ಹುಬ್ಬಳ್ಳಿ: ‘ಸೈಬರ್ ಅಪರಾಧ ಪ್ರಕರಣಗಳಲ್ಲಿ ಹಿರಿಯ ನಾಗರಿಕರು ಶೇ 40ರಷ್ಟು ವಂಚನೆಗೊಳಗಾಗುತ್ತಿದ್ಧಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆಯಿಂದ ಶೀಘ್ರ ಕಾರ್ಯಾಗಾರ ನಡೆಸಲಾಗುವುದು’ ಎಂದು ಎಸಿಪಿ ಉಮೇಶ ಚಿಕ್ಕಮಠ ಹೇಳಿದರು.
ನಗರದ ನೆಹರೂ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಏರ್ಪಡಿಸಿದ್ದ ಹಿರಿಯ ನಾಗರಿಕರ ರಾಜ್ಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
‘ಬ್ಯಾಂಕಿಂಗ್ ವಂಚನೆ ಪ್ರಕರಣಗಳು ಸಹ ಹೆಚ್ಚುತ್ತಿವೆ. ಹಿರಿಯ ನಾಗರಿಕರು ಜಾಗರೂಕರಾಗಿರಬೇಕು. ನಿಮ್ಮ ಯಾವುದೇ ಸಮಸ್ಯೆಗಳಿದ್ದರೂ ಗಮನಕ್ಕೆ ತಂದರೆ ತಕ್ಷಣ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದರು.
‘ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಅಚ್ಚುಕಟ್ಟಾಗಿ ಕ್ರೀಡಾಕೂಟ ಆಯೋಜಿಸಲಾಗಿದೆ. ವಯಸ್ಸಾದ ನಂತರ ಮನೆಯಲ್ಲಿ ಕೂರದೆ ಇಂತಹ ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಆಗ ಮಾತ್ರ ಆರೋಗ್ಯದಿಂದ ಮತ್ತು ಕ್ರಿಯಾಶೀಲವಾಗಿರಬಹುದು’ ಎಂದು ಹೇಳಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ಎ.ಪಾಟೀಲ ಮಾತನಾಡಿ, ‘ವಿಶ್ವ ಹಿರಿಯ ನಾಗರಿಕರ ದಿನದ ಅಂಗವಾಗಿ ಕಳೆದ 15 ವರ್ಷಗಳಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅ.25 ಮತ್ತು 26ರಂದು ಸಿದ್ಧಾರೂಢ ಮಠದಲ್ಲಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ದಿವ್ಯಪ್ರಭು, ಸಚಿವ ಸಂತೋಷ್ ಲಾಡ್ ಅವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗುವುದು’ ಎಂದು ತಿಳಿಸಿದರು.
ಸಿಪಿಐ ಎಂ.ಎಂ. ತಹಶೀಲ್ದಾರ್, ಹುಬ್ಬಳ್ಳಿ ಶಹರ ವಲಯದ ದೈಹಿಕ ಶಿಕ್ಷಣ ಅಧಿಕಾರಿ ಶಿವಾನಂದ ಗುಂಡಾರ ಮಾತನಾಡಿದರು.
ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಸೇರಿದಂತೆ ವಿವಿಧ ಜಿಲ್ಲೆಗಳ 135 ಹಿರಿಯ ನಾಗರಿಕರು ಭಾಗವಹಿಸಿದ್ದರು. 60ರಿಂದ70, 70–80. 80–90 ಮತ್ತು 90ಕ್ಕಿಂತ ಹೆಚ್ಚು ವಯೋಮಾನದವರ ವಿಭಾಗದಲ್ಲಿ ಕ್ರೀಡಾಪಟುಗಳು ಭಾಗವಹಿಸಿದ್ದರು.
90ಕ್ಕಿಂತ ಹೆಚ್ಚು ವಯೋಮಾನದವರ ವಿಭಾಗದಲ್ಲಿ ಐದು ಜನ ಭಾಗವಹಿಸಿದ್ದರು. ಈ ವಿಭಾಗದ ಗುಂಡು ಎಸೆತ, ಚಕ್ರ ಎಸೆತ, ಜಾವೆಲಿನ್ ಥ್ರೋ ಸ್ಪರ್ಧೆಗಳಲ್ಲಿ ಪವಾಡಯ್ಯ ಬಿ. ಹಿರೇಮಠ, ಡಿ.ಎಂ.ನದಾಫ್, ಪಿ.ವಿ.ದೇಶಪಾಂಡೆ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದರು.
ಲಿಂಗರಾಜ ಅಂಗಡಿ, ಪಿ.ಪಿ.ಗಾಯಕವಾಡ, ಡಿ.ಟಿ.ಪಾಟೀಲ, ಸುನಂದಾ ಬೆನ್ನೂರ, ಬಿ.ಐ.ಚಕ್ರಸಾಲಿ, ಎಂ.ಪಿ.ಕುಂಬಾರ, ಪಿ.ಬಿ.ಹಿರೇಮಠ, ರೇಣುಕಾ ನವಲಗುಂದ, ಯು.ಬಿ.ಮಂಗಳೂರಮಠ, ವಿಠ್ಠಲರಾವ್ ಖೈರೆ, ಈರಣ್ಣ ಕಾಡಪ್ಪನವರ, ಹೇಮಗಿರಿ ಪಟ್ಟಣಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.