ADVERTISEMENT

ಬೆಳೆ ವಿಮೆ ಪರಿಹಾರ | ಮಧ್ಯವರ್ತಿಗಳ ಹಾವಳಿ ತಪ್ಪಿಸಿ: ಜೋಶಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2025, 16:11 IST
Last Updated 30 ಜೂನ್ 2025, 16:11 IST
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಉದ್ಯಾನದ ಆವರಣದಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರೈತರನ್ನುದ್ದೇಶಿಸಿ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಪಾಲ್ಗೊಂಡಿದ್ದರು
ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಉದ್ಯಾನದ ಆವರಣದಲ್ಲಿ ಸೋಮವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ರೈತರನ್ನುದ್ದೇಶಿಸಿ ಮಾತನಾಡಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ಜಿಲ್ಲಾಧಿಕಾರಿ ದಿವ್ಯಪ್ರಭು ಪಾಲ್ಗೊಂಡಿದ್ದರು   

ಹುಬ್ಬಳ್ಳಿ: ‘ಧಾರವಾಡ ಜಿಲ್ಲೆಗೆ 2024ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರವೆಂದು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ₹30 ಕೋಟಿ ಪರಿಹಾರ ನೀಡಲು ವಿಮಾ ಕಂಪನಿಗೆ ಕೇಂದ್ರ ಸರ್ಕಾರ ಆದೇಶಿಸಿದೆ. ಮಧ್ಯವರ್ತಿಗಳ ಹಾವಳಿಯಿಲ್ಲದೆ ರೈತರ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ವರ್ಗಾವಣೆಯಾಗಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಸೋಮವಾರ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿರುವ ಸಚಿವರ ಕಚೇರಿ ಎದುರು ಸೋಮವಾರ, ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘2024ರಲ್ಲಿ ಅತಿವೃಷ್ಟಿಯಾದಾಗ ಹೆಸರು ಬೆಳೆ ನಾಶವಾಗಿತ್ತು. ವಿಮೆ ಮಾಡಿಸಿದ ರೈತರಿಗೆ ಮಧ್ಯಂತರ ಪರಿಹಾರವನ್ನಷ್ಟೇ ನೀಡಲಾಗಿತ್ತು. ನಷ್ಟ ಪರಿಹಾರದ ಅಂತಿಮ ವರದಿ ಸಲ್ಲಿಸಿದಾಗ ಅಗ್ರಿಕಲ್ಚರ್‌ ಇನ್ಶುರೆನ್ಸ್‌ ಕಂಪನಿ ಸಮೀಕ್ಷೆ ಪ್ರಕಾರ ವಿಮೆ ನೀಡಲು ಮಾನದಂಡಗಳು ಹೊಂದಾಣಿಕೆಯಾಗುತ್ತಿಲ್ಲ ಎಂದು ನಿರಾಕರಿಸಲಾಗಿತ್ತು. ಸಾಕಷ್ಟು ಚರ್ಚೆಗಳ ನಂತರ ಕಂಪನಿ ವಿಮಾ ಹಣ ಪಾವತಿಸಿಲು ನಿರ್ಧರಿಸಿದೆ’ ಎಂದರು.

‘ಕೆಲವು ಮಧ್ಯವರ್ತಿಗಳು ವಿಮೆಯ ಪ್ರೀಮಿಯಂ ಹಣ ತಾವೇ ಪಾವತಿಸಿದ್ದು, ತಮಗೆ ಹಣ ನೀಡಬೇಕು ಎಂದು ರೈತರನ್ನು ಹಾಗೂ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಹಣ ನೀಡಬಾರದು’ ಎಂದು ಹೇಳಿದರು.

ADVERTISEMENT

‘ವಿಮಾ ಪರಿಹಾರದಲ್ಲಿ ಕುಂದಗೋಳ ತಾಲ್ಲೂಕಿಗೆ ಹೆಚ್ಚಿನ ಪರಿಹಾರ ಸಿಕ್ಕಿದೆ. ಈ ಹಣದಲ್ಲಿ ಶೇ 50ರಷ್ಟು ತಮಗೆ ನೀಡಬೇಕು ಎಂದು ಮಧ್ಯವರ್ತಿಗಳು ಹೇಳುತ್ತಿದ್ದಾರೆ. ಎಲ್ಲ ಹಣ ರೈತರ ಖಾತೆಗೆ ನೇರವಾಗಿ ಪಾವತಿಯಾಗಬೇಕು. ಕಿರುಕುಳ ನೀಡುವ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು’ ಎಂದು ಕುಂದಗೊಳ ಶಾಸಕ ಎಂ.ಆರ್‌. ಪಾಟೀಲ ಹೇಳಿದರು.

ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ ಹಾಗೂ ಹುಬ್ಬಳ್ಳಿ, ಕುಂದಗೋಳ ಭಾಗದ ರೈತರು ಇದ್ದರು.

ಪ್ರಕರಣ ದಾಖಲಿಸಿ: ಜಿಲ್ಲಾಧಿಕಾರಿ
‘ಎಲ್ಲ ಜಿಲ್ಲೆಗಳ ರೈತರಿಗೂ ವಿಮೆ ಹಣ ಬಂದಿತ್ತು. ತಾಂತ್ರಿಕ ಕಾರಣದಿಂದಾಗಿ ನಮ್ಮ ಜಿಲ್ಲೆಗೆ ಬಂದಿರಲಿಲ್ಲ. ಮೂರು–ನಾಲ್ಕು ತಿಂಗಳಿನ ನಿರಂತರ ಪ್ರಯತ್ನದಿಂದ ಇದೀಗ ₹30 ಕೋಟಿ ಹಣ ಬಿಡುಗಡೆಯಾಗುವ ಮಾಹಿತಿ ಸಿಕ್ಕಿದೆ. ಮಧ್ಯವರ್ತಿಗಗಳ ಹಾವಳಿಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ನನಗೆ ಅಥವಾ ಪೊಲೀಸರಿಗೆ ದೂರು ನೀಡಬೇಕು. ಪರಿಶೀಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.