ADVERTISEMENT

ಹುಷಾರ್... ಮಾನ, ಮರ್ಯಾದೆ ಹರಾಜು: ಮಾಜಿ ಶಾಸಕರ ಪುತ್ರ ವಂಚಕರ ಬಲೆಗೆ

ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್ ತಂದಿಟ್ಟ ಅವಾಂತರ

ನಾಗರಾಜ್ ಬಿ.ಎನ್‌.
Published 22 ಮಾರ್ಚ್ 2021, 4:33 IST
Last Updated 22 ಮಾರ್ಚ್ 2021, 4:33 IST
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌ ಚಿತ್ರ)
ಪ್ರಾತಿನಿಧಿಕ ಚಿತ್ರ (ರಾಯಿಟರ್ಸ್‌ ಚಿತ್ರ)   

ಹುಬ್ಬಳ್ಳಿ: ಅಪರಿಚಿತರು ಅಥವಾ ಸಾಮಾಜಿಕ ಜಾಲತಾಣಗಳಿಂದ ಪರಿಚಯವಾದ ಕೆಲವು ಸ್ನೇಹಿತರ ವಾಟ್ಸ್‌ಆ್ಯಪ್‌ ನಂಬರ್‌ಗಳಿಂದ ವಿಡಿಯೊ‌ ಕಾಲ್ ಬಂದರೆ, ಅದನ್ನು ರಿಸೀವ್ ಮಾಡುವ ಮೊದಲು ಯೋಚಿಸಿ. ಅದು ನಿಮ್ಮ ಮಾನ, ಮರ್ಯಾದೆ ತೆಗೆಯುವ ವಿಡಿಯೊ ಕಾಲ್ ಆಗಿರಬಹುದು! ಜೊತೆಗೆ, ಹಣವನ್ನೂ ಪೀಕಿಸಬಹುದು! ಹುಷಾರ್!!!

ಹೀಗೆ ಅಪರಿಚಿತ ವ್ಯಕ್ತಿಯ ವಿಡಿಯೊ ಕಾಲ್‌ ವಂಚನೆಯ ಬಲೆಗೆ ಮಾಜಿ‌ ಶಾಸಕ ಎನ್.ಎಚ್. ಕೋನರಡ್ಡಿ ಅವರ ಪುತ್ರ ನವೀನ್ ಸಹ ಬಿದ್ದಿದ್ದಾರೆ. ಕೆಲ ದಿನಗಳ ಹಿಂದೆ ಅವರ ವಾಟ್ಸ್‌ಆ್ಯಪ್‌ಗೆ ವಿಡಿಯೊ ಕಾಲ್ ಮಾಡಿದ ವಂಚಕರು, ಅದನ್ನು ಸೇವ್ ಮಾಡಿಕೊಂಡು, ಅವರ ಮುಖಕ್ಕೆ ಬೇರೆ ವ್ಯಕ್ತಿಯ ನಗ್ನ ದೇಹದ ವಿಡಿಯೊ ಜೋಡಿಸಿದ್ದಾರೆ. ನಂತರ, ಹಣಕ್ಕೆ ಬೇಡಿಕೆಯಿಟ್ಟು ಬೆದರಿಸಿ ₹13ಸಾವಿರ ಫೋನ್ ಪೇ ಮಾಡಿಸಿಕೊಂಡಿದ್ದಾರೆ. ವಿಡಿಯೊ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಸೈಬರ್ ಠಾಣೆಯಲ್ಲಿ‌ ನವೀನ್‌ ಪ್ರಕರಣ ದಾಖಲಿಸಿದ್ದಾರೆ.

ಕೆಲವು ದಿನಗಳ ಹಿಂದೆ ಧಾರವಾಡದ ಉದ್ಯಮಿ‌ ಗಜಾನನ ಅವರಿಗೆ ವಾಟ್ಸ್‌ಆ್ಯಪ್‌ಲ್ಲಿ ವಿಡಿಯೊ ಕಾಲ್ ಮಾಡಿದ ಯುವತಿ, ನಗ್ನವಾಗಿ ನಿಂತು, ಅದನ್ನು ವಿಡಿಯೊ ರೆಕಾರ್ಡಿಂಗ್ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ. ಹಣ ನೀಡದಿದ್ದರೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಒಡ್ಡಿದ್ದಳು. ಕೂಡಲೇ‌ ಎಚ್ಚೆತ್ತುಕೊಂಡ ಗಜಾನನ ಸೈಬರ್ ಠಾಣೆಯಲ್ಲಿ‌ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಇತ್ತೀಚೆಗೆ ಇಂತಹ ಏಳೆಂಟು ಪ್ರಕರಣಗಳು ಹುಬ್ಬಳ್ಳಿ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ತಂತ್ರಜ್ಞಾನದ ಮೂಲಕ ಎಲ್ಲೋ ಕೂತು ವಂಚಿಸುವ ಕೃತ್ಯ ಪೊಲೀಸರಿಗೆ ತಲೆ ನೋವು ತರಿಸಿದೆ. ಪ್ರಕರಣದ ಬೆನ್ನಟ್ಟಿ ಬೇರೆ ಬೇರೆ ರಾಜ್ಯಕ್ಕೆ ತೆರಳಿದರೂ, ನಿಖರ‌‌ ಸಾಕ್ಷ್ಯಾಧಾರಗಳು ಸಿಗದೆ ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ಯಾಕೆಂದರೆ, ಆನ್‌ಲೈನ್‌ ವಂಚನೆ ಪ್ರಕರಣಗಳಲ್ಲಿ ಕೆವೈಸಿ (ಆಧಾರ್ ಕಾರ್ಡ್‌, ಪಾನ್‌ ಕಾರ್ಡ್‌) ದಾಖಲೆಗಳು ನಿಖರವಾಗಿ ಸಿಗುವುದಿಲ್ಲ.

‘ಫೇಸ್‌ಬುಕ್‌, ಇನ್‌ಸ್ಟಾಗ್ರಾಮ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯ ಮಾಡಿಕೊಳ್ಳುವ ವಂಚಕರು, ನಿಧಾನವಾಗಿ ವಿಶ್ವಾಸ ಗಳಿಸಿ ವಾಟ್ಸ್‌ಆ್ಯಪ್‌ ನಂಬರ್ ಪಡೆದು ಚಾಟ್ ಮಾಡುತ್ತಾರೆ. ವಂಚಕರ ವಿಶ್ವಾಸ ಸ್ನೇಹಕ್ಕೆ ಬದಲಾಗುತ್ತದೆ. ಈ ಸಂದರ್ಭದಲ್ಲಿ ಅವರು ನಗ್ನವಾಗಿ ವಿಡಿಯೊ ಕಾಲ್ ಮಾಡಿ, ವ್ಯಕ್ತಿಯನ್ನು ಪ್ರಚೋದಿಸಿ, ಅದನ್ನು ವಿಡಿಯೊ ಮಾಡಿಕೊಳ್ಳುತ್ತಾರೆ. ಕೆಲವರು ವ್ಯಕ್ತಿಯ ಮುಖಕ್ಕೆ ನಗ್ನ ದೇಹ ಜೋಡಿಸಿ, ವೈರಲ್ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ’ ಎಂದು ಸೈಬರ್ ಠಾಣೆ ಪಿಎಸ್‌ಐ ರಾಘವೇಂದ್ರ ಗೊರ್ಲ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇಂತಹ ಆನ್‌ಲೈನ್‌ ವಂಚನೆ ಪ್ರಕರಣಗಳು ಫೋನ್‌ಪೇ, ಗೂಗಲ್ ಪೇನಲ್ಲಿಯೇ ಹೆಚ್ಚಾಗಿ ನಡೆಯುತ್ತಿವೆ. ವಂಚಕರ ಫೋನ್‌ ಪೇ, ಗೂಗಲ್ ಪೇ ನಂಬರ್ ಜಾಡು ಹಿಡಿದು ಹೊರಟರೆ, ನಮಗೆ ಆ ಕಂಪನಿಗಳಿಂದ ಕೇವಲ ಹಣದ ವಹಿವಾಟಿನ ದಾಖಲೆಗಳಷ್ಟೇ ದೊರೆಯುತ್ತವೆ. ಅದಕ್ಕೆ ಸಂಬಂಧಿಸಿದ ಕೆವೈಸಿಯ ಯಾವ ದಾಖಲೆಗಳೂ ಸಿಗುವುದಿಲ್ಲ. ಇದರಿಂದ ವಂಚಕರ ಜಾಲ ಭೇದಿಸುವುದು ಕಷ್ಟ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.