ADVERTISEMENT

ಕ್ರಿಕೆಟ್‌: ಜನೋಪಂಥರ್‌–ವಿಜಯ ಕ್ಲಬ್‌ ಪಂದ್ಯ ಟೈ

ಕೊನೆಯ ಎಸೆತದಲ್ಲಿ ಎರಡು ರನ್‌ ಅಗತ್ಯವಿದ್ದಾಗ ರನ್‌ ಔಟ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2022, 3:56 IST
Last Updated 26 ಜನವರಿ 2022, 3:56 IST
ಪವನ ಜಲಗಾರ
ಪವನ ಜಲಗಾರ   

ಹುಬ್ಬಳ್ಳಿ: ಕೆಎಸ್‌ಸಿಎ ಧಾರವಾಡ ವಲಯ ಆಯೋಜಿಸಿರುವ ಎರಡನೇ ಡಿವಿಷನ್‌ ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ಗದುಗಿನ ಜನೋಪಂಥರ್‌ ಅಕಾಡೆಮಿ ಮತ್ತು ಬೆಳಗಾವಿಯ ವಿಜಯ ಅಕಾಡೆಮಿ ತಂಡಗಳ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯ ಕಂಡಿತು.

ಇಲ್ಲಿನ ರೈಲ್ವೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುದ್ರಣ ನಗರಿಯ ತಂಡ 41 ಓವರ್‌ಗಳಲ್ಲಿ 241 ರನ್ ಗಳಿಸಿತ್ತು. ನಿಗದಿತ 50 ಓವರ್‌ಗಳಲ್ಲಿ ಬೆಳಗಾವಿಯ ತಂಡ ಕೂಡ ಇಷ್ಟೇ ರನ್‌ಗಳನ್ನು ಗಳಿಸಿತು.

ವಿಜಯ ತಂಡದ ಗೆಲುವಿಗೆ ಕೊನೆಯ ಓವರ್‌ನ ಕೊನೆಯ ಎಸೆತದಲ್ಲಿ ಎರಡು ರನ್‌ ಅಗತ್ಯವಿತ್ತು. ಒಂದು ವಿಕೆಟ್‌ ಮಾತ್ರ ಬಾಕಿ ಉಳಿದಿತ್ತು. ಆಗ ಎರಡು ರನ್‌ ಗಳಿಸಲು ಓಡಿದ ವಿಜಯ ತಂಡದ ಬ್ಯಾಟ್ಸ್‌ಮನ್‌ ರನ್‌ ಔಟ್‌ ಆದರು. ಹೀಗಾಗಿ ಪಂದ್ಯ ಟೈ ಆಗಿ ಉಭಯ ತಂಡಗಳು ತಲಾ ಎರಡು ಅಂಕಗಳನ್ನು ಹಂಚಿಕೊಂಡವು.

ADVERTISEMENT

ಬಿಡಿಕೆ ಜಯಭೇರಿ: ಇಲ್ಲಿನ ರಾಜನಗರದ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ’ಸಿ’ ತಂಡ, ಬೆಳಗಾವಿಯ ನೀನಾ ಸ್ಪೋರ್ಟ್ಸ್‌ ಕ್ಲಬ್‌ ‘ಎ’ ವಿರುದ್ಧ ಆರು ವಿಕೆಟ್‌ಗಳ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ನೀನಾ ಕ್ಲಬ್‌ 35 ಓವರ್‌ಗಳಲ್ಲಿ 136 ರನ್‌ ಗಳಿಸಿತ್ತು. ಬಿಡಿಕೆ ತಂಡದ ಪವನ ಜಲಗಾರ (29ಕ್ಕೆ5) ಪರಿಣಾಮಕಾರಿ ಬೌಲಿಂಗ್ ಮಾಡಿದರು. ಈ ಗುರಿಯನ್ನು ಎದುರಾಳಿ ತಂಡ 31.5 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ತಲುಪಿತು.

ಇನ್ನೊಂದು ಪಂದ್ಯದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢಸ್ವಾಮಿ ಸ್ಪೋರ್ಟ್ಸ್‌ ಕ್ಲಬ್‌ 97 ರನ್‌ಗಳ ಗೆಲುವು ಸಾಧಿಸಿತು. ಮೊದಲು ಬ್ಯಾಟ್‌ ಮಾಡಿ ಈ ತಂಡ 263 ರನ್ ಕಲೆಹಾಕಿತ್ತು. ಸವಾಲಿನ ಗುರಿ ಎದುರು ಪರದಾಡಿದ ಎದುರಾಳಿ ಬೆಳಗಾವಿಯ ಇಂಡಿಯನ್‌ ಬಾಯ್ಸ್‌ 44.4 ಓವರ್‌ಗಳಲ್ಲಿ 166 ರನ್‌ ಗಳಿಸಲಷ್ಟೇ ಶಕ್ತವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.