹರಡಲಿವೆ. ಉಗುಳು ಮಣ್ಣಿನಲ್ಲಿ ಸೇರಿ ದೂಳಾಗಿ ಹರಡಿದಾಗ ನಮ್ಮ ದೇಹವನ್ನು ಉಸಿರಿನ ಮೂಲಕ ಸೇರಿಕೊಳ್ಳಲಿವೆ. ಮಕ್ಕಳು ಮಣ್ಣಿನಲ್ಲಿ ಆಟವಾಡುವಾಗಲೂ ಅವರ ಉಸಿರು, ಬಾಯಿಯ ಮೂಲಕ ದೇಹ ಸೇರಿ ಅನಾರೋಗ್ಯಕ್ಕೆ ಕಾರಣವಾಗಲಿದೆ. ಆದ್ದರಿಂದ ಮಾಸ್ಕ್‌ ಅನ್ನು ಯಾವತ್ತೂ ಧರಿಸಿದರೆ ಶ್ವಾಸಕೋಶ ಸಂಬಂಧಿ ಅನಾರೋಗ್ಯ ಸಮಸ್ಯೆಗಳಿಂದ ದೂರವಿರಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.